ಗೋರೆಗಾಂವ್: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಗೋರೆಗಾಂವ್ ಸ್ಥಳೀಯ ಕಚೇರಿ ಹಾಗೂ ಲಾಡ್ಜ್ ಮದರ್ ಇಂಡಿಯಾ 110ನೇ ಸಂಸ್ಥೆ ವತಿಯಿಂದ ಉಚಿತ ನೇತ್ರ ಪರೀಕ್ಷೆ ಮತ್ತು ರಕ್ತದೊತ್ತಡ ಪರೀಕ್ಷೆ ಶಿಬಿರವನ್ನು ಮಾ. 20ರಂದು ಬೆಳಗ್ಗೆ 10ರಿಂದ ಸ್ಥಳೀಯ ಕಚೇರಿಯಲ್ಲಿ ಆಯೋಜಿಸಲಾಯಿತು.
ಗುರು ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಲ್ಲವರ ಅಸೋಸಿಯೇಶನ್ ಉಪಾಧ್ಯಕ್ಷೆ ಜಯಂತಿ ಉಳ್ಳಾಲ್ ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು.
ಲಾಡ್ಜ್ ಮದರ್ ಇಂಡಿಯಾ 110ನೇ ಸಂಸ್ಥೆಯ ಪ್ರತಿನಿಧಿ ಸಂತೋಷ್ ಹೆಗ್ಡೆ ಮಾತನಾಡಿ, ಸಮಾನ ಮನಸ್ಕರು ಸೇರಿ ಉತ್ತಮ ಉದ್ದೇಶಕ್ಕಾಗಿ ಈ ಸಂಸ್ಥೆ ಸ್ಥಾಪನೆ ಮಾಡಿದರು. ಜಾತಿ, ಧರ್ಮ ಅಂತಸ್ತು ಮೀರಿ ನಾವು ಮನುಷ್ಯರು ಎನ್ನುವ ಏಕೈಕ ಭಾವನೆ ನಮ್ಮಲ್ಲಿರಬೇಕು. ಇನ್ನೊಬ್ಬರ ನೋವಿಗೆ ಸ್ಪಂದಿಸಿ ಅವರಿಗೆ ನಮ್ಮಿಂದಾದ ಸಹಕಾರ ನೀಡುವ ಮೂಲಕ ಸಮಾಜಕ್ಕೆ ಪ್ರಯೋಜನ ಆಗುವ ರೀತಿ ಬದುಕಬೇಕು. ದೇವರ ಅಸ್ತಿತ್ವದಲ್ಲಿ ನಂಬಿಕೆ ಇಟ್ಟು ಸದ್ಗುಣಗಳನ್ನು ಮೈಗೂಡಿಸಿಕೊಳ್ಳಬೇಕೆಂದು ತಿಳಿಸಿದರು.
ಸಂಸ್ಥೆಯ ಮಾಜಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಮಾತನಾಡಿ, ಜನಪರ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂದರು. ಪ್ರದಾನ ಕಾರ್ಯದರ್ಶಿ ಹರೀಶ್ ಸಾಲ್ಯಾನ್ ಮಾತನಾಡಿ, ಬೃಹ್ಮಶ್ರೀ ನಾರಾಯಣಗುರುಗಳ ಆದರ್ಶ ಮೈಗೂಡಿಸಿಕೊಳ್ಳ ಬೇಕು. ಯಾವ ಧರ್ಮವಾದರೂ ಮನುಷ್ಯ ಒಳ್ಳೆಯ ವನಾಗಿರಬೇಕು ಎಂದರು.
ಸ್ಥಳೀಯ ಕಚೇರಿಯ ಸಚೀಂದ್ರ ಕೋಟ್ಯಾನ್ ಮಾತನಾಡಿ, ದಾನಗಳಲ್ಲಿ ಶ್ರೇಷ್ಠ ದಾನ ನೇತ್ರ ದಾನ. ಮುಂದಿನ ದಿನಗಳಲ್ಲಿ ನೇತ್ರದಾನ ಶಿಬಿರ ಏರ್ಪಡಿಸುವಂತಾಗಲಿ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕೆಂದು ತಿಳಿಸಿದರು.
ಉಪಾಧ್ಯಕ್ಷ ರಮೇಶ್ ಸುವರ್ಣ, ಕೇಂದ್ರ ಕಚೇರಿಯ ಪ್ರತಿನಿಧಿಗಳಾದ ವಿಶ್ವನಾಥ್ ತೋನ್ಸೆ, ಮೋಹನ್ ಪೂಜಾರಿ, ಬಬಿತಾ ಜೆ. ಕೋಟ್ಯಾನ್, ಜತೆ ಕಾರ್ಯದರ್ಶಿ ಜನಾರ್ದನ್ ಕೋಟ್ಯಾನ್, ಉಪಕಾರ್ಯಾಧ್ಯಕ್ಷ ದಿನೇಶ್ ಪೂಜಾರಿ, ಸಮಿತಿಯ ಸದಸ್ಯರಾದ ವಿಠಲ್ ಎಸ್. ಪೂಜಾರಿ, ಸತೀಶ್ ಕೋಟ್ಯಾನ್, ನವೀನ್ ಪೂಜಾರಿ, ಮಧುಕರ್ ಕೋಟ್ಯಾನ್, ಸುರೇಶ್ ಪೂಜಾರಿ, ಪುಷ್ಪಾ ಅಮೀನ್ ಹಾಗೂ ಲಾಡ್ಜ್ ಮದರ್ ಇಂಡಿಯಾ 110ನೇ ಸಂಸ್ಥೆಯ ಕ್ಲಾರೆನ್ಸ್ ಥೋನೆರ್ ಮೌಲಿಕ್ ಬಟು, ಕರಣ್ ಸಿದ್ವಾನಿ, ಅಲ್ಪಿತ್ ಲ್ಥೋಡಿಯ, ಡಾ| ಗೌತಮ್ ಅರೋರಾ, ಡಾ |ಚೇತನ್ ಅರೋರಾ ಬ್ರದರ್ಸ್ ಮತ್ತು ಡಾ| ಖುಷ್ಬು ಉಪಸ್ಥಿತರಿದ್ದರು. ಖಜಾಂಚಿ ಮೋಹನ್ ಬಿ. ಅಮೀನ್ ಮತ್ತು ಸುಚಲತಾ ಪೂಜಾರಿ ಸಹಕರಿಸಿದರು.
ಸುಮಾರು 47 ಜನರು ಈ ಶಿಬಿರದ ಉಪಯೋಗ ಪಡೆದರು. ಸಚೀಂದ್ರ ಕೋಟ್ಯಾನ್ ನಿರೂಪಿಸಿದರು. ಕಾರ್ಯದರ್ಶಿ ವಿಜಯ್ ಪಾಲನ್ ವಂದಿಸಿದರು.
-ರಮೇಶ್ ಉದ್ಯಾವರ್