Advertisement

ಸರ್ಕಾರ ನಡೆಸಲಾಗದಿದ್ದಲ್ಲಿ ರಾಜೀನಾಮೆ ನೀಡಿ

05:30 PM Sep 21, 2018 | Team Udayavani |

ದಾವಣಗೆರೆ: ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪರ ಬೆಂಗಳೂರು ನಿವಾಸದ ಎದುರು ಜೆಡಿಎಸ್‌-ಕಾಂಗ್ರೆಸ್‌ ಕಾರ್ಯಕರ್ತರು ಗೂಂಡಾಗಳ ರೀತಿ ವರ್ತಿಸಿದ್ದಾರೆಂದು ಆರೋಪಿಸಿ, ಬಿಜೆಪಿ ಕಾರ್ಯಕರ್ತರು ಗುರುವಾರ ಸಂಜೆ ಜಯದೇವ ವೃತ್ತದಲ್ಲಿ ಪ್ರತಿಭಟಿಸಿದ್ದಾರೆ.

Advertisement

ರಾಮನಗರದಲ್ಲಿ ನಡೆದ ಸಮಾರಂಭದಲ್ಲಿ ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಬಿ.ಎಸ್‌. ಯಡಿಯೂರಪ್ಪರ ವಿರುದ್ಧ ದಂಗೆ ಏಳುವಂತೆ ಕರೆ ನೀಡಿರುವುದು ಅಕ್ಷಮ್ಯ. ಮುಖ್ಯಮಂತ್ರಿಯಂತಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಕುಮಾರಸ್ವಾಮಿಗೆ ಸರ್ಕಾರ ನಡೆಸುವ ತಾಕತ್ತಿಲ್ಲದಿದ್ದರೆ ರಾಜೀನಾಮೆ ನೀಡಿ, ಮನೆಗೆ ಹೋಗಲಿ. ಈಗ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಕ್ಕೆ ವಿಧಾನಸಭಾ ವಿಸರ್ಜನೆಯೇ ಸೂಕ್ತ. ಕುಮಾರಸ್ವಾಮಿ ಕೂಡಲೇ ವಿಧಾನಸಭೆ ವಿಸರ್ಜಿಸಿ, ಚುನಾವಣೆಯಲ್ಲಿ ತಮ್ಮ ತಾಕತ್ತು ತೋರಿಸಲಿ ಎಂದು ಪ್ರತಿಭಟನಾಕಾರರು ಸವಾಲು ಹಾಕಿದರು. 

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ರಾಗ, ದ್ವೇಷ ಮಾಡುವುದಿಲ್ಲ ಎಂಬುದಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಆದರೆ, ವಿಪಕ್ಷ ನಾಯಕರ ವಿರುದ್ಧ ದಂಗೆ ಏಳುವಂತೆ ಕರೆ ನೀಡಿರುವಂತಹ ಮುಖ್ಯಮಂತ್ರಿಯನ್ನು ದೇಶ ಕಂಡಿಲ್ಲ. ಕುಮಾರಸ್ವಾಮಿಯವರ ಹೇಳಿಕೆಯೇ ಅವರ ಸರ್ಕಾರದ ಅಧಃಪತನಕ್ಕೆ ಕಾರಣವಾಗಲಿದೆ. 

ಕುಮಾರಸ್ವಾಮಿ 37 ಶಾಸಕರನ್ನು ಹೊಂದಿ 3-4 ಜಿಲ್ಲೆಗೆ ಮಾತ್ರ ಮುಖ್ಯಮಂತ್ರಿಯಂತಿದ್ದಾರೆ. 104 ಶಾಸಕರನ್ನು ಹೊಂದಿರುವ ಬಿಜೆಪಿ ಏನಾದರೂ ದಂಗೆ ಎದ್ದರೆ ಸರ್ಕಾರವೇ ಉಳಿಯುವುದಿಲ್ಲ ಎಂದು ಪ್ರತಿಭಟನಾಕಾರರು ಗುಡುಗಿದರು.

ಯಡಿಯೂರಪ್ಪ ಜೈಲಿಗೆ ಹೋಗಿ ಬಂದವರು ಎಂದು ಪದೆ ಪದೇ ಟೀಕಿಸುವ ಕುಮಾರಸ್ವಾಮಿಯವರೇ ಬೇಲ್‌ ಮೇಲೆ ಹೊರಗೆ ಇದ್ದಾರೆ. ಮೇಧಾವಿ ರಾಜಕಾರಣಿಯಂತೆ ಮಾತನಾಡುವ ದೇವೇಗೌಡರು ವಿಧಾನ ಸಭೆಯ ಮುಂದೆಯೇ ರಾಮಕೃಷ್ಣ ಹೆಗಡೆಯವರಿಗೆ ಏನು ಮಾಡಿದ್ದರು ಎಂಬುದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ಅದೇ ಸಂಸ್ಕೃತಿ
ಮುಂದುವರೆಯುವಂತೆ ನಡೆದುಕೊಳ್ಳಲಾಗುತ್ತಿದೆ. 

Advertisement

ಯಡಿಯೂರಪ್ಪರವರಿಗೆ ಕಿಂಚಿತ್ತು ಏನಾದರೂ ಆದರೆ ಬಿಜೆಪಿ ದಂಗೆ ಏಳಬೇಕಾದೀತು. ಆದರೆ, ನಾವು ಬಿಜೆಪಿಯವರು ಶಾಂತಿಪ್ರಿಯರು. ದಂಗೆ ಏಳುವುದಿಲ್ಲ ಎಂದರು.

ಕುಮಾರಸ್ವಾಮಿಯವರು ಏನಾದರೂ ಕರೆ ನೀಡಬೇಕು ಎನ್ನುವುದಾದರೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ವಿರುದ್ಧ ದಂಗೆ ಏಳಲು ಕರೆ ನೀಡಬೇಕು. ಕಳೆದ ಮೂರು ತಿಂಗಳ ಹಿಂದೆಯೇ ಸರ್ಕಾರದ ಅಸ್ತಿತ್ವದ ಬಗ್ಗೆಯೇ ಹೇಳಿಕೆ ನೀಡಿದ್ದರು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆಡಳಿತ ಸರ್ಕಾರ ಸರಿಯಾಗಿ ನಡೆಯದಿದ್ದಾಗ ವಿಪಕ್ಷಗಳು
ಆಡಳಿತ ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡುವುದು ಸಹಜ. ಆಡಳಿತ ಪಕ್ಷ ತನ್ನ ಶಾಸಕರನ್ನು
ಸರಿಯಾಗಿ ಇಟ್ಟುಕೊಳ್ಳಬೇಕು. ಅದನ್ನು ಬಿಟ್ಟು ಹತಾಶೆಯಿಂದ ದಂಗೆಗೆ ಕರೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜ್ಯದ 13 ಜಿಲ್ಲೆಯಲ್ಲಿ ಬರ ಇದೆ. ಅಲ್ಲಿಗೆ ಭೇಟಿ ನೀಡುವ ಬದಲಿಗೆ ಶಾಸಕರ ಹಿಂದೆ ಸುತ್ತಲಾಗುತ್ತಿದೆ. ಯಡಿಯೂರಪ್ಪರಿಗೆ ರಾಜ್ಯ ಸರ್ಕಾರ ಸೂಕ್ತ ರಕ್ಷಣೆ ನೀಡಬೇಕು. ಸರ್ಕಾರ ರಕ್ಷಣೆ ನೀಡದಿದ್ದಲ್ಲಿ ಇಡೀ ಬಿಜೆಪಿ ಅವರಿಗೆ ರಕ್ಷಣೆಯಾಗಿ ನಿಲ್ಲಲಿದೆ. ಇದು ಸಾಂಕೇತಿಕ ಹೋರಾಟ ಮಾತ್ರ. ಇಂತಹ ಹೇಳಿಕೆ, ವರ್ತನೆ ಮುಂದುವರೆದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮಾಯಕೊಂಡ ಶಾಸಕ ಪ್ರೊ| ಎನ್‌. ಲಿಂಗಣ್ಣ, ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಎಚ್‌.ಎನ್‌. ಶಿವಕುಮಾರ್‌, ಎನ್‌. ರಾಜಶೇಖರ್‌, ಡಿ.ಎಸ್‌. ಶಿವಶಂಕರ್‌, ರಾಜನಹಳ್ಳಿ ಶಿವಕುಮಾರ್‌, ಮುಕುಂದಪ್ಪ, ಪಿ.ಸಿ. ಶ್ರೀನಿವಾಸ್‌, ಹೇಮಂತ್‌ ಕುಮಾರ್‌, ಸರೋಜಾ ದೀಕ್ಷಿತ್‌, ಚೇತನಾ ಶಿವಕುಮಾರ್‌, ಭಾಗ್ಯ ಪಿಸಾಳೆ, ಟಿಪ್ಪುಸುಲ್ತಾನ್‌,
ಶಿವನಗೌಡ ಪಾಟೀಲ್‌, ವೀರೇಶ್‌, ಟಿಂಕರ್‌ ಮಂಜಣ್ಣ, ನವೀನ್‌, ಧನುಶ್‌ ರೆಡ್ಡಿ, ಕಲ್ಲಪ್ಪ, ಲಿಂಗರಾಜ್‌, ಮನು
ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next