ಗಂಗಾವತಿ: ವಿಶ್ವಪರಂಪರಾ ಪ್ರದೇಶದಲ್ಲಿರುವ ಸ್ಮಾರಕಗಳ ಸುತ್ತ ಪಾವಿತ್ರ್ಯತೆ ಕಾಪಾಡಲು ಅಕ್ರಮ ರೆಸಾರ್ಟ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದನ್ವಯ ಮಂಗಳವಾರ ಬೆಳಗಿನ ಜಾವ 5 ಗಂಟೆಯಿಂದ ರೆಸಾರ್ಟ್‌ಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಗಡ್ಡಿಯಲ್ಲಿ 28 ಅನಧಿಕೃತ ವಾಣಿಜ್ಯ ಕಟ್ಟಡಗಳು 21 ಮನೆಗಳಿದ್ದು ಸ್ಮಾರಕಗಳ ಸಂರಕ್ಷಣೆ ದೃಷ್ಟಿಯಿಂದ ತಿಂಗಳೊಳಗೆ ಅನಧಿಕೃತ ಕಟ್ಟಡ ತೆರವು ಮಾಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೊಪ್ಪಳ ಜಿಲ್ಲಾಡಳಿತ ತೆರವಿಗೂ ಮುಂಚೆ ಗಡ್ಡಿಯಲ್ಲಿರುವ ರೆಸಾರ್ಟ್‌ಗಳಿಗೆ ಸುಪ್ರೀಂಕೋರ್ಟಿನ ಆದೇಶ ರವಾನಿಸಿ ಸ್ವಯಂ ಪ್ರೇರಣೆಯಿಂದ ಮನೆ ಸೇರಿ ಎಲ್ಲ ರೆಸಾರ್ಟ್‌ಗಳನ್ನು ತೆರವು ಮಾಡಿಕೊಳ್ಳಬೇಕೆಂದು ಸೂಚನೆ ನೀಡಿತ್ತು.
2011ರಲ್ಲಿ ರೆಸಾರ್ಟ್ ಮಾಲೀಕರು ಹಂಪಿ ಅಭಿವೃದ್ಧಿ ಪ್ರಾಧಿಕಾರದ ನಿಯಮಗಳ ರಚನೆ ಕುರಿತು ಆಕ್ಷೇಪಿಸಿ ಬೆಂಗಳೂರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಇದೇ ವೇಳೆ ವಿಚಾರಣೆಗೆ ಕೈಗೆತ್ತಿಕೊಂಡು ಸುಪ್ರೀಂಕೋರ್ಟಿನ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಹೈಕೋರ್ಟ್ ಮಾ.2ರಂದು ಪರ ಮತ್ತು ವಿರೋಧಅರ್ಜಿದಾರರ ವಾದ ಆಲಿಸಿದ ನಂತರ ಸುಪ್ರೀಂ ನೀಡಿದ್ದ ಆದೇಶ ಎತ್ತಿ ಹಿಡಿದು ರೆಸಾರ್ಟ್‌ಗಳ ತೆರವಿಗೆ ಪೂರಕ ತೀರ್ಪು ನೀಡಿದ್ದರಿಂದ ಹಂಪಿ ಅಭಿವೃದ್ಧಿ ಪ್ರಾಧಿಕಾರ ಕೊಪ್ಪಳ-ಬಳ್ಳಾರಿ ಜಿಲ್ಲಾಡಳಿತಕ್ಕೆ ಮನವಿ ಮಾಡಿ ರೆಸಾರ್ಟ್ ತೆರವು ಕಾರ್ಯಕ್ಕೆ ಸಹಕರಿಸುವಂತೆ ಮನವಿ ಮಾಡಿತು.
ಈ ಮಧ್ಯೆ ಕೊಪ್ಪಳ ಜಿಲ್ಲಾಧಿಕಾರಿ ತೆರವು ಕಾರ್ಯಕ್ಕೆ ತೊಂದರೆಯಾಗದಂತೆ ವಿರೂಪಾಪೂರಗಡ್ಡಿ ಪ್ರದೇಶದಲ್ಲಿ 144 ನಿಷೇಧಾಜ್ಞೆಯನ್ವಯ ಕರ್ಫ್ಯೂ ಹೇರಿ ಯಾರು ಸಹ ತೆರವು ಕಾರ್ಯಕ್ಕೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರು. ಮಂಗಳವಾರ ಬೆಳಗಿನ ಜಾವ 5 ಗಂಟೆಗೆ ಕೊಪ್ಪಳ ಜಿಲ್ಲೆಯ ಎಲ್ಲ ತಹಶೀಲ್ದಾರರು-ಇಒಗಳು ಸೇರಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯೊಂದಿಗೆ ಗಡ್ಡಿಗೆಆಗಮಿಸಿ ಹಿಟ್ಯಾಚಿ-ಜೆಸಿಬಿ ಮೂಲಕ ತೆರವು ಕಾರ್ಯ ನಡೆಸಿದ್ದಾರೆ. ಮೊದಲಿಗೆ ಶಾಂತಿ ಗೆಸ್ಟ್ ಹೌಸ್‌ನಿಂದ ತೆರವು ಕಾರ್ಯ ಆರಂಭಿಸಲಾಗಿದೆ.
ಕೋರ್ಟ್ ಆದೇಶದಂತೆ ವಿರೂಪಾಪೂರಗಡ್ಡಿಯಲ್ಲಿರುವ ಅನಧಿಕೃತ ಕಟ್ಟಡ ಮನೆಗಳನ್ನು ಸಂಪೂರ್ಣ ತೆರವು ಮಾಡುವವರೆಗೂ ಕಾರ್ಯಾಚರಣೆ ನಡೆಸಲಾಗುತ್ತದೆ. ಕೋರ್ಟ್ ಸೂಚನೆಯಂತೆ 28 ಅನಧಿಕೃತ ರೆಸಾರ್ಟ್, 21 ಮನೆಗಳಿದ್ದು ಸರ್ವೇ ನಡೆಸಿದಾಗ ಇನ್ನಷ್ಟು ಅನಧಿಕೃತ ಕಟ್ಟಡ ಪತ್ತೆಯಾಗಿವೆ. ಇದರಲ್ಲಿ 3 ರೆಸಾರ್ಟ್ ಮಾಲೀಕರು ಧಾರವಾಡ ಹೈಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಬಾಕಿ ಇದ್ದು ಅಗತ್ಯ ದಾಖಲಾತಿ ನ್ಯಾಯಾಲಯಕ್ಕೆ ಸಲ್ಲಿಸಿ ಅವುಗಳನ್ನು ತೆರವು ಮಾಡಲಾಗುತ್ತದೆ. ಮನೆಗಳಲ್ಲಿರುವ ಅಮೂಲ್ಯ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸುವ ತನಕ ಮನೆಗಳನ್ನು ತೆರವುಗೊಳಿಸುವುದಿಲ್ಲ. ಮನೆ ಕಳೆದುಕೊಂಡವರಿಗೆ ಹಂಪಿ-ಕಡ್ಡರಾಂಪೂರ ಹತ್ತಿರ ನಿವೇಶನ ನೀಡಲಾಗುತ್ತದೆ. ಇಲ್ಲಿ ಕೃಷಿ ಮಾಡಲು ಅವಕಾಶವಿದ್ದು, ವ್ಯಾಪಾರ-ವಹಿವಾಟಿಗೆ ಅವಕಾಶವಿಲ್ಲ.
– ಪಿ. ಸುನೀಲಕುಮಾರ, ಜಿಲ್ಲಾಧಿಕಾರಿ, ಕೊಪ್ಪಳ
ವಿರೂಪಾಪೂರಗಡ್ಡಿಗೆ ನಾಕಾಬಂಧಿ : ವಿರೂಪಾಪೂರಗಡ್ಡಿಯಲ್ಲಿರುವ ಅನಧಿಕೃತ ಕಟ್ಟಡಗಳ ತೆರವು ಹಿನ್ನೆಲೆಯಲ್ಲಿ ಗಡ್ಡಿಯೊಳಗೆ ಯಾರೊಬ್ಬರೂ ಪ್ರವೇಶಿಸದಂತೆ ಪುರಾತನ ಸೇತುವೆ (ಅಕ್ವಿಡೆಕ್ಟ್) ಹತ್ತಿರ ಪೊಲೀಸ್ ನಾಕಾಬಂಧಿ ಹಾಕಿ ಪತ್ರಿಕೆ ಮಾಧ್ಯಮದವರನ್ನು ಹೊರತುಪಡಿಸಿ ಯಾರಿಗೂ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ. ಎಲ್ಲಿ ನೋಡಿದರೂ ಪೊಲೀಸ್ ಕಾವಲು ಹಾಕಿದ್ದರಿಂದ ಸ್ಥಳೀಯರು ಯಾವ ಪ್ರತಿರೋಧ ಮಾಡದೇ ತೆರವು ಕಾರ್ಯ ನೋಡುತ್ತ ನಿಂತಿದ್ದರು. ಕೇವಲ ಮಹಿಳೆಯರು ಮಾತ್ರ ಮಾತ್ರ ಮನೆ ಉಳಿಸುವಂತೆ ಅಧಿಕಾರಿಗಳಿಗೆ ಕೈ ಮುಗಿದು ಮನವಿ ಮಾಡಿಕೊಂಡರು.
ಡಿಸಿಗೆ ಕೈ ಮುಗಿದ ಮಹಿಳೆಯರು : ನಾಲ್ಕು ದಶಕಗಳಿಂದ ಕೃಷಿ ಮಾಡಿಕೊಂಡು ವಿರೂಪಾಪೂರಗಡ್ಡಿಯಲ್ಲಿ ಜೀವನ ನಡೆಸುತ್ತಿದ್ದು, ಕೆಲವರು ಮಾತ್ರ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ. ಗಡ್ಡಿಯಲ್ಲಿರುವ ಜನ ವಸತಿ ಮನೆಗಳನ್ನು ತೆರವುಗೊಳಿಸದಂತೆ ಕೆಲವು ಮಹಿಳೆಯರು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಅವರಿಗೆ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು. ಹಲವು ದಶಕಗಳಿಂದ ಇಲ್ಲಿ ಕೃಷಿ ಹಾಗೂ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುವವರು ವಾಸವಾಗಿದ್ದು, ಮನೆಗಳನ್ನು ಹೊಡೆದು ಹಾಕಿದರೆ ಮುಂದೇನು? ಎಂದು ತೆರವು ಕಾರ್ಯಕ್ಕೆ ಆಗಮಿಸಿದ್ದ ಅಧಿಕಾರಿಗಳ ಹತ್ತಿರ ಅಲವತ್ತುಕೊಂಡರೂ ಪ್ರಯೋಜವಾಗಲಿಲ್ಲ.