ಇಸ್ಲಾಮಾಬಾದ್: “ಮೊದಲು ಸಂವಿಧಾನ ಮತ್ತು ಕಾನೂನು ಚೌಕಟ್ಟಿನಲ್ಲಿ ರಾಜಕೀಯ ಬಿಕ್ಕಟ್ಟುಗಳನ್ನು ಪರಿಹರಿಸಿಕೊಳ್ಳಿ. ಅನಂತರ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ(ಐಎಂಎಫ್) ಪರಿಹಾರದ ಕುರಿತು ಯೋಚಿಸಬಹುದು’ ಎಂದು ಐಎಂಎಫ್ ಯೋಜನೆ ಮುಖ್ಯಸ್ಥ ನಾಥನ್ ಪೋರ್ಟರ್ ಪಾಕಿಸ್ಥಾನ ಸರಕಾರಕ್ಕೆ ಖಡಕ್ ಸೂಚನೆ ನೀಡಿದ್ದಾರೆ. ಪ್ರಧಾನಿ ಶಹಬಾಜ್ ಶರೀಫ್ ಜತೆಗೆ ಮಂಗಳವಾರ ಮಾತುಕತೆ ನಡೆಸಿದ ವೇಳೆ ಅಂಶ ಸ್ಪಷ್ಟಪಡಿಸಿದ್ದಾರೆ.
ತೀವ್ರ ಆರ್ಥಿಕ ದುಸ್ಥಿತಿ ಅನುಭವಿಸುತ್ತಿರುವ ಪಾಕಿಸ್ಥಾನ, ಐಎಂಎಫ್ನಿಂದ 110 ಕೋಟಿ ಡಾಲರ್ ಪರಿಹಾರ ಪ್ಯಾಕೇಜ್‌ನ ನಿರೀಕ್ಷೆಯಲ್ಲಿದೆ. ಆದರೆ ಐಎಂಎಫ್ನ ಷರತ್ತುಗಳನ್ನು ಪೂರೈಸಲು ಇದುವರೆಗೂ ಪಾಕಿಸ್ಥಾನ ವಿಫಲವಾಗಿದೆ. ಹೀಗಾಗಿ ಪರಿಹಾರ ಇನ್ನೂ ಮರೀಚಿಕೆಯಾಗಿದೆ. 2019ರಲ್ಲಿ ಪಾಕಿಸ್ಥಾನಕ್ಕೆ 650 ಕೋಟಿ ಡಾಲರ್ ಪರಿಹಾರಕ್ಕೆ ಐಎಂಎಫ್ ಅನುಮೋದನೆ ನೀಡಿದೆ. ಷರತ್ತುಗಳನ್ನು ಪೂರೈಸಿದರೆ ಹಂತ-ಹಂತವಾಗಿ ಇದನ್ನು ಬಿಡುಗಡೆಗೊಳಿಸಲಾಗುತ್ತದೆ.
ಇಮ್ರಾನ್ ಹಾಜರು: ಇನ್ನೊಂದೆಡೆ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಲಾಹೋರ್‌ನ ಉಗ್ರ ನಿಗ್ರಹ ನ್ಯಾಯಾಲಯದ ಎದುರು ಪಾಕಿಸ್ಥಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಹಾಜರಾದರು. ಈ ವೇಳೆ ನಿರೀಕ್ಷಣ ಜಾಮೀನಿಗೆ ಸಂಬಂಧಿಸಿದಂತೆ ನಾಲ್ಕು ಶ್ಯೂರಿಟಿ ಬಾಂಡ್‌ಗಳನ್ನು ಒದಗಿಸಿದರು.