Advertisement

ಪಕ್ಷದ ಆದೇಶದಂತೆ ರಾಜೀನಾಮೆ

09:00 PM Oct 01, 2019 | Team Udayavani |

ಚಿಕ್ಕಬಳ್ಳಾಪುರ: ಜಾತಿ ಬಲ, ಹಣ ಬಲ ಇಲ್ಲದ ನನ್ನನ್ನು ಗುರುತಿಸಿ ಪಕ್ಷ ಜಿಪಂ ಅಧ್ಯಕ್ಷರಾಗಿ ಆಯ್ಕೆ ಮಾಡಿತು. ಪಕ್ಷದ ಆದೇಶದಂತೆ ರಾಜೀನಾಮೆ ಕೊಟ್ಟಿದ್ದೇನೆ. ಯಾವುದೇ ಒತ್ತಡ ಇರಲಿಲ್ಲ. ಪಕ್ಷದ ಆದೇಶಕ್ಕೆ ವಿರುದ್ಧವಾಗಿ ನಡೆಯುವ ಸ್ವಭಾವ ನನ್ನದ್ದಲ್ಲ ಎಂದು ಚಿಕ್ಕಬಳ್ಳಾಪುರ ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಎಚ್‌.ವಿ.ಮಂಜುನಾಥ ಸ್ಪಷ್ಟಪಡಿಸಿದರು.

Advertisement

ಜಿಪಂ ಮಿನಿ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರ ಹಿಂದೆ ಯಾರದೇ ಒತ್ತಡ ಇಲ್ಲ. ಮೊದಲೇ ಮಾತುಕತೆಯಂತೆ ಪಕ್ಷದ ಆದೇಶ ಪಾಲಿಸಿ ರಾಜೀನಾಮೆ ನೀಡಿರುವುದಾಗಿ ರಾಜೀನಾಮೆ ಹಿಂದಿನ ಕಾರಣವನ್ನು ಸುದ್ದಿಗೋಷ್ಠಿಯಲ್ಲಿ ತೆರೆದಿಟ್ಟರು.

19 ತಿಂಗಳ ಜಿಪಂ ಅಧ್ಯಕ್ಷರಾಗಿ ನನಗೆ ವಹಿಸಿದ ಕೆಲಸವನ್ನು ಅಧಿಕಾರ ಎಂದು ಭಾವಿಸದೇ ಜವಾಬ್ದಾರಿಯಾಗಿ ಆತ್ಮಸಾಕ್ಷಿಗೆ ಅನುಗುಣವಾಗಿ ಸ್ಥಾನಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ ಎಂದರು. ಜಿಲ್ಲೆಯಲ್ಲಿ ಒಂದಷ್ಟು ಬದಲಾವಣೆ ಆಗಿದೆ ಎಂದರೆ ಅದಕ್ಕೆ ಅಧಿಕಾರಿಗಳ ಸಹಕಾರ ಮುಖ್ಯ ಕಾರಣ. ಹಿಂದಿನ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಪಂ ಸಿಇಒ ಆಗಿದ್ದ ಗುರುದತ್‌ ಹೆಗಡೆರನ್ನು ಸ್ಮರಿಸಿದರು.

ಶೈಕ್ಷಣಿಕ ಕಾರ್ಯಪಡೆ ರಚನೆ: ನಾವು ಕಳೆದ ವರ್ಷ ಭಾವನಾತ್ಮಕವಾಗಿ ಕೈಗೊಂಡ ಹಲವು ಕ್ರಮಗಳಿಂದ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫ‌ಲಿತಾಂಶ ಸುಧಾರಣೆಗೊಂಡು 30ನೇ ಸ್ಥಾನದಲ್ಲಿದ್ದ ಜಿಲ್ಲೆ 20ನೇ ಸ್ಥಾನಕ್ಕೆ ಬಂದಿದೆ. ಇದರ ಹಿಂದೆ ಅಧಿಕಾರಿಗಳ ಶ್ರಮ ಬಹಳ ಇದೆ. ಈ ವರ್ಷ ಜಿಲ್ಲೆಯಲ್ಲಿ ಫ‌ಲಿತಾಂಶ ಹೆಚ್ಚಳಕ್ಕೆ ಶಿಕ್ಷಣ ತಜ್ಞರನ್ನು ಒಳಗೊಂಡಂತೆ ಶೈಕ್ಷಣಿಕ ಕಾರ್ಯಪಡೆ ರಚಿಸಲಾಗಿದೆ ಎಂದರು.

55 ಮಂದಿ ಅತಿಥಿ ಶಿಕ್ಷಕರು: ಪ್ರತಿ ಪ್ರೌಢ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ ಮಾಡಲು ಪ್ರೊಜೆಕ್ಟರ್‌ಗಳನ್ನು ದಾನಿಗಳ ಸಹಕಾರದಿಂದ ವಿತರಿಸಲಾಗಿದೆ. ಜಿಲ್ಲಾ ಖನಿಜ ಪ್ರತಿಷ್ಠಾನದಿಂದ ಪ್ರೌಢ ಶಾಲೆಗಳಿಗೆ 55 ಮಂದಿ ಅತಿಥಿ ಶಿಕ್ಷಕರನ್ನು ಕಂಪ್ಯೂಟರ್‌ ಕಲಿಸಲು ನೇಮಿಸಲಾಗಿದೆ ಎಂದರು.

Advertisement

ಕಾಂಪೌಂಡ್‌ ನಿರ್ಮಾಣ: ವಿಶೇಷವಾಗಿ ಅಂಗವಿಕಲರು ಇರುವ ಶಾಲೆಗಳಲ್ಲಿ ಅವರಿಗೆ ಸರಿ ಹೊಂದುವ ರೀತಿಯಲ್ಲಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ನರೇಗಾ ಯೋಜನೆ ಸದ್ಬಳಕೆ ಮಾಡಿಕೊಂಡು ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ ಎಂದರು.

ವಿಶೇಷ ತರಗತಿ: ಜಿಲ್ಲೆಯಲ್ಲಿ ಕಳೆದ ವರ್ಷ ಆರಂಭಿಸಿದ ಬ್ಯಾಗ್‌ ರಹಿತ ಶಾಲೆಯನ್ನು ರಾಜ್ಯ ಸರ್ಕಾರ ಮಾದರಿಯಾಗಿ ಪಡೆದು ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಪ್ರತಿ ಶಾಲೆಗೆ ನೋಡಲ್‌ ಅಧಿಕಾರಿಗಳನ್ನು ನೇಮಿಸಿದ್ದು, ವೈಜ್ಞಾನಿಕವಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗುವುದ ಎಂದರು.

ಜಲಮೂಲಗಳ ಸಂರಕ್ಷಣೆಗೆ ಒತ್ತು: ಕಳೆದ ವರ್ಷದಲ್ಲಿ ಜಿಲ್ಲಾದ್ಯಂತ ಮಳೆ ನೀರು ಸಂರಕ್ಷಣೆ ಹಾಗೂ ಸದ್ಬಳಕೆಗೆ ವಿಶೇಷ ಗಮನ ನೀಡಿ 142 ಕಲ್ಯಾಣಿಗಳ ಪೈಕಿ 141 ಕಲ್ಯಾಣಿಗಳನ್ನು ಸರ್ಕಾರದ ಅನುದಾನ ಬಳಸದೇ ಪುನಶ್ಚೇತನಗೊಳಿಸಲಾಗಿದೆ. ನರೇಗಾ ಯೋಜನೆಯಡಿ 100 ಕ್ಕೂ ಬಹುಪಯೋಗಿ ಚೆಕ್‌ ಡ್ಯಾಂಗಳನ್ನು ನಿರ್ಮಿಸಿದ್ದು, 150 ಚೆಕ್‌ ಡ್ಯಾಂಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಮಳೆ ಕೊಯ್ಲು ಯೋಜನೆ ಪರಿಣಾಮಕಾರಿ ಅನುಷ್ಟಾನಕ್ಕೆ ಮುಂದಾಗಿದ್ದು, ಜಿಲ್ಲೆಯಲ್ಲಿರುವ 157 ಗ್ರಾಪಂಗಳಿಗೆ ಮಳೆ ಕೊಯ್ಲು ಅಳವಡಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಲಶಕ್ತಿ, ಜಲಾಧಾರೆ, ಜಲಾಮೃತ ಯೋಜನೆಗಳನ್ನು ಬಳಸಿಕೊಂಡು ಮಳೆ ನೀರು ಹಾಗೂ ಅಂತರ್ಜಲ ವೃದ್ಧಿಗೆ ಬೇಕಾದ ಕಾಮಗಾರಿಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ.

ಜಿಲ್ಲೆಯ ಬಾಗೇಪಲ್ಲಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಫ್ಲೋರೋಸಿಸ್‌ ರೋಗ ಪೀಡಿತರ ಪುನಶ್ಚೇತನಕ್ಕೆ ಕೇಂದ್ರ ತೆರೆಯಲಾಗಿದೆ ಎಂದು ತಮ್ಮ ಕಾಲಾವಧಿಯಲ್ಲಿ ನಡೆದಿರುವ ಹಲವು ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಿಪಂ ಅಧ್ಯಕ್ಷ ಎಚ್‌.ವಿ.ಮಂಜುನಾಥ ವಿವರ ನೀಡಿದರು.

ಜಿಪಂ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ನಾನು ಆದೇಶ ಮಾಡುವುದಕ್ಕೆ ಅಧಿಕಾರ ಇಲ್ಲ. ನನ್ನ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚಾಲನೆ ನೀಡಿ ಕೈಗೊಂಡಿರುವ ಯೋಜನೆಗಳ ಪೂರ್ಣ ಅನುಷ್ಠಾನಕ್ಕೆ ಅಧಿಕಾರಿಗಳನ್ನು ವಿಚಾರಿಸಿ ಕೆಲಸ ಮಾಡುವ ಅಧಿಕಾರ ಇದೆ. ನನ್ನ ಅವಧಿಯಲ್ಲಿ ಜಿಪಂ ಅಧ್ಯಕ್ಷರ ಕಚೇರಿಯನ್ನು ಜನ ಸಾಮಾನ್ಯರಿಗೆ, ಸದಸ್ಯರಿಗೆ ಮುಕ್ತವಾಗಿರಿಸಿದ್ದೆ.
-ಹೆಚ್‌.ವಿ.ಮಂಜುನಾಥ, ಜಿಪಂ ಅಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next