ಮಡಿಕೇರಿ:ಅತಿವೃಷ್ಟಿ ಹಾನಿ ಸಂತ್ರಸ್ತರಿಗೆ ಮನೆ ನಿರ್ಮಾಣ ಸೇರಿದಂತೆ ಪರಿಹಾರ ಕಾರ್ಯಗಳು ವಿಳಂಬವಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ, ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಒತ್ತಾಯಿಸಿದೆ.
ಮಳೆಹಾನಿ ಸಂತ್ರಸ್ತರನ್ನು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಆರೋಪಿಸಿ ಸಮಿತಿಯು ಸಂತ್ರಸ್ತರೊಂದಿಗೆ ನಗರದಲ್ಲಿ ಪ್ರತಿಭಟನೆ ನಡೆಸಿತು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಕಾರರು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ, ಸಮಿತಿಯ ಅಧ್ಯಕ್ಷ ಎಂ.ಬಿ.ದೇವಯ್ಯ, ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಹೋರಾಟವನ್ನು ತೀವ್ರ ಗೊಳಿಸಿದಾಗ ಮಾತ್ರ ಸರ್ಕಾರ ಎಚ್ಚೆತುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟ ಅವರು ರೈತಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಮಳೆಹಾನಿಯಿಂದ ಎಲ್ಲವನ್ನು ಕಳೆದುಕೊಂಡು ಅನಾಥ ಪ್ರಜ್ಞೆಯನ್ನು ಅನುಭವಿಸುತ್ತಿರುವ ಸಂತ್ರಸ್ತರ ಬಗ್ಗೆ ಚಿಂತೆ ಮಾಡುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.
ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ, ಜನಪ್ರತಿನಿಧಿಗಳು ರಾಜಿ àನಾಮೆ ನೀಡಿ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ತಿಳಿಸಿದರು.