ಮಡಿಕೇರಿ: ಜಾತ್ಯತೀತ ಜನತಾ ದಳದ ಸಕ್ರಿಯ ಕಾರ್ಯಕರ್ತನಾಗಿ ಕಳೆದ 20 ವರ್ಷಗಳಿಂದ ಪûಾಭಿಮಾನದಿಂದ ದುಡಿದ ನನ್ನನ್ನು ಇತ್ತೀಚಿನ ದಿನಗಳಲ್ಲಿ ಪಕ್ಷ ಕಡೆಗಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿರುವ ಜೆಡಿಎಸ್‌ನ ಅಲ್ಪಸಂಖ್ಯಾಕರ ಘಟಕದ ಮಾಜಿ ಅಧ್ಯಕ್ಷರಾದ ಮನ್ಸೂರ್ ಆಲಿ ಪಕ್ಷಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾಕರ ಘಟಕದ ಜಿಲ್ಲಾಧ್ಯಕ್ಷನಾಗಿ ಕಳೆದ 4 ವರ್ಷಗಳಿಂದ ನಿಷ್ಠಾವಂತನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆದರೆ ಯಾವುದೇ ಮಾಹಿತಿಯನ್ನು ನೀಡದೆ ವಿನಾಕಾರಣ ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಪಕ್ಷದಲ್ಲಿ ಸದಸ್ಯತ್ವವನ್ನೇ ಹೊಂದಿರದ ಐಸಾಕ್ ಖಾನ್ ಎಂಬುವವರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ದಿಢೀರ್ ಬೆಳವಣಿಗೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಆಪ್ತರಾಗಿರುವ ಸುಂಟಿಕೊಪ್ಪದ ವ್ಯಕ್ತಿ ಕಾರಣವೆಂದು ಆರೋಪಿಸಿದರು. ಕಳೆದ ಎರಡು ತಿಂಗಳಿನಿಂದ ಪಕ್ಷದ ಯಾವುದೇ ಸಭೆಗಳಿಗೆ ಆಹ್ವಾನಿಸದೆ ಕಡೆಗಣಿಸಲಾಗಿದ್ದು, ಕಳೆದ 20 ವರ್ಷಗಳಿಂದ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದ ನನಗೆ ಈ ಬೆಳವಣಿಗೆ ತುಂಬಾ ನೋವು ತಂದಿದೆ. ಗೌರವವಿಲ್ಲದ ಪಕ್ಷದಲ್ಲಿ ಮುಂದುವರಿ ಯಬಾರದೆಂದು ನಿರ್ಧರಿಸಿದ್ದು, ಮುಂದಿನವಾರ ಎಚ್.ಡಿ. ಕುಮಾರಸ್ವಾಮಿ ಅವರಿಗೆ ರಾಜೀನಾಮೆ ಸಲ್ಲಿಸುವುದಾಗಿ ಮನ್ಸೂರ್ ಆಲಿ ತಿಳಿಸಿದರು.
ನನ್ನನ್ನು ಜೆಡಿಎಸ್ ಅಲ್ಪಸಂಖ್ಯಾಕರ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿರುವುದಾಗಿ ವ್ಯಾಟ್ಸ್‌ಅಪ್ ಮೂಲಕ ಸಂದೇಶ ರವಾನಿಸಲಾಗಿದೆಯೇ ಹೊರತು, ಯಾವುದೇ ಅಧಿಕೃತ ಪತ್ರ ನನ್ನ ಕೈಸೇರಿಲ್ಲ. ಜೆಡಿಎಸ್‌ಗೆ ಹೊಸ ಹೊಸ ವ್ಯಕ್ತಿಗಳು ಸೇರ್ಪಡೆಯಾಗುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಪ್ರಾಮಾಣಿಕವಾಗಿ ದುಡಿದವರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದರು.
ಪಕ್ಷ ನಮ್ಮನ್ನು “ಟಿಷ್ಯು ಪೇಪರ್’ನಂತೆ ಉಪಯೋಗಿಸಿಕೊಂಡಿತು ಎಂದು ವಿಷಾದಿಸಿದ ಮನ್ಸೂರ್ ಆಲಿ ಬೆಂಬಲಿಗರೊಂದಿಗೆ ಚರ್ಚಿಸಿ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.