Advertisement
ಯಕ್ಷಗಾನದ ಬದಲಾವಣೆ ವೇಗ ಪಡೆದುಕೊಳ್ಳುತ್ತಲೇ ಇದೆ. ಆ ಬದಲಾವಣೆ ಬಹುರೂಪಿಯೂ ಆಗಿದೆ. ಬಹುತೇಕ ಎಲ್ಲವನ್ನೂ ಪ್ರೇಕ್ಷಕರು ಒಪ್ಪಿಕೊಳ್ಳುತ್ತಿದ್ದಾರೆ. ಕೆಲವು ಬದಲಾವಣೆ ಗಳ ಬಗ್ಗೆ ಟೀಕೆಗಳಿವೆಯಾದರೂ ಗಂಭೀರ ಸ್ವರೂಪದಲ್ಲೇನಲ್ಲ.
Related Articles
Advertisement
ಹಿಂದೆ ಇಂಥದ್ದೆಲ್ಲ ಬೇಗ ಸುದ್ದಿಯಾಗುತ್ತಿರಲಿಲ್ಲ. ಆಟಕ್ಕೆ ಹೋದವರು ಮಾತ್ರ ಅದನ್ನು ಕೇಳಿಸಿಕೊಂಡಿರುತ್ತಾರೆ, ಅದೂ ನಿದ್ದೆಗಣ್ಣಿನಲ್ಲಿ ಕೇಳಿದ ತೂಕದ ಮಾತುಗಳು ಸರಿಯಾಗಿ ಅರ್ಥ ವಾಗದಿರುವುದೂ ಇದೆ. ಈಗ ಪರಿಸ್ಥಿತಿ ಬದಲಾಗಿದೆ. ಇಂಥವು ಹೆಚ್ಚು ಮಹತ್ವ ಪಡೆದು ಕೊಳ್ಳುತ್ತವೆ ಹಾಗೂ ಬೇಗನೆ ಬಾಯಿಂದ ಬಾಯಿಗೆ ಹರಡುತ್ತವೆ. ಮಾಧ್ಯಮಗಳ ಮೂಲಕವೂ ಸುದ್ದಿ ಯಾಗುತ್ತಿರುವ ಕಾರಣ ಮಾತಿನಲ್ಲಿ ಎಚ್ಚರ ಅಗತ್ಯ.
ಹಾಗೆ ನೋಡಿದರೆ ಕಲಾವಿದರ ಉತ್ತಮ ಮಾತು ಗಳಿಗೆ ಸಮಾಜ ಹೆಚ್ಚು ಪ್ರತಿಕ್ರಿಯಿಸದೆ ಇದ್ದರೂ ಪರೋಕ್ಷ ಅವಹೇಳನ ಅಥವಾ ದ್ವಂದ್ವಾರ್ಥದ ಮಾತುಗಳಿಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತದೆ.
ರಾಜಕೀಯ, ಜಾತಿ, ಧರ್ಮದ ವಿಷಯದಲ್ಲಿ ಮಾತನಾಡಿ ಎಷ್ಟೋ ಕಲಾವಿದರು ಬೆದರಿಕೆಗೂ ಒಳಗಾದದ್ದಿದೆ. ಜತೆಗೆ ಪ್ರಸಂಗದ ಬಗ್ಗೆಯೂ ಸಮಾಜದಿಂದ ಪ್ರತಿ ರೋಧ ವ್ಯಕ್ತ ವಾದದ್ದಿದೆ. ಹಿಂದಿನ ಕಾಲದಲ್ಲಿ ಪ್ರದರ್ಶನ ಕಂಡ ಎಲ್ಲ ಪ್ರಸಂಗಗಳನ್ನು ಈಗ ಅದೇ ಸ್ಥಿತಿಯಲ್ಲಿ ಪ್ರದರ್ಶನ ನೀಡಲಾದೀತು ಎನ್ನಲೂ ಸಾಧ್ಯವಿಲ್ಲ. ಜನರ ಈಗಿನ ಚಿಂತನೆ ಹಾಗೂ ಪ್ರತಿಕ್ರಿಯೆಯ ರೀತಿ ಬೇರೆಯೇ ಆಗಿದೆ.
ಪಾತ್ರದ ವ್ಯಾಪ್ತಿಯಲ್ಲೇ ಉತ್ತಮ ಸಂದೇಶಗಳನ್ನು ನೀಡಿದರೆ ಆ ಪಾತ್ರದ ಘನತೆ, ಕಲಾವಿದನ ಗೌರವ ಹೆಚ್ಚುತ್ತದೆ. ಆದರೆ ಪ್ರಚಾರ ಹಾಗೂ ಪುಕ್ಕಟೆ ಚಪ್ಪಾಳೆಯ ದೃಷ್ಟಿಯಿಂದ ನಿರ್ದಿಷ್ಟ ಸಮುದಾಯ, ಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾವಿಸುವುದರಿಂದ ಹಾನಿಯೇ ಹೆಚ್ಚು. ಇಂಥ ಸೂಕ್ಷ್ಮ ವಿಷಯ ಹಾಗೂ ವಿವಾದದ ಸಂಗತಿಗಳಿಂದ ಯಕ್ಷಗಾನಕ್ಕೂ ಕಳಂಕ ಎದುರಾದೀತು. ಪ್ರೇಕ್ಷಕರನ್ನು ನಗಿಸಬೇಕು ಎಂದು ವಿವಾದದ ಹಾಗೂ ಕೆಲವರಿಗೆ ಇಷ್ಟವಾಗುವ, ಕೆಲವರಿಗೆ ಕಿರಿಕಿರಿ ಆಗುವಂಥ ವಿಷಯಗಳನ್ನು ಪ್ರಸ್ತಾವಿಸುವುದು ಕಲೆಗೆ ಮಾಡುವ ಅಪಚಾರವಾದೀತು. ಯಕ್ಷಗಾನದ ಮಾತಿಗೆ ಘನತೆಯಿದೆ. ಆ ಮಾತು ಮಥನಕ್ಕೊಳಗಾಗಿ ಸಮಾಜದ ಆರೋಗ್ಯಕ್ಕೆ ಪೂರಕವಾಗುವಂತಿದ್ದರಷ್ಟೇ ಸೊಗಸು.
ನಗಿಸಿದ್ದೆಲ್ಲ ಹಾಸ್ಯವಲ್ಲಹಾಸ್ಯ ಕಲಾವಿದರು ಪ್ರೇಕ್ಷಕರನ್ನು ನಗಿಸಲು ಶಕ್ತಿ ಮೀರಿ ಶ್ರಮಿಸುವಾಗ ಮಾತು ಹಾಗೂ ವಿಷಯದ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಪ್ರೇಕ್ಷಕರನ್ನು ನಗಿಸಿದ್ದೆಲ್ಲವೂ ಹಾಸ್ಯವಲ್ಲ, ಚಪ್ಪಾಳೆ ಗಿಟ್ಟಿಸಿದ್ದೆಲ್ಲವೂ ಪ್ರಶಂಸೆಯೂ ಅಲ್ಲ. ಯಾವ ಸಂದೇಶ ನೀಡುವುದಿದ್ದರೂ, ಯಾವ ರೀತಿಯ ಹಾಸ್ಯ ಪ್ರದರ್ಶನ ನೀಡುವುದಿದ್ದರೂ ಅದು ಯಾರ ಮನಸ್ಸನ್ನೂ ನೋಯಿಸುವಂತಿರಬಾರದು. ಹಾಸ್ಯಕ್ಕೆ ಶ್ರೇಷ್ಠ ಸ್ಥಾನವಿದೆ. ಹಾಸ್ಯ ಮತ್ತು ಅಪಹಾಸ್ಯದ ನಡುವಿನ ವ್ಯತ್ಯಾಸವನ್ನು ಕಲಾವಿದರು ತಿಳಿದುಕೊಂಡಿರುವುದು ಮುಖ್ಯ.ಯಕ್ಷಗಾನಕ್ಕೂ ಸಾಮಾಜಿಕ ನಾಟಕಗಳಿಗೂ ತುಂಬಾ ಅಂತರವಿದೆ ಎಂಬುದನ್ನು ಕಲಾವಿದರು ಮತ್ತು ಮೇಳಗಳ ಮಾಲಕರು ತಿಳಿದು ವ್ಯವಹರಿಸಬೇಕಾಗಿದೆ. ಬದಲಾವಣೆ ಹಾಗೂ ಪ್ರಚಾರದ ಉದ್ದೇಶದಲ್ಲಿ ಯಕ್ಷಗಾನದ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುವುದರಲ್ಲಿ ನಮ್ಮೆಲ್ಲರ ಹೊಣೆಗಾರಿಕೆಯೂ ಇದೆ. ಪುತ್ತಿಗೆ ಪದ್ಮನಾಭ ರೈ