ಯಾದಗಿರಿ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ನಡೆಸಲಾಗುವ ವಸತಿ ಶಾಲೆಗಳ 6ನೇ ತರಗತಿ ಪ್ರವೇಶ ಪರೀಕ್ಷೆ ಮಾ. 20ರಂದು ಜಿಲ್ಲಾದ್ಯಂತ ನಡೆಯುತ್ತವೆ ಎಂದು ಜಿಲ್ಲಾಧಿಕಾರಿ ಡಾ| ರಾಗಪ್ರಿಯಾ ಆರ್. ತಿಳಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಕುರಿತು ಏರ್ಪಡಿಸಲಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 18 ಪರೀಕ್ಷಾ ಕೇಂದ್ರಗಳನ್ನು ರಚಿಸಲಾಗಿದ್ದು, ಒಟ್ಟು 6312 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ ಎಂದರು.
ಗುರುಮಿಠಕಲ್ ಸರಕಾರಿ ಪದವಿ ಪೂರ್ವ ಬಾಲಕರ ಕಾಲೇಜು, ಹುಣಸಗಿ ಸರ್ಕಾರಿ ಬಾಲಕೀಯರ ಪ್ರೌಢಶಾಲೆ, ಹುಣಸಗಿ ಶ್ರೀ ಸಾಯಿ ವಿಜ್ಞಾನ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹುಣಸಗಿ ಸರಕಾರಿ ಪದವಿ ಪೂರ್ವ ಕಾಲೇಜು (ಬಾಲಕರ ಪ್ರೌಢ ಶಾಲಾ) ವಿಭಾಗ, ಹುಣಸಗಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಹುಣಸಗಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಶಹಾಪುರ ಶ್ರೀ ಚರಬಸವೇಶ್ವರ ಮಹಿಳಾ ಪದವಿ ಪೂರ್ವ ಕಾಲೇಜು, ಶಹಾಪುರ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಶಹಾಪುರ ಬಾಲಕೀಯರ ಸರಕಾರಿ ಪದವಿ ಪೂರ್ವ ಕಾಲೇಜು, ಶಹಾಪುರ ಡಿ. ದೇವರಾಜ ಅರಸು ಪ್ರೌಢಶಾಲೆ, ರಂಗಂಪೇಟ ಡಾ| ಅಂಬೇಡ್ಕರ್ ಪದವಿ ಪೂರ್ವ ಕಾಲೇಜು, ಸುರಪುರ ಪ್ರಭು ಕಲಾ, ವಿಜ್ಞಾನ, ವಾಣಿಜ್ಯ ಪದವಿ ಪೂರ್ವ ಕಾಲೇಜು, ರಂಗಂಪೇಟ ಪದವಿ ಪೂರ್ವ ಕಾಲೇಜು, ರಂಗಪೇಟ ಪ್ರಿಯದರ್ಶಿನಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಸುರಪುರ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಸುರಪುರ ಶರಣಬಸವ ಪದವಿ ಪೂರ್ವ ಕಾಲೇಜು, ವಡಿಗೇರಾ ಡಿಡಿಯು ಸ್ವತಂತ್ರ ಪದವಿ ಪೂರ್ವ ಕಾಲೇಜು, ಯಾದಗಿರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದರು.
ಪರೀಕ್ಷಾ ದಿನದಂದು ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಜಿಲ್ಲಾಧಿಕಾರಿ ಘೋಷಿಸಿದರು. ಪರೀಕ್ಷಾ ಕೇಂದ್ರದ ಉಪ ಅಧೀಕ್ಷಕರು ಒಎಂಆರ್ ಉತ್ತರ ಪತ್ರಿಕೆಯಲ್ಲಿ ಮುದ್ರಿತವಾಗಿರುವ ವಿದ್ಯಾರ್ಥಿ ಹೆಸರನ್ನು ಪರಿಶೀಲಿಸಿ ಅದೇ ವಿದ್ಯಾರ್ಥಿಗೆ ಉತ್ತರ ಪತ್ರಿಕೆ ನೀಡಿ. ಪರೀಕ್ಷಾ ಕೇಂದ್ರದ ಹೊರಗೆ ಬಂದೋಬಸ್ತ್ ಗಾಗಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲು ಹತ್ತಿರದ ಠಾಣೆಯ ಅಧಿಕಾರಿಗಳಿಗೆ ಸೂಚಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಡಿಸಿ ಸೂಚಿಸಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಡಿಡಿಪಿಯು ಚಂದ್ರಕಾಂತ ಹಿಳ್ಳಿ ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರ್ ಹಾಗೂ ಇನ್ನಿತರರಿದ್ದರು.