Advertisement

ರಾಹುಲ್‌ ಹಸ್ತಕ್ಷೇಪಕ್ಕೆ ಬೇಸತ್ತು ರಾಜೀನಾಮೆ ನೀಡಿದೆ: ಎಸ್ಸೆಂಕೆ

01:45 AM Feb 10, 2019 | |

ಮಂಡ್ಯ: ಕಾಂಗ್ರೆಸ್‌ನೊಳಗೆ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ರಾಹುಲ್‌ ಗಾಂಧಿಯವರು ಪದೇಪದೆ ನಡೆಸುತ್ತಿದ್ದ ರಾಜಕೀಯ ಹಸ್ತಕ್ಷೇಪದಿಂದ ಬೇಸತ್ತು ವಿದೇಶಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದೆ ಎಂದು ಮಾಜಿ ಕೇಂದ್ರ ಸಚಿವ ಎಸ್‌.ಎಂ.ಕೃಷ್ಣ ದೂರಿದರು.

Advertisement

ಶನಿವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. 2009ರಿಂದ 2014ರವರೆಗೆ ಕಾಂಗ್ರೆಸ್‌ನೊಳಗೆ ವಿಷಪೂರಿತವಾದಂತಹ ಪರಿಸ್ಥಿತಿಯಿತ್ತು. ಅದೇ ಸನ್ನಿವೇಶದಲ್ಲಿ ನಾನು ವಿದೇಶಾಂಗ ಸಚಿವನಾಗಿದ್ದೆ. ಮೂರೂವರೆ ವರ್ಷ ಸಚಿವ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದೆ. ಆಗ ರಾಹುಲ್‌ ಗಾಂಧಿಯವರು ಕಾಂಗ್ರೆಸ್‌ನಲ್ಲಿ ಯಾವ ಅಧಿಕಾರದಲ್ಲಿಲ್ಲದಿದ್ದರೂ 80 ವರ್ಷ ವಯಸ್ಸಾದವರು ಮಂತ್ರಿ ಆಗಿರಬಾರದೆಂದು ಫ‌ರ್ಮಾನು ಹೊರಡಿಸಿದರು. ಇದರಿಂದ ಬೇಸತ್ತು ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದೆ ಎಂದರು.

ಹತ್ತು ವರ್ಷಗಳ ಹಿಂದೆ ರಾಹುಲ್‌ ಅವರು ಪಕ್ಷದ ಯಾವ ಹುದ್ದೆಯಲ್ಲಿ ಇಲ್ಲದಿದ್ದರೂ ಹೆಚ್ಚುವರಿ ಸಂವಿಧಾ ನೇತರ ಅಧಿಕಾರವನ್ನು ಚಲಾಯಿಸುತ್ತಿದ್ದರು. ಪ್ರಧಾನಿ ಯಾಗಿದ್ದ ಮನಮೋಹನ್‌ ಸಿಂಗ್‌ ಹೆಸರಿಗೆ ಮಾತ್ರ ಹುದ್ದೆಯಲ್ಲಿದ್ದರು. ಹಲವಾರು ವಿಚಾರಗಳು ಸಿಂಗ್‌ ಗಮನಕ್ಕೆ ಬಾರದಂತೆ ನಡೆಯುತ್ತಿದ್ದವು. ಪ್ರಧಾನಿ ಜಾರಿಗೆ ತರಲು ನಿರ್ಧರಿಸಿದ್ದ ವಿಧೇಯಕವನ್ನು ಹರಿದು ಹಾಕುವ ಮೂಲಕ ರಾಹುಲ್‌ ದರ್ಪ ಪ್ರದರ್ಶಿಸಿದ್ದರು. ಯುಪಿಎ ಸರ್ಕಾರದಲ್ಲಿ ಯಾರ ಮೇಲೂ ಹತೋಟಿ ಇರಲಿಲ್ಲ. ಪ್ರಧಾನಿಯಾಗಿದ್ದ ಸಿಂಗ್‌ ಅವರು ತಮ್ಮ ಜೊತೆಗಾರರ ಮೇಲೆ ಹಿಡಿತ ಸಾಧಿಸುವಲ್ಲಿ ವಿಫ‌ಲರಾಗಿದ್ದರು. ಆಗಲೇ ಒಂದರ ಹಿಂದೊಂದರಂತೆ ಹಗರಣಗಳ ಸುರಿಮಳೆಯಾಯಿತು. ದೇಶಕ್ಕೆ ಸಮರ್ಥ ನಾಯಕತ್ವ ಇಲ್ಲದಿದ್ದರೆ ಎಂತಹ ಪರಿಸ್ಥಿತಿ ಎದುರಾಗುತ್ತದೆ ಎನ್ನುವುದಕ್ಕೆ ಇದು ಪ್ರತ್ಯಕ್ಷ ಉದಾಹರಣೆ ಎಂದು ಹೇಳಿದರು.

ಚುನಾವಣೆಗೆ ಸ್ಪರ್ಧೆ ಇಲ್ಲ: ಬಳಿಕ ಮದ್ದೂರು ತಾಲೂಕಿನ ನಿಡಘಟ್ಟದಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ನಾನಾಗಲಿ, ನನ್ನ ಕುಟುಂಬದವರಾಗಲಿ ಚುನಾವಣೆಗೆ ಸ್ಪರ್ಧಿಸಲ್ಲ. ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಬರುವ ನಿರೀಕ್ಷೆಯಿದೆ. ರಾಜ್ಯದಲ್ಲಿರುವ ನನ್ನ ಬೆಂಬಲಿಗರಿಗೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವಂತೆ ತಿಳಿಸಿದ್ದೇನೆ. ಈ ಬಗ್ಗೆ ನಿರಂತರವಾಗಿ ಬೆಂಬಲಿಗರ ಜತೆ ಮಾತನಾಡುತ್ತಿದ್ದೇನೆ. ಸುಮಲತಾ ಅಂಬರೀಶ್‌ ಬಿಜೆಪಿಗೆ ಬರುವ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next