Advertisement

ಸಮಾಜ ಸೇವಕರನ್ನು ಗೌರವಿಸಿ: ಹುಲ್ಲೂರ

12:14 PM Jun 10, 2018 | |

ವಿಜಯಪುರ: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವಾ ಚಟುವಟಿಕೆಯಲ್ಲಿ ಸಮಾಜದ ಪರಿವರ್ತನೆಗಾಗಿ ಕ್ರಿಯಾಶೀಲರಾಗಿ ಶ್ರಮಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ. ಎಲೆ ಮರೆ ಕಾಯಿಯಂತೆ ಸಮಾಜಕ್ಕೆ ತಮ್ಮನ್ನು ಮುಡಿಪಾಗಿಸಿರಿಸಿಕೊಂಡ ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸುವುದು ಕೂಡ ಸಮಾಜದ ಹೊಣೆಗಾರಿಕೆ ಎಂದು ಏಡ್ಸ್‌ ಜಾಗೃತಿ ಮಹಿಳಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಮಹಾದೇವಿ ಹುಲ್ಲೂರ ಹೇಳಿದರು.

Advertisement

ಸಿದ್ದೇಶ್ವರ ನಗರದ ಏಡ್ಸ್‌ ಜಾಗೃತಿ ಮಹಿಳಾ ಸಂಘದ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಆರ್ಯಭಟ
ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ವೈದ್ಯ ಡಾ| ಅಮರೇಶ ಮಿಣಜಗಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು, ಎಲೆಮರೆ ಕಾಯಿಯಂತೆ ಯಾವುದೇ ಫಲಾಪೇಕ್ಷೆ ಬಯಸದೇ ದುಡಿಯುವ ಇಂತ ವ್ಯಕ್ತಿಗಳಿಗೆ ನೀಡುವ ಪ್ರಶಸ್ತಿಗಳಿಗೂ ಬೆಲೆ ಬರುವ ಜೊತೆಗೆ, ಸಮಾಜಕ್ಕೂ ಆದರ್ಶಪ್ರಾಯ ಸಂದೇಶ ರವಾನೆಯಾಗುತ್ತದೆ ಎಂದರು.

ಜಗತ್ತಿಗೆ ಸ್ತ್ರೀ ಸಮಾನತೆ ಸ್ವಾತಂತ್ರ್ಯ ನೀಡಿ ಸರ್ವರಿಗೂ ಲೇಸನ್ನೇ ಬಯಸಿದ ವಿಶ್ವಗುರು ಬಸವೇಶ್ವರರ ಆದರ್ಶ
ತತ್ವ ಸಿದ್ಧಾಂತ ಮೈಗೂಡಿಸಿಕೊಂಡಲ್ಲಿ ಸಮಾಜದಲ್ಲಿ ಸಮಾನತೆಯ ಬೀಜ ಬಿತ್ತಲು ಸಾಧ್ಯವಾಗುವುದು. ಮತ್ತೂಂದೆಡೆ ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸಿ ಇನ್ನೂ ಹೆಚ್ಚಿನ ಸಾಧನೆಯಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಿದ್ದು, ಸಮಾಜಕ್ಕೂ ಇದರಿಂದ ನಿರೀಕ್ಷೆ ಮೀರಿ ಉಪಯೋಗ ಆಗಲಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ| ಅಮರೇಶ ಮಿಣಜಗಿ, ಬಾಲ್ಯದಿಂದಲೇ ಬಸವೇಶ್ವರರ ವಿಚಾರಧಾರೆಗೆ ಪ್ರಭಾವಿತರಾಗಿ ಬಸವ ಸಿದ್ಧಾಂತಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ವಚನಗಳು ಕೇವಲ ಶಬ್ದಗಳ ಆಗರವಲ್ಲ, ಮನುಷ್ಯ ಜೀವನಕ್ಕೆ ಆದರ್ಶದ ಬದುಕು ರೂಪಿಸಿಕೊಳ್ಳುವ ಅಂಶಗಳಿವೆ. ಬಸವ ತತ್ವ-ಸಂದೇಶಗಳನ್ನು ಮನೆ, ಮನಕ್ಕೆ ತಲುಪಿಸುವ ಕಾರ್ಯ ನಿರಂತರ ಆಗಬೇಕಿದೆ. ಶಿಸ್ತುಬದ್ಧ ಜೀವಿಗಳಾಗಿದ್ದು ಸ್ವಯಂ ಪ್ರಯತ್ನದಿಂದಲೇ ಸಾಧಿಸುವ ಛಲ ಹೊಂದಿದಾಗ ಮಾತ್ರ ಸಮಾಜದಲ್ಲಿ ಸಾಧಕರಾಗಲು ಸಾಧ್ಯ ಹಾಗೂ ಅಂದುಕೊಂಡ ಗುರಿಯನ್ನೂ ಮುಟ್ಟಲು ಸಾಧ್ಯ ಎಂದರು.

ಎ.ಎಂ. ಸಗರನಾಳ ಮಾತನಾಡಿದರು. ಏಡ್ಸ್‌ ಜಾಗೃತಿ ಮಹಿಳಾ ಸಂಘದ ಜಿಲ್ಲಾ ಘಟಕ ಪ್ರಮುಖರಾದ ಕಸ್ತೂರಿಬಾಯಿ ಪಾಟೀಲ, ಸುನಂದಾ ತೆವರೆಟ್ಟಿ, ಸಂಗೀತಾ ಹೊನ್ನಿಕ್ಯಾಳ, ರವಿ ಬಳಮಕಾರ, ಆನಂದ ಯಾದವ, ಪ್ರಮೋದ ದೊಡ್ಡಮನಿ, ಸುರೇಶ ಕುಮಟಗಿ ವೇದಿಕೆಯಲ್ಲಿದ್ದರು. ಮಹಿಳಾ ಸಂಘದ ಕಾರ್ಯಕರ್ತರು ಜಾನಪದ ಗೀತೆ ಹಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next