Advertisement

ಅಪೂರ್ಣ ಕಾಮಗಾರಿಗೆ ನಿವಾಸಿಗಳ ಆಕ್ರೋಶ

04:49 PM Jan 01, 2020 | Team Udayavani |

ಮದ್ದೂರು: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಉಗ್ರನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಕಳಪೆ ಹಾಗೂ ಅತ್ಯಂತ ಮಂದಗತಿಯಲ್ಲಿ ಸಾಗಿದ್ದು, ಸುತ್ತಲಿನ ನಿವಾಸಿಗಳು ಹಾಗೂ ಭಕ್ತರು ಪರದಾಡುವಂತಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಕಾಮಗಾರಿ ಸ್ಥಗಿತ, ಭಕ್ತರ ಪರದಾಟ: ಎಪಿಎಂಸಿ ಮಾರುಕಟ್ಟೆಯಿಂದ ಸುಮಾರು 1.25 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ ಕಾಂಕ್ರಿಟ್‌ ರಸ್ತೆ, ಸಂತೆ ಮೈದಾನ ಅಭಿವೃದ್ಧಿ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕಳೆದ ಎರಡು ತಿಂಗಳ ಹಿಂದೆ ನರಸಿಂಹಸ್ವಾಮಿ ಸಂತೆ ಮೈದಾನದಲ್ಲಿ ನಡೆಯುತ್ತಿರುವ ಕಾಮಗಾರಿ ಅಪೂರ್ಣಗೊಂಡು, ಕೆಲಸ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆಗೆ ಬರುವ ವ್ಯಾಪಾರಸ್ಥರು, ಗ್ರಾಹಕರು, ರೈತರು, ಮಹಿಳೆಯರು ಪರದಾಡಿ, ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದರು.

ಆದರೂ ಅಧಿಕಾರಿಗಳು ಈ ಸಂಬಂಧ ಕಾಮಗಾರಿಗಳ ವೇಗ ಹೆಚ್ಚಿಸಲು ಕ್ರಮಕೈಗೊಂಡಂತೆ ಕಾಣುತ್ತಿಲ್ಲ. ಸಂರಕ್ಷಿತ ಪ್ರಾಚೀನ ಸ್ಮಾರಕ ಪ್ರದೇಶವೆಂದು ಪ್ರಾಚ್ಯವಸ್ತು ಸಂಗ್ರಾಹಲಯ ಮತ್ತು ಪರಂಪರೆ ಇಲಾಖೆ ಘೋಷಣೆ ಮಾಡಿದ್ದರೂ ದೇವಾಲಯದ ಸುತ್ತಲೂ ಕಾಮಗಾರಿ ನೆಪದಲ್ಲಿ ರಸ್ತೆ ಹಾಗೂ ಸಂತೆ ಮೈದಾನ ಹಾಳುಗೆಡವಲಾಗಿದೆ. ದೇವಾಲಯದ ಸುತ್ತಮುತ್ತಲ ಪ್ರದೇಶವನ್ನು ಜೆಸಿಬಿ ಯಂತ್ರದಿಂದ ಕಿತ್ತು ಹಾಕಿರುವುದರಿಂದ ಯಾತ್ರಿಗಳಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚಾಗಿದೆ.

ಕಳಪೆ ಕಾಮಗಾರಿ ಆರೋಪ: ರಾಜಬೀದಿ ರಸ್ತೆ, ಚರಂಡಿ ಕಾಮಗಾರಿ ಕಳಪೆಯಾಗಿದ್ದು, ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸುವಂ ತಾಗಿದೆ. ಅಪೂರ್ಣ ಕಾಮಗಾರಿಯಿಂದಾಗಿ ನಿತ್ಯವೂ ಸುತ್ತಲಿನ ಮನೆಗಳಿಗೆ ಧೂಳಿನ ಮಜ್ಜನವಾಗುತ್ತಿದ್ದು, ನಿವಾಸಿಗಳು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಜತೆಗೆ ನೈರ್ಮಲ್ಯದ ಕೊರತೆಯೂ ಇದ್ದು, ಪ್ರತಿನಿತ್ಯ ಶುಚಿಗೊಳಿಸಬೇಕಾದ ಅನಿವಾರ್ಯವಿದೆ.

ಭಕ್ತರಿಗೆ ಕಿರಿಕಿರಿ: ಇತಿಹಾಸ ಪ್ರಸಿದ್ಧ ಶ್ರೀ ಉಗ್ರ  ನರಸಿಂಹಸ್ವಾಮಿ, ಪಟ್ಟಾಭಿರಾಮ, ಶೀರಾಘವೇಂದ್ರ ದೇವಾಲಯ ಸೇರಿದಂತೆ ಏಷ್ಯಾಖಂಡದಲ್ಲೇ ಅತಿ ಎತ್ತರವಾದ ಶ್ರೀ ವರದರಾಜಸ್ವಾಮಿ ದೇವಾಲಯಗಳಿವೆ. ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಹಾಳುಗೆಡವಿರುವ ರಸ್ತೆ, ಅಪೂರ್ಣಗೊಂಡಿರುವ ಕಾಮಗಾರಿಯಿಂದಾಗಿ ಭಕ್ತರು ಕಿರಿಕಿರಿ ಅನುಭವಿಸಬೇಕಾದ ಸ್ಥಿತಿ ಬಂದೊದಗಿದೆ.

Advertisement

ಮನವಿಗೆ ಕ್ಯಾರೇ ಎನ್ನದ ಅಧಿಕಾರಿಗಳು: ಕಳೆದ ಎರಡು ತಿಂಗಳಿಂದಲೂ ಕಾಮಗಾರಿ ಪೂರ್ಣಗೊಳಿಸುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದರೂ ಕ್ರಮಕ್ಕೆ ಮುಂದಾಗದೆ ನಿರ್ಲಕ್ಷ್ಯವಹಿಸಿದ್ದಾರೆ. ಅಭಿವೃದ್ಧಿ ಕಾಮಗಾರಿ ನೆಪದಲ್ಲಿ ಬಿಡುಗಡೆಯಾಗಿರುವ ಹಣ ಸಮರ್ಪಕವಾಗಿ ಬಳಕೆಯಾಗದಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ. ದೇವಾಲಯದ ಸುತ್ತಲೂ ನೈರ್ಮಲ್ಯದ ಕೊರತೆ ಕಾಡುತ್ತಿದೆ. ಜಲ್ಲಿಕಲ್ಲುಗಳು ಹಾಗೂ ಕಿತ್ತು ಹಾಕಿರುವ ಡಾಂಬರನ್ನು ಎಲ್ಲೆಂದರಲ್ಲಿ ಹಾಕಿರುವುದರಿಂದ ವಾರದ ಸಂತೆಯಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಿ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ.

ರಸ್ತೆ ಎರಡು ಬದಿಯಲ್ಲಿ ಹಾಕಿರುವ ತ್ಯಾಜ್ಯ ಹಾಗೂ ಕಲ್ಲು, ಮಣ್ಣುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಜತೆಗೆ ಹಳ್ಳಕೊಳ್ಳಗಳಿಂದ ಕೂಡಿರುವ ಸಂತೆ ಮೈದಾನ ಹಾಗೂ ರಸ್ತೆಯನ್ನು ಸಮತಟ್ಟು ಮಾಡಿ ದೇವಾಲಯಕ್ಕೆ ಆಗಮಿಸುವ ಭಕ್ತರು, ವ್ಯಾಪಾರಸ್ಥರು ಹಾಗೂ ಗ್ರಾಹಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

-ಎಸ್‌.ಪುಟ್ಟಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next