ಬೆಂಗಳೂರು: ರಾಜಧಾನಿಯ ವಸತಿ ಕಟ್ಟಡಗಳಲ್ಲಿ ವಾಣಿಜ್ಯ ಚಟುವಟಿಕೆ ನಿರ್ಬಂಧಿಸಲು ಸರ್ಕಾರ ಮುಂದಾಗಿದ್ದು, ಒಂದೋ ಅಂಥ ಕಟ್ಟಡ ತೆರವುಗೊಳಿಸಬೇಕು ಅಥವಾ ವಾಣಿಜ್ಯ ಉದ್ದೇಶಕ್ಕೆ ಪರಿವರ್ತನೆ ಮಾಡಿಕೊಳ್ಳಬೇಕು ಎಂಬ ನಿಯಮ ರೂಪಿಸುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ .ಜಿ.ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿರುವ ವಸತಿ ಪ್ರದೇಶದಲ್ಲಿ ವಸತಿ ಉದ್ದೇಶದ ಸ್ಥಳಗಳ ಪೈಕಿ ಶೇ.30ರಷ್ಟು ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿವೆ. ಇದರಿಂದ ಬಿಎಂಪಿಗೆ ಸಾವಿರಾರು ಕೋಟಿ ರೂ. ಆದಾಯ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಪಾಲಿಕೆ ಆದಾಯ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಲಾಬಿ ತಪ್ಪಿಸಲು ಕ್ರಮ: ಕಸ ವಿಲೇವಾರಿ ಗುತ್ತಿಗೆದಾರರಿಗೆ ಹಣ ಪಾವತಿ ಆಗದ ಕಾರಣ ಅವರು ಪ್ರತಿಭಟನೆಗೆ ಇಳಿದಿದ್ದು, ಅವರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಈ ಮಧ್ಯೆ ಕಸ ವಿಲೇವಾರಿ ಗುತ್ತಿಗೆದಾರರ ಲಾಬಿಗೆ ಕಡಿವಾಣ ಹಾಕಲು ಕೂಡ ಯೋಚಿಸಲಾಗುತ್ತಿದೆ. ತ್ಯಾಜ್ಯ ವಿಲೇವಾರಿಗೆ ಎಷ್ಟು ಖರ್ಚಾಗುತ್ತಿದೆ? ಯಾವ ರೀತಿಯಲ್ಲಿ ವೆಚ್ಚ ಮಾಡಲಾಗುತ್ತಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾಗಿದೆ. ಈ ಬಗ್ಗೆ ಅಧ್ಯಯನ ನಡೆಸಿ ತ್ಯಾಜ್ಯ ವಿಲೇವಾರಿ ಸಮರ್ಪಕಗೊಳಿಸಲು ಶಾಶ್ವತ ವ್ಯವಸ್ಥೆ ರೂಪಿಸಲಾಗುವುದು ಎಂದು ಹೇಳಿದರು.
ಕಸದಿಂದ ವಿದ್ಯುತ್ ಉತ್ಪಾದನೆ ಕುರಿತಂತೆ ಚರ್ಚಿಸಲು ಫ್ರಾನ್ಸ್‌ನ ರಾಯಭಾರಿಗಳು ಬಂದಿದ್ದು, ಅವರ ತಂತ್ರಜ್ಞಾನ ಬಳಸಿಕೊಳ್ಳಲು ಚಿಂತಿಸಲಾಗಿದೆ. ಹಿಂದಿನ ಸಚಿವರು, ಕೌನ್ಸಿಲ್ ಈ ಕುರಿತು ಏನು ಕ್ರಮ ಕೈಗೊಂಡಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಈ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್
ತಿಳಿಸಿದರು.
ಮಳೆ ಅನಾಹುತ ತಡೆಗಟ್ಟಲು ಕ್ರಮ: ನಗರದಲ್ಲಿ ಜೋರು ಮಳೆ ಬಂದರೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಸಾಕಷ್ಟು ಹಾನಿ ಸಂಭವಿಸುತ್ತದೆ. ಈ ಹಿನ್ನೆಲೆಯಲ್ಲಿ ಮುಂದೆ ಮಳೆ ಬಂದಾಗ ಮತ್ತೆ ಸಮಸ್ಯೆ ಆಗದಂತೆ ಈಗಿನಿಂದಲೇ ಎಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇತ್ತೀಚೆಗೆ ಬಿದ್ದ ಮಳೆಯಿಂದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಒಂದು ವಾರದಲ್ಲಿ ಮುಚ್ಚಿ ರಸ್ತೆ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಮಳೆ ಹಾನಿಗೆ ಪ್ರಮುಖ ಕಾರಣ ರಾಜಕಾಲುವೆಗಳ ಒತ್ತುವರಿ ಎಂಬುದು ಈಗಾಗಲೇ ಸಾಬೀತಾಗಿದೆ. ಹೀಗಾಗಿ ರಾಜಕಾಲುವೆ ಮ್ಯಾಪಿಂಗ್ ಮಾಡಲು ಸೂಚಿಸಲಾಗಿದೆ. ಈ ಮೂಲಕ ರಾಜಕಾಲುವೆ ಮೂಲ ಹೇಗಿತ್ತು? ಪ್ರಸ್ತುತ ಯಾವ ಸ್ಥಿತಿಯಲ್ಲಿವೆ? ಎಷ್ಟು ಒತ್ತುವರಿಯಾಗಿವೆ ಎಂಬುದನ್ನು ತಿಳಿದು ಒತ್ತುವರಿ ತೆರವುಗೊಳಿಸಲಾಗುವುದು ಎಂದು ಹೇಳಿದರು. ಈಗಾಗಲೇ ಗುರುತಿಸಿರುವ ಪ್ರಕಾರ ಒತ್ತುವರಿ ತೆರವುಗೊಳಿಸುವ ಕೆಲಸ ಸಾಕಷ್ಟು ನಡೆದಿದೆ. ಚುನಾವಣೆ
ಕಾರಣದಿಂದಾಗಿ ಕೆಲಸ ನಿಲ್ಲಿಸಲಾಗಿತ್ತು. ಇದೀಗ ತೆರವು ಕಾರ್ಯ ಮುಂದುವರಿಸಲಾಗುವುದು ಎಂದು
ಉಪಮುಖ್ಯಮಂತ್ರಿಗಳು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.