ಬೆಂಗಳೂರು:ರಾಜ್ಯ ಸಮ್ಮಿಶ್ರ ಸರ್ಕಾರದ 14 ಮಂದಿ ಅತೃಪ್ತ ಶಾಸಕರು ನೀಡಿರುವ ರಾಜೀನಾಮೆ ಪತ್ರದಲ್ಲಿ 8 ಶಾಸಕರ ರಾಜೀನಾಮೆ ಪತ್ರಗಳು ಸರಿ ಇಲ್ಲ, ಇದರಲ್ಲಿ ಐದು ರಾಜೀನಾಮೆ ಪತ್ರ ಕ್ರಮಬದ್ಧವಾಗಿದೆ ಎಂದು ಸ್ಪೀಕರ್ ರಮೇಶ್ ಕುಮಾರ್ ತಮ್ಮ ನಿರ್ಧಾರವನ್ನು ಮಂಗಳವಾರ ಪ್ರಕಟಿಸಿದ್ದಾರೆ.
ರಾಜೀನಾಮೆ ಪತ್ರ ಪರಿಶೀಲನೆ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 6ರಂದು ನಾನು ಮಧ್ಯಾಹ್ನ 12ಗಂಟೆವರೆಗೆ ನನ್ನ ಕಚೇರಿಯಲ್ಲಿದ್ದೆ. ನಾನು ಕಚೇರಿಯಿಂದ ಹೊರ ಹೋದ ಮೇಲೆ ರಾಜೀನಾಮೆ ಪತ್ರವನ್ನು ಕಚೇರಿಯ ಕಾರ್ಯದರ್ಶಿಗೆ ಕೊಟ್ಟು ಹೋಗಿದ್ದರು. ಅದಕ್ಕೆ ಸ್ವೀಕೃತಿ ಪತ್ರ ಕೊಟ್ಟಿದ್ದು, ಮಂಗಳವಾರ ಬಂದು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದ್ದೆ.
ಅದರಂತೆ ನಿಯಮಾವಳಿ ಪ್ರಕಾರ, ಆನಂದ್ ಸಿಂಗ್, ನಾರಾಯಣಗೌಡ, ಪ್ರತಾಪ್ ಗೌಡ, ಗೋಪಾಲಯ್ಯ, ರಾಮಲಿಂಗಾರೆಡ್ಡಿ ಅವರ ನಾಮಪತ್ರ ಕ್ರಮಬದ್ಧವಾಗಿದೆ. ಉಳಿದಂತೆ ರಮೇಶ್ ಜಾರಕಿಹೊಳಿ, ಎಸ್ ಟಿ ಸೋಮಶೇಖರ್, ಮುನಿರತ್ನ, ಮಹೇಶ್ ಕುಮಟಳ್ಳಿ, ಶಿವರಾಮ್ ಹೆಬ್ಬಾರ್, ಬಿಸಿ ಪಾಟೀಲ್, ಹೆಚ್.ವಿಶ್ವನಾಥ್, ಭೈರತಿ ಬಸವರಾಜು ಅವರ ರಾಜೀನಾಮೆ ಕ್ರಮಬದ್ಧವಾಗಿಲ್ಲ ಎಂದು ಹೇಳಿದರು.
ರಾಜೀನಾಮೆಗೆ ಸಂಬಂಧಿಸಿದಂತೆ ರಾಜ್ಯಪಾಲರೂ ಕೂಡಾ ನನಗೆ ಪತ್ರ ಬರೆದು ಸಂವಿಧಾನಬದ್ಧವಾಗಿ ಕ್ರಮಕೈಗೊಳ್ಳಿ ಎಂದು ತಿಳಿಸಿದ್ದಾರೆ. ನಾನು ಕೂಡಾ ಪತ್ರ ಬರೆದಿದ್ದು, ಸಂವಿಧಾನದ ಆಶಯ ಹಾಗೂ ಮತದಾರರ ಆಶಯಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳುವುದಾಗಿ ಉತ್ತರ ನೀಡಿರುವುದಾಗಿ ಸ್ಪೀಕರ್ ತಿಳಿಸಿದರು.
ಜುಲೈ 12ರಂದು ಆನಂದ್ ಸಿಂಗ್, ನಾರಾಯಣ ಗೌಡ ಅವರನ್ನು ವಿಚಾರಣೆಗೆ ಕರೆದಿದ್ದೇನೆ, ಜುಲೈ 15ರಂದು ರಾಮಲಿಂಗಾರೆಡ್ಡಿ, ಗೋಪಾಲಯ್ಯ ಅವರನ್ನು ವಿಚಾರಣೆಗೆ ಕರೆದಿದ್ದು, ಕ್ರಮಬದ್ಧವಾಗಿ ರಾಜೀನಾಮೆ ಪತ್ರ ಸಲ್ಲಿಸದ ಶಾಸಕರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.