Advertisement

ಅರ್ಹ ಸಾಧಕರಿಗೆ ಗೌರವ

12:40 AM Oct 29, 2020 | mahesh |

ಗಮನಾರ್ಹ ಸಂಗತಿಯೆಂದರೆ ಪ್ರಶಸ್ತಿಗಾಗಿ ಅರ್ಜಿಯೇ ಹಾಕದವರನ್ನೂ ಗುರುತಿಸಿ ಅವರ ಹೆಸರನ್ನು ಪ್ರಶಸ್ತಿ ಪುರಸ್ಕೃತರ ಪಟ್ಟಿ ಸೇರಿಸಿರುವುದು.

Advertisement

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ 65 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ವಿಶೇಷ ಚೇತನರು, ಪ್ರಗತಿಪರ ರೈತರೂ ಆಯ್ಕೆ ಪಟ್ಟಿಯಲ್ಲಿರುವುದು ಒಂದು ರೀತಿಯಲ್ಲಿ ಪ್ರಶಸ್ತಿಯ ಮೌಲ್ಯ ಹೆಚ್ಚಿಸಿದೆ. ಗಮನಾರ್ಹ ಸಂಗತಿಯೆಂದರೆ ಪ್ರಶಸ್ತಿಗಾಗಿ ಅರ್ಜಿಯೇ ಹಾಕದ ಎಲೆ ಮರೆಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ದ ಉಡುಪಿಯ ಮಣೆಗಾರ್‌ ಮೀರಾನ್‌ ಸಾಹೇಬ್‌ ಅವರ ಹೆಸರೂ ಪ್ರಶಸ್ತಿ ಪುರಸ್ಕೃತರ ಪಟ್ಟಿ ಸೇರಿರುವುದು ನಿಜಕ್ಕೂ ಸಾಧಕರಿಗೆ ಸಂದ ಗೌರವ. ಇದೇ ರೀತಿ ಸುಮಾರು 20 ಸಾಧಕರನ್ನು ಖುದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಗುರುತಿಸಿ ಅರ್ಜಿ ಹಾಕದೇ ಇದ್ದರೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಒಳ್ಳೆಯ ಬೆಳವಣಿಗೆ.

ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯಲ್ಲಿ ಜಿಲ್ಲಾವಾರು, ಪ್ರಾದೇಶಿಕವಾರು ಮಾನ್ಯತೆಯ ಜತೆಗೆ ಎಲ್ಲ ಕ್ಷೇತ್ರಗಳ ಸಾಧಕರನ್ನೂ ಗುರುತಿಸಲಾಗಿದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಎಂದರೆ ಸಾಮಾನ್ಯವಾಗಿ ಜನಪ್ರಿಯತೆ ಪಡೆದವರು ಹೆಚ್ಚಾಗಿ ಪಟ್ಟಿಯಲ್ಲಿರುವ ಇರುತ್ತಿದ್ದರು. ಆದರೆ, ಈ ಬಾರಿಯ ಪಟ್ಟಿಯಲ್ಲಿ ಬಹುತೇಕ ಹೊಸ ಮುಖಗಳೇ ಆದರೂ ಅವರೆಲ್ಲ ಅರ್ಹ ಸಾಧಕರು. ಒಂದೆಡೆ ಕೊರೊನಾ ಮತ್ತೂಂದೆಡೆ ಪ್ರವಾಹದ ಸಂಕಷ್ಟ ರಾಜ್ಯವನ್ನು ಕಾಡುತ್ತಿದೆ. ಹೀಗಿರುವಾಗ, ಇಂತಹ ಪರಿಸ್ಥಿತಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಬೇಕಾ

ಎಂಬ ಪ್ರಶ್ನೆಯೂ ಎದುರಾಗಿತ್ತಾದರೂ ವಿವಾದಕ್ಕೆ ಅವಕಾಶ ಇಲ್ಲದಂತೆ ಸರ್ಕಾರ ತೀರ್ಮಾನ ಕೈಗೊಂಡಿದೆ.

ಪ್ರಶಸ್ತಿ ಆಯ್ಕೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವರ ನೇತೃತ್ವದಲ್ಲಿ ರಚಿಸಲಾಗಿದ್ದ ಸಲಹಾ ಸಮಿತಿಯ ಶಿಫಾರಸ್ಸು ಹಾಗೂ ಮುಖ್ಯಮಂತ್ರಿ ಅಧ್ಯಕ್ಷತೆಯ ಪ್ರಶಸ್ತಿ ಆಯ್ಕೆ ಸಮಿತಿ ಎಲ್ಲವನ್ನೂ ಪರಾಮರ್ಶೆ ಮಾಡಿ ಅಂತಿಮವಾಗಿ 65 ಸಾಧಕರು ಹಾಗೂ ಸಂಸ್ಥೆಗಳನ್ನು ಆಯ್ಕೆ ಮಾಡಿದೆ. ಸಂಘ-ಸಂಸ್ಥೆಗಳ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್‌, ಬಳ್ಳಾರಿಯ ದೇವದಾಸಿ ಸ್ವಾವಲಂಬನ ಕೇಂದ್ರ, ಬೆಂಗಳೂರಿನ ಬೆಟರ್‌ ಇಂಡಿಯಾ, ಯುವ ಬ್ರಿಗೇಡ್‌ನ‌ಂತಹ ಸೇವಾ ಸಂಸ್ಥೆಗಳನ್ನು ಗುರುತಿಸಲಾಗಿದೆ. ಇವೆಲ್ಲವೂ ನಾನಾ ವಲಯದಲ್ಲಿ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿವೆ.

Advertisement

ಜಾನಪದ ಕ್ಷೇತ್ರದಲ್ಲಿ ಕೊಪ್ಪಳದ ಕೇಶಪ್ಪ ಶಿಳ್ಳೆಕ್ಯಾತರನ್ನು ಆಯ್ಕೆ ಮಾಡಲಾಗಿದೆ. ಇದೇ ರೀತಿಯಲ್ಲಿ ಶಿಲ್ಪಕಲೆ, ನೃತ್ಯ, ಶಿಕ್ಷಣ, ಯೋಗ, ನ್ಯಾಯಾಂಗ, ಸಂಗೀತ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗುರುತಿಸಲಾಗಿದೆ.

ಅರ್ಜಿಯೇ ಹಾಕದೆ ಎಲೆ ಮರೆಯ ಕಾಯಿಯಂತೆ ಸಮಾಜಸೇವೆಗೆ ಅರ್ಪಿಸಿಕೊಂಡವರನ್ನು ಗುರುತಿಸ ಲಾಗಿದೆ. ಪ್ರಶಸ್ತಿಗೆ ಆಯ್ಕೆ ಮಾಡಿರುವ ಪ್ರತಿ ಕ್ಷೇತ್ರದ ಸಾಧಕರೂ ತಮ್ಮ ತಮ್ಮ ಕ್ಷೇತ್ರದಲ್ಲಿ ಕೊಡುಗೆ ನೀಡಿದವರು. ವಿಶೇಷ ಚೇತನರು, ಪ್ರಗತಿಪರ ರೈತರನ್ನು ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಸರ್ಕಾರ ತನ್ನ ಬದ್ಧತೆ ತೋರಿಸಿದೆ. ಹೀಗಾಗಿ, ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಉತ್ತಮ ಎಂದು ಹೇಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next