Advertisement

ರಾಜ್ಯಕ್ಕೆ ರೆಸಾರ್ಟ್‌ ರಾಜಕಾರಣ ಹೊಸದೇನಲ್ಲ…

10:45 PM Jul 23, 2019 | Lakshmi GovindaRaj |

ಬೆಂಗಳೂರು: ಶಾಸಕರ “ರೆಸಾರ್ಟ್‌ ರಾಜಕಾರಣ’ಕ್ಕೆ ಕರ್ನಾಟಕದಲ್ಲಿ ದೊಡ್ಡ ಇತಿಹಾಸವೇ ಇದೆ. ಕೆಲವು ಸ್ಯಾಂಪಲ್‌ಗ‌ಳು ಇಲ್ಲಿವೆ: 1984ರಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ಎನ್‌.ಟಿ. ರಾಮ್‌ರಾವ್‌ (ಎನ್‌ಟಿಆರ್‌), 202 ಸ್ಥಾನಗಳನ್ನು (ಒಟ್ಟಾರೆ 294ರಲ್ಲಿ) ಗೆದ್ದಿದ್ದರೂ ಬಹುಮತ ಸಾಬೀತುಪಡಿಸುವ ಸನ್ನಿವೇಶ ಉಂಟಾಗಿತ್ತು. ಆಗ ತಮ್ಮ ಶಾಸಕರ ದಂಡನ್ನು ದೆಹಲಿಯಲ್ಲಿ ರಾಷ್ಟ್ರಪತಿ ಮುಂದೆ ಪರೇಡ್‌ ನಡೆಸಿ, ನಂತರ ನೇರವಾಗಿ ಅವರು ಕರೆ ತಂದು ಬಿಟ್ಟಿದ್ದು ಕರ್ನಾಟಕದಲ್ಲಿ. ಅವರೆಲ್ಲರಿಗೂ ಇಲ್ಲಿನ ನಂದಿಬೆಟ್ಟ, ಮೈಸೂರು, ಕೊಡಗಿನಲ್ಲಿ ಆಶ್ರಯ ನೀಡಲಾಗಿತ್ತು.

Advertisement

ಹೀಗೆ ಧೈರ್ಯವಾಗಿ ಶಾಸಕರನ್ನು ಇಲ್ಲಿಗೇ ಕರೆ ತರಲು ಪ್ರಮುಖ ಕಾರಣ ಅಂದು ರಾಜ್ಯದಲ್ಲಿ ಕಾಂಗ್ರೆಸ್ಸೇತರ ಅಂದರೆ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರ ಇತ್ತು. ಕಾಕತಾಳೀಯವೆಂದರೆ ಈಗ ಕುಮಾರಸ್ವಾಮಿ ಅವರು ಅಮೆರಿಕ ಪ್ರವಾಸದಲ್ಲಿದ್ದಂತೆಯೇ ಅಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌ಟಿಆರ್‌ ಕೂಡ ಅಮೆರಿಕದಲ್ಲಿದ್ದರು. ಅಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇತ್ತ ಅವರದ್ದೇ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ನಾದೆಂದ್ಲಾ ಭಾಸ್ಕರ್‌ ರಾವ್‌, ಕಾಂಗ್ರೆಸ್‌ ಬೆಂಬಲದೊಂದಿಗೆ ಸರ್ಕಾರ ರಚಿಸಿದ್ದರು. ಬೆನ್ನಲ್ಲೇ ಆಗ ರಾಜ್ಯಪಾಲರಾಗಿದ್ದ ಠಾಕೂರ್‌ ರಾಮಲಾಲ್‌, ಬಹುಮತ ಕಳೆದುಕೊಂಡಿದೆ ಎಂದು ಎನ್‌ಟಿಆರ್‌ ಸರ್ಕಾರವನ್ನು ಕಿತ್ತು ಹಾಕಿದ್ದರು.

ಅಮೆರಿಕದಿಂದ ಆಂಧ್ರಕ್ಕೆ ಹಿಂತಿರುಗಿದ ಎನ್‌ಟಿಆರ್‌, ತಮ್ಮ ಪಕ್ಷದ ಸುಮಾರು 120-130 ಶಾಸಕರನ್ನು ಕರೆದುಕೊಂಡು ರಾಷ್ಟ್ರಪತಿ ಎದುರು ಪರೇಡ್‌ ನಡೆಸಿದ್ದರು. ತನ್ನ ಶಾಸಕರಿಗೆ 5ರಿಂದ 15 ಲಕ್ಷ ರೂ.ವರೆಗೆ ಆಮಿಷವೊಡ್ಡಲಾಗುತ್ತಿದೆ ಎಂದೂ ಎನ್‌ಟಿಆರ್‌ ಅಂದು ದೂರಿದ್ದರು. “ಅಂದು ಎನ್‌ಟಿಆರ್‌ ನೂರಕ್ಕೂ ಹೆಚ್ಚು ಶಾಸಕರನ್ನು ಇಲ್ಲಿಗೆ ತಂದು ಬಿಟ್ಟಿದ್ದರು. ಹಲವು ದಿನಗಳ ಕಾಲ ಅವರಿಗೆ ನಂದಿಬೆಟ್ಟ, ಮೈಸೂರು ಸೇರಿದಂತೆ ಅಲ್ಲಲ್ಲಿ ಆಶ್ರಯ ನೀಡಲಾಗಿತ್ತು. ಅದರ ಉಸ್ತುವಾರಿಯನ್ನು ಸ್ವತ: ನಾನು, ರಘುಪತಿ, ಜೀವರಾಜ್‌ ಆಳ್ವ ವಹಿಸಿದ್ದೆವು’ ಎಂದು ಪಿಜಿಆರ್‌ ಸಿಂಧ್ಯಾ ಮೆಲುಕು ಹಾಕಿದರು.

ಗೋವಾದಲ್ಲಿ ಬೀಡು: 2009-10ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಹಲವು ಬಾರಿ ಶಾಸಕರು ಬಂಡಾಯವೆದ್ದು, ರೆಸಾರ್ಟ್‌ ಸೇರಿದ್ದೂ ಉಂಟು. 2009ರಲ್ಲಿ ಸುಮಾರು 13 ಶಾಸಕರು ಗೋವಾ ಸೇರಿದ್ದರು. ಆಗ ಗೋವಾದಲ್ಲಿ ಇದ್ದದ್ದು ಕಾಂಗ್ರೆಸ್‌ ಸರ್ಕಾರ. ಬಳ್ಳಾರಿಯ ರೆಡ್ಡಿ ಸಹೋದರರು ಈ ಬೆಳವಣಿಗೆಗಳ ರೂವಾರಿಗಳಾಗಿದ್ದರು.

ಗುಜರಾತಿನ ಶಾಸಕರು ಶಿಫ್ಟ್: 2017ರಲ್ಲಿ ರಾಜ್ಯಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಶಾಸಕರನ್ನು ಹೈಜಾಕ್‌ ಮಾಡುತ್ತಿದೆ ಎಂಬ ಕಾರಣಕ್ಕೆ 44 ಶಾಸಕರನ್ನು ಬಿಡದಿ ಈಗಲ್‌ಟನ್‌ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿತ್ತು. ರಾಜ್ಯಸಭೆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಅವರನ್ನು ಸೋಲಿಸಿಯೇ ಸಿದ್ಧ ಎಂದು ಬಿಜೆಪಿ ಘೋಷಿಸಿದ್ದರೆ, ಗೆಲುವು ನಮ್ಮದೇ ಎಂದು ಕಾಂಗ್ರೆಸ್‌ ಹೇಳಿಕೊಂಡಿತ್ತು. ಅಂತಿಮವಾಗಿ ಅಹ್ಮದ್‌ ಪಟೇಲ್‌ ಅವರನ್ನು ಗೆಲ್ಲಿಸುವಲ್ಲಿ ಆ ಪಕ್ಷ ಯಶಸ್ವಿಯಾಗಿತ್ತು.

Advertisement

ಕಾಂಗ್ರೆಸ್‌ ಶಾಸಕರಿಗೆ 15 ಕೋಟಿ ರೂ.ಆಮಿಷವೊಡ್ಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. 2018ರ ಸೆಪ್ಟೆಂಬರ್‌ನಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅತೃಪ್ತ ಶಾಸಕರು ಇದೇ ಮುಂಬೈನ ರೆಸಾರ್ಟ್‌ನಲ್ಲಿ ಬೀಡು ಬಿಟ್ಟಿದ್ದರು. ಇದಕ್ಕೂ ಮುನ್ನ ಕೂಡ ಹಲವು ಬಾರಿ ಅತೃಪ್ತ ಶಾಸಕರು ಬಂಡಾಯವೆದ್ದು ಹೋಗಿದ್ದೂ ಇದೆ. ಆದರೆ, ಸರ್ಕಾರಕ್ಕೆ ಧಕ್ಕೆ ಉಂಟಾಗಿರ ಲಿಲ್ಲ. 6ನೇ ಬಾರಿ ಅತೃಪ್ತರ ತಂಡ ಯಶಸ್ವಿಯಾಯಿತು.

ಮಹಾರಾಷ್ಟ್ರ ಶಾಸಕರಿಗೂ ಇಲ್ಲಿ ಆಶ್ರಯ: ಇದೇ ರೀತಿ, 2002ರಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಆಗಿದ್ದ ವಿಲಾಸ್‌ರಾವ್‌ ದೇಶಮುಖ್‌ ಅವರಿಗೂ ಇಂತಹದ್ದೇ ಸಂದಿಗ್ಧ ಸ್ಥಿತಿ ಎದುರಾಗಿತ್ತು. ಒಟ್ಟಾರೆ 288 ಸ್ಥಾನಗಳ ಪೈಕಿ ಡೆಮಾಕ್ರಟಿಕ್‌ ಫ್ರಂಟ್‌ -ಎನ್‌ಸಿಪಿ ಅಧಿಕಾರದಲ್ಲಿತ್ತು. ಆದರೆ, ಸರ್ಕಾರದಲ್ಲಿನ ಏಳು ಶಾಸಕರು ಬಂಡಾಯ ಎದ್ದಿದ್ದರು. ಇದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಬಹುಮತ ಸಾಬೀತು ಪಡಿಸಬೇಕು ಎಂದು ಪ್ರತಿಪಕ್ಷ ಶಿವಸೇನೆ- ಬಿಜೆಪಿ, ಸ್ಪೀಕರ್‌ ಮತ್ತು ರಾಜ್ಯಪಾಲರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ “ಆಪರೇಷನ್‌’ ಭೀತಿ ಹಿನ್ನೆಲೆಯಲ್ಲಿ 51 ಕಾಂಗ್ರೆಸ್‌ ಶಾಸಕರನ್ನು ಬೆಂಗಳೂರಿನ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಸುಮಾರು ಒಂದು ವಾರಕ್ಕೂ ಹೆಚ್ಚು ಕಾಲ ಇಲ್ಲಿದ್ದರು. ಆಗ ರಾಜ್ಯದಲ್ಲಿ ಎಸ್‌.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಇತ್ತು. ಅಂದಿನ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌, ಶಾಸಕರ ರಕ್ಷಣೆಯ ಉಸ್ತುವಾರಿಯಾಗಿದ್ದರು.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next