ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ 13 ಜನ ಶಾಸಕರು ರಾಜೀನಾಮೆ ನೀಡುತ್ತಾರೆಂಬ ವದಂತಿ ಬೆನ್ನಲ್ಲೇ ಅತೃಪ್ತ ಶಾಸಕರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಏತನ್ಮಧ್ಯೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್ ಹಾಗೂ ಈಶ್ವರ್ ಖಂಡ್ರೆ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎಂದು ವರದಿ ತಿಳಿಸಿದೆ.
ಅತೃಪ್ತ ಶಾಸಕರ ಮನವೊಲಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ರಹಸ್ಯ ಸ್ಥಳಕ್ಕೆ ತೆರಳಿದ್ದು, ಡಿಸಿಎಂ ಪರಮೇಶ್ವರ್ ಕೂಡಾ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ವರದಿ ವಿವರಿಸಿದೆ.
ಹೆಚ್.ವಿಶ್ವನಾಥ್, ಗೋಪಾಲಯ್ಯ, ರಮೇಶ್ ಜಾರಕಿಹೊಳಿ ಸ್ಪೀಕರ್ ರಮೇಶ್ ಕುಮಾರ್ ಅವರ ಕಚೇರಿಗೆ ಆಗಮಿಸಿರುವ ಬೆಳವಣಿಗೆ ನಡೆದಿದೆ. ಮತ್ತೊಂದೆಡೆ ಅತೃಪ್ತ ಶಾಸಕರಾದ ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್ ಶಾಸಕರ ಭವನದಲ್ಲಿ ಬೀಡು ಬಿಟ್ಟಿದ್ದಾರೆನ್ನಲಾಗಿದೆ.
ದಿಢೀರ್ ಜನಸಂಪರ್ಕ ಸಭೆ ರದ್ದುಪಡಿಸಿ ಬೆಂಗಳೂರಿಗೆ ತೆರಳಿದ ಡಿಕೆಶಿ:
ಕನಕಪುರದ ವಿವಿಧ ಗ್ರಾಮಪಂಚಾಯ್ತಿಯ ಜನಸಂಪರ್ಕ ಸಭೆ ನಡೆಸಲು ಶನಿವಾರ ಡಿಕೆ ಶಿವಕುಮಾರ್ ಆಗಮಿಸಿದ್ದರು. ಆದರೆ ರಾಜ್ಯರಾಜಕೀಯದಲ್ಲಿ ರಾಜೀನಾಮೆ ಪ್ರಹಸನ ಮುಂದುವರಿದ ಹಿನ್ನೆಲೆಯಲ್ಲಿ ಡಿಕೆಶಿ ಜನಸಂಪರ್ಕ ಸಭೆಯನ್ನು ದಿಢೀರ್ ರದ್ದುಪಡಿಸಿ ಬೆಂಗಳೂರಿಗೆ ತೆರಳಿದ್ದಾರೆ.