Advertisement

ಕಲ್ಮಕಾರಿನ ಕುಟುಂಬಗಳಿಗೆ ಪದ್ನಡ್ಕದಲ್ಲಿ ನಿವೇಶನ

10:11 PM Oct 22, 2019 | mahesh |

ಸುಳ್ಯ ತಾ.ಪಂ. ಮಾಸಿಕ ಕೆಡಿಪಿ ಸಭೆ

Advertisement

ಸುಳ್ಯ: ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡ ಕಲ್ಮಕಾರಿನ 8 ಕುಟುಂಬಗಳಿಗೆ ಮೊದಲು ನೋಡಿದ್ದ ಜಾಗವನ್ನು ಬದಲಿಸಲಾಗಿದ್ದು, ಪ್ರಸ್ತುತ ಪದ್ನಡ್ಕದಲ್ಲಿ ಜಾಗ ಗುರುತಿಸಿ ಸರ್ವೆ ನಡೆಸಲಾಗಿದೆ ಎಂದು ತಾ.ಪಂ. ಮಾಸಿಕ ಕೆಡಿಪಿ ಸಭೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಪನ್ನೇ ಎನ್ನುವಲ್ಲಿ ಜಾಗ ಕೊಡ ಬೇಕೆಂದು ಸ್ಥಳೀಯರ ಬೇಡಿಕೆಯಂತೆ ಜಾಗದ ಸರ್ವೆ ನಡೆದಿತ್ತು. ಆದರೆ ಆ ಜಾಗ ಡೀಮ್ಡ್ ಫಾರೆಸ್ಟ್‌ ವ್ಯಾಪ್ತಿಗೆ ಬರುವುದರಿಂದ ಅದೇ ಗ್ರಾಮದ ಪದ್ನಡ್ಕದಲ್ಲಿ ಅಂತಿಮ ಗೊಳಿಸಲಾಗಿದೆ ಎಂದರು.

ಪ್ರಕೃತಿ ವಿಕೋಪದ ಹಾನಿಗೆ ಸರಕಾರದಿಂದ ಬಿಡುಗಡೆಯಾಗಿ ಬ್ಯಾಂಕ್‌ ಖಾತೆಗಳಿಗೆ ಬಂದ ಹಣ ಖರ್ಚಾಗುವ ಮೊದಲು ನಿವೇಶನಗಳನ್ನು ನೀಡುವ ಕೆಲಸ ಆಗಬೇಕು ಎಂದು ಅಧ್ಯಕ್ಷರು ಸೂಚಿಸಿದರು. ಕಂದಾಯ ನಿರೀಕ್ಷಕರ ಮತ್ತು ಪಂಚಾಯತ್‌ ಲೆಕ್ಕಾಧಿಕಾರಿಗಳ ವರದಿ ಹಾಗೂ ಗಡಿ ಗುರುತು ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಬಿಡುಗಡೆಯಾಗದ ಹಣವನ್ನು ನಿವೇಶನ ಹಂಚಿಕೆ ಆಗುವವರೆಗೆ ಸಂತ್ರಸ್ತರಿಗೆ ಬಿಡುಗಡೆ ಮಾಡದಂತೆ ತಹಶೀಲ್ದಾರ್‌ ಮೂಲಕ ಬ್ಯಾಂಕ್‌ಗಳಿಗೆ ಸೂಚನೆ ನೀಡಬೇಕು ಎಂದು ಚನಿಯ ಕಲ್ತಡ್ಕ ಹೇಳಿದರು.

ಹಾನಿ ಪಟ್ಟಿಗೆ ಸೇರಿಸಿ
ಪ್ರಕೃತಿ ವಿಕೋಪದಿಂದ ಹಾನಿಯಾದ ಕೊಲ್ಲಮೊಗ್ರ, ಮರ್ಕಂಜ, ಮಡಪ್ಪಾಡಿ ಮತ್ತು ಜಾಲೂರು ಗ್ರಾಮಗಳಲ್ಲಿನ ಕುಟುಂಬಗಳನ್ನು ಪ್ರಕೃತಿ ವಿಕೋಪಕ್ಕೆ ಹಾನಿ ಪಟ್ಟಿಗೆ ಸೇರಿಸುವ ಕೆಲಸ ಮಾಡಿ. ನೆರೆ ಸಂತ್ರಸ್ತರಿಗೆ ನಿವೇಶನ ನೀಡುವ ಕೆಲಸ ತತ್‌ಕ್ಷಣ ಮಾಡಿ ಎಂದು ತಾ.ಪಂ. ಇಒ ಎನ್‌. ಭವಾನಿಶಂಕರ್‌ ಹೇಳಿದರು.

Advertisement

ರಸ್ತೆ ಬದಿ ಕಟ್ಟಡಕ್ಕೆ ಕ್ರಮ
ಲೋಕೋಪಯೋಗಿ ರಸ್ತೆ ಬದಿ ಅಕ್ರಮವಾಗಿ ಕಟ್ಟಡಗಳನ್ನು ಕಟ್ಟುವ ಮೊದಲೇ ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಪಿಡಬ್ಲೂéಡಿ ಎಂಜಿನಿಯರ್‌, ಹಲವು ಕಡೆ ಅಕ್ರಮ ಕಟ್ಟಡ ಕಾಮಗಾರಿ ನಡೆಯುವಲ್ಲಿಗೆ ತೆರಳಿ ಸೂಚನೆ ನೀಡಲಾಗಿದೆ. ಕಾಮಗಾರಿ ನಡೆಯುತ್ತಿರುವ ಕಡೆ ಪೊಲೀಸರ ಸಹಕಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾಲುಬಾಯಿ ಲಸಿಕೆ
ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದ್ದು, ಸುಳ್ಯದಲ್ಲಿ 29,000 ಜಾನುವಾರುಗಳಿಗೆ ಲಸಿಕೆ ನೀಡುವ ಕಾರ್ಯ 4 ತಂಡಗಳ ಮೂಲಕ ನಡೆಯಲಿದೆ ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಗುರುಮೂರ್ತಿ ಹೇಳಿದರು.

ಟಿಸಿ ಬೇಡಿಕೆ ಅರ್ಜಿಗಳು ಬಾಕಿ
ಟಿ.ಸಿ. ಅಳವಡಿಕೆಗೆ ಸಂಬಂಧಿಸಿ ಮೆಸ್ಕಾಂಗೆ 2 ವರ್ಷಗಳ ಹಿಂದೆ ನೀಡಿದ ಅರ್ಜಿಗಳೂ ವಿಲೇವಾರಿಯಾಗದೆ ಬಾಕಿ ಇವೆ. ಇದರಿಂದ ಕೃಷಿಕರಿಗೆ ತೊಂದರೆ ಆಗುತ್ತಿದೆ ಎಂದು ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವೀ ಕಾಂಚೋಡು ಹೇಳಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಎ.ಇ. ಬಾಕಿ ಇದ್ದ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಲಾಗುವುದು. ಟಿ.ಸಿ.ಗಳ ಆವಶ್ಯಕತೆ ಇರುವ ಕಡೆ ಮೆಸ್ಕಾಂ ಇಲಾಖೆಯೇ ಟಿ.ಸಿ.ಗಳನ್ನು ಅಳವಡಿಕೆ ಮಾಡುತ್ತದೆ ಎಂದು ಹೇಳಿದರು.

ಸುಳ್ಯ ತಾಲೂಕಿನ ಶಾಲೆಗಳಲ್ಲಿ 1,250 ವಿದ್ಯಾರ್ಥಿಗಳಿಗೆ ಸೈಕಲ್‌ಗ‌ಳು, ಸಮವಸ್ತ್ರಗಳ ವಿತರಣೆ ಆಗಿದೆ. ಅಲ್ಲದೆ ತಾಲೂಕಿನ ಎರಡು ಕಡೆ ಶಿಕ್ಷಣ ಅದಾಲತ್‌ ನಡೆಯಲಿದೆ. ಪ್ರಕೃತಿ ವಿಕೋಪಗಳಿಂದ ಹಾನಿಯಾದ ಶಾಲೆಗಳಿಗೆ ಅನುದಾನ ಬಂದಿಲ್ಲ ಎಂದು ಶಿಕ್ಷಣಾಧಿಕಾರಿ ಮಹಾದೇವ ಮಾಹಿತಿ ನೀಡಿದರು.

ಸುಳ್ಯ ಮಹಿಳಾ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 7 ಹುದ್ದೆಗಳನ್ನು ಸರಕಾರ ಭರ್ತಿ ಮಾಡಿದೆ. ಅಲ್ಲದೆ ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯಡಿ ಕಳಂಜ ಗ್ರಾಮ ತಾಲೂಕಿನಲ್ಲಿ ಅಧಿಕ ಹೆಣ್ಣು ಮಕ್ಕಳು ಹುಟ್ಟಿದ ಪ್ರಶಸ್ತಿ ಪಡೆದುಕೊಂಡಿದೆ ಎಂದು ಸಿಡಿಪಿಒ ರಶ್ಮಿ ಹೇಳಿದರು.

ಸಿಕ್ಕಿಲ್ಲ ಸ್ಮಾರ್ಟ್‌ಕಾರ್ಡ್‌
ತಾಲೂಕಿನಲ್ಲಿ ಹಲವು ಮಂದಿ ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್‌ ಸಿಕ್ಕಿಲ್ಲ. ಕಾರ್ಡ್‌ಗಳನ್ನು ಕೂಡಲೇ ವಿತರಣೆ ಮಾಡಿ. ಇಲ್ಲದಿದ್ದರೆ ಕಟ್ಟಿದ್ದ ಹಣವನ್ನು ಹಿಂತಿರುಗಿಸಬೇಕು ಎಂದು ಜಾಹ್ನವೀ ಕಾಂಚೋಡು ಆಗ್ರಹಿಸಿದರು. ಉತ್ತರಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿ ಕಟ್ಟಡ ಕಾರ್ಮಿಕರ ನೋಂದಣಿ ಮಾಡುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇದೆ. ಸ್ಮಾರ್ಟ್‌ಕಾರ್ಡ್‌ ವಿತರಣೆ ನಡೆಯುತ್ತಿದೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ ಎಂದರು.

ಅರಣ್ಯ ಇಲಾಖೆಯಲ್ಲಿ ನೆಟ್ಟ ಗಿಡಗಳ ಪೋಷಣೆ ಮತ್ತು ನೆಡುತೋಪು ಕೆಲಸ ಆಗುತ್ತಿದೆ. 1,29,500 ಗಿಡಗಳನ್ನು ಬೆಳೆಸುತ್ತಿದ್ದೇವೆ ಎಂದು ಸುಳ್ಯ ವಲಯ ಅರಣ್ಯಾಧಿಕಾರಿ ಮಂಜುನಾಥ್‌ ಮಾಹಿತಿ ನೀಡಿದರು. ರಸ್ತೆ ಮಾರ್ಜಿನ್‌ ಬಿಟ್ಟು ಗಿಡಗಳನ್ನು ನೆಡಬೇಕು. ಸಾಮಾಜಿಕ ಅರಣ್ಯ, ಲೋಕೋಪಯೋಗಿ ಇಲಾಖೆ, ಅರಣ್ಯ ಮತ್ತು ಮೆಸ್ಕಾಂ ಅಧಿಕಾರಿಗಳು ಸೇರಿ, ಚರ್ಚಿಸಿ ಕೆಲಸ ಮಾಡಿ ಎಂದು ಅಧ್ಯಕ್ಷರು ಸೂಚಿಸಿದರು. ಸ್ಥಾಯೀ ಸಮಿತಿ ಅಧ್ಯಕ್ಷೆ ಜಾಹ್ನವಿ ಕಾಂಚೋಡು, ಇಒ ಎನ್‌. ಭವಾನಿಶಂಕರ್‌ ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next