Advertisement

ಹಿರಿಯರಿಗೆ ಮಣೆ‌, ಕಿರಿಯರಿಗೆ ಮನ್ನಣೆ

10:07 AM Jan 12, 2020 | Lakshmi GovindaRaj |

2018ನೇ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಚಿತ್ರ ಪ್ರಶಸ್ತಿ ಶುಕ್ರವಾರ (ಜ. 10) ಘೋಷಣೆಯಾಗಿದೆ. ಹಿರಿಯ ನಿರ್ದೇಶಕ ಜೋ ಸೈಮನ್‌ ನೇತೃತ್ವದ ಆಯ್ಕೆ ಸಮಿತಿ ಸುಮಾರು 162 ಚಿತ್ರಗಳನ್ನ ವೀಕ್ಷಿಸಿ, ಅಂತಿಮವಾಗಿ ಚಿತ್ರಗಳನ್ನು ಪ್ರಶಸ್ತಿ ಪಟ್ಟಿಗೆ ಆಯ್ಕೆ ಮಾಡಿದೆ. ಇದರ ಜೊತೆಗೆ ಹಿರಿಯ ನಿರ್ಮಾಪಕ ಬಸಂತ ಕುಮಾರ್‌ ಪಾಟೀಲ್‌ ನೇತೃತ್ವದ ಆಯ್ಕೆ ಸಮಿತಿ ಜೀವಮಾನ ಸಾಧನೆಗಳ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಯಡಿಯೂರಪ್ಪ ಪ್ರಶಸ್ತಿ ಪ್ರಕಟಿಸಿದ್ದಾರೆ. ಈ ಬಾರಿ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಆಯ್ಕೆಯಾಗಿರುವ ಪುರಸ್ಕೃತರು “ಉದಯವಾಣಿ’ ಜೊತೆ ತಮ್ಮ ಅಭಿಪ್ರಾಯಗಳ ಹಂಚಿಕೊಂಡಿದ್ದಾರೆ.

Advertisement

“ನಾನು “ಅಮ್ಮನ ಮನೆ’ ಚಿತ್ರದಲ್ಲಿ ಮತ್ತೆ ಬಣ್ಣ ಹಚ್ಚುತ್ತೇನೆ ಅಂತಾನೇ ಅಂದುಕೊಂಡಿರಲಿಲ್ಲ. ಈಗ ನಿರೀಕ್ಷಿಸದೆಯೇ ಅದಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಬಂದಿದೆ. ಇಷ್ಟು ವರ್ಷಗಳಲ್ಲಿ ನನ್ನನ್ನು ಹೊರತುಪಡಿಸಿ, ನಮ್ಮ ಕುಟುಂಬದಲ್ಲಿ ಎಲ್ಲರಿಗೂ ಬೇರೆ ಬೇರೆ ಪ್ರಶಸ್ತಿಗಳು ಬಂದಿದ್ದವು. ಈಗ ನನಗೂ ಪ್ರಶಸ್ತಿ ಬರುವ ಮೂಲಕ ಇಡೀ ಕುಟುಂಬದಲ್ಲಿ ಎಲ್ಲರಿಗೂ ಪ್ರಶಸ್ತಿ ಬಂದಂತಾಗಿದೆ. ಅನಿರೀಕ್ಷಿತವಾಗಿ ಇಂಥದ್ದೊಂದು ಪ್ರಶಸ್ತಿ ಹುಡುಕಿಕೊಂಡು ಬಂದಿರುವುದಕ್ಕೆ ತುಂಬ ಖುಷಿಯಾಗುತ್ತಿದೆ.’
-ರಾಘವೇಂದ್ರ ರಾಜಕುಮಾರ್‌, ನಟ

“ನನ್ನ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೆ ಮಾಡಿದ ಚಿತ್ರಗಳಲ್ಲಿ ಅತ್ಯುತ್ತಮ ಎನಿಸಿದ, ನನಗೆ ವೈಯಕ್ತಿಕವಾಗಿ ಅತಿ ಖುಷಿಕೊಟ್ಟ ಸಿನಿಮಾಗಳಲ್ಲಿ “ಆ ಕರಾಳ ರಾತ್ರಿ’ ಕೂಡ ಒಂದು. ಜನ ಇಷ್ಟಪಟ್ಟು ಗೆಲ್ಲಿಸಿದ ಸಿನಿಮಾಕ್ಕೆ ಈಗ ರಾಜ್ಯ ಪ್ರಶಸ್ತಿ ಬಂದಿರುವುದು ಖುಷಿಯನ್ನು ಡಬಲ್‌ ಮಾಡಿದೆ. ಈ ಪ್ರಶಸ್ತಿ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ಸಿನಿಮಾವನ್ನು ಪ್ರಶಸ್ತಿಗೆ ಗುರುತಿಸಿದ ಎಲ್ಲರಿಗೂ ಧನ್ಯವಾದಗಳು.’
-ದಯಾಳ್‌ ಪದ್ಮನಾಭನ್‌, “ಆ ಕರಾಳ ರಾತ್ರಿ’ ಚಿತ್ರದ ನಿರ್ದೇಶಕ

“ಸಾಮಾನ್ಯ ಪ್ರೇಕ್ಷಕನಿಗೆ ಮನರಂಜನೆ ಜೊತೆಗೊಂದು ಮೆಸೇಜ್‌ ಸಿಗಬೇಕು ಎಂಬುದಷ್ಟೆ ನಮ್ಮ “ಒಂದಲ್ಲಾ ಎರಡಲ್ಲಾ’ ಚಿತ್ರದ ಆಶಯವಾಗಿತ್ತು. ಅದರಂತೆ ಸಿನಿಮಾವನ್ನು ಜನ ಸ್ವೀಕರಿಸಿ, ಗೆಲ್ಲಿಸಿದರು. ಜನ ಇಷ್ಟಪಟ್ಟ ಮೇಲೆ ಅದು ಪ್ರಶಸ್ತಿಗಳಿಗೆ ಕರೆದುಕೊಂಡು ಹೋಗುತ್ತಿದೆ. ಅನಿರೀಕ್ಷಿತವಾಗಿ ಬಂದ ಪ್ರಶಸ್ತಿಯಿಂದ ಖುಷಿಯಾಗುತ್ತಿದೆ. ಈ ಗೆಲುವು ಇಡೀ ತಂಡಕ್ಕೆ ಸೇರಬೇಕು. ಈ ಪ್ರಶಸ್ತಿ ಮುಂದೆ ಇಂಥ ಇನ್ನಷ್ಟು ಚಿತ್ರಗಳನ್ನು ಮಾಡಲು ಉತ್ಸಾಹ ಕೊಟ್ಟಂತಿದೆ.’
-ಡಿ. ಸತ್ಯ ಪ್ರಕಾಶ್‌, “ಒಂದಲ್ಲಾ ಎರಡಲ್ಲಾ’ ಚಿತ್ರದ ನಿರ್ದೇಶಕ

“ಮೂಕಜ್ಜಿಯ ಕನಸುಗಳು’ ಕನ್ನಡಿಗರಿಗೆ ಚಿರಪರಿಚಿತ ಜನಪ್ರಿಯ ಕೃತಿ. ಅದು ರಚನೆಯಾಗಿ 50 ವರ್ಷಗಳ ನಂತರ ಅದನ್ನು ಚಿತ್ರರೂಪದಲ್ಲಿ ತೆರೆಗೆ ತರುವ ಪ್ರಯತ್ನ ಮಾಡಿದ್ದೆವು. ಚಿತ್ರ ಇತ್ತೀಚೆಗಷ್ಟೆ ಬಿಡುಗಡೆಯಾಗಿ ಯಶಸ್ವಿ 50 ದಿನಗಳ ಪ್ರದರ್ಶನ ಕಾಣುತ್ತಿರುವಾಗಲೆ, ಚಿತ್ರಕಥೆಗೆ ಪ್ರಶಸ್ತಿ ಬಂದಿದೆ. ಇದು ನಿಜವಾಗಿಯೂ ಕಾರಂತರಿಗೆ ಸಂದ ಗೌರವ. ಇನ್ನು ವೈಯಕ್ತಿಕವಾಗಿ ನನ್ನ ಕೆಲಸವನ್ನು ಗುರುತಿಸಿ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಖುಷಿ ತಂದಿದೆ.’
-ಪಿ. ಶೇಷಾದ್ರಿ, ಹಿರಿಯ ನಿರ್ದೇಶಕ

Advertisement
Advertisement

Udayavani is now on Telegram. Click here to join our channel and stay updated with the latest news.

Next