Advertisement

ನಿವೇಶನ ರಹಿತರಿಗೆ ಆಯಾ ಗ್ರಾ.ಪಂ ವ್ಯಾಪ್ತಿಯಲ್ಲೇ ನಿವೇಶನ

10:46 PM Feb 20, 2020 | Sriram |

ಮಡಿಕೇರಿ: ಜಿಲ್ಲೆಯಲ್ಲಿ ನಿವೇಶನ ಹಾಗೂ ವಸತಿಗಾಗಿ ಹೋರಾಟಗಳು ನಡೆಯುತ್ತಿದ್ದು, ನಿವೇಶನ ರಹಿತರಿಗೆ ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲೇ ಜಾಗ ಗುರುತಿಸಿ ಕನಿಷ್ಠ ಎರಡೂವರೆ ಸೆಂಟ್ಸ್‌ ನಿವೇಶನ ಒದಗಿಸಲು ಜಿ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

Advertisement

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌ ಅವರ ಅಧ್ಯಕ್ಷತೆಯಲ್ಲಿ ನಗರದ ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಪ್ರಮುಖ ವಾಗಿ ನಿವೇಶನ ರಹಿತರ ಬಗ್ಗೆ ಚರ್ಚೆ ನಡೆಯಿತು.

ವಿಷಯ ಪ್ರಸ್ತಾವಿಸಿದ ಸದಸ್ಯ ಅಪ್ಪಚಂಡ ಮಹೇಶ್‌ ಅವರು ಕೊಡಗು ಜಿಲ್ಲೆಯಲ್ಲಿ ಮನೆ ಇಲ್ಲದ ಎಷ್ಟು ಕುಟುಂಬಗಳಿವೆ. ನಿವೇಶನ ಹಾಗೂ ವಸತಿ ರಹಿತ ಮೂಲ ನಿವಾಸಿ ಆದಿವಾಸಿಗಳಿಗೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಕನಿಷ್ಠ ಎರಡೂವರೆ ಸೆಂಟ್ಸ್‌ ಜಾಗವನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾತನಾಡಿದ ಅಪ್ಪಚಂಡ ಮಹೇಶ್‌ ಅವರು ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ ಎರಡು ಎಕರೆ ಭೂಮಿ ಗುರುತಿಸಿ ನಿವೇಶನ ರಹಿತರಿಗೆ ವಸತಿ ಕಲ್ಪಿಸುವಂತಾಗಬೇಕು ಎಂದು ಸಲಹೆ ನೀಡಿದರು.

ತಡೆಯಾಜ್ಞೆಯಿಂದ ವಿಳಂಬ
ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್‌ ಅತಿಕ್ರಮಣ ಭೂಮಿ ತೆರವು ಗೊಳಿಸುವ ಪ್ರಕ್ರಿಯೆ ಮುಂದು ವರಿದಿದೆ. ಆದರೆ ಈ ಸಂದರ್ಭದಲ್ಲಿ ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಾರೆ. ಆದ್ದರಿಂದ ಹಲವು ಸಮಸ್ಯೆ ಗಳನ್ನು ಎದುರಿಸಬೇಕಿದೆ. ಸದ್ಯ ಗ್ರಾ.ಪಂ. ವ್ಯಾಪ್ತಿಯಲ್ಲಿ ಲಭ್ಯವಿರುವ ಕಡೆ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ ಎಂದು ಅವರು ಮಾಹಿತಿ ನೀಡಿದರು.

ಸಭೆಯ ಆರಂಭದಲ್ಲಿ ಮಾತನಾಡಿದ ಜಿ.ಪಂ ಸದಸ್ಯರಾದ ಪುಟ್ಟರಾಜು ಅವರು ಜಿ.ಪಂ.ಬಿಡುಗಡೆಯಾದ ಅನುದಾನವನ್ನು ಎಲ್ಲ ಕ್ಷೇತ್ರಗಳಿಗೆ ಸಮಾನವಾಗಿ ಹಂಚಿಕೆ ಮಾಡಬೇಕು. ಇದರಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯ ಎಂದು ಅವರು ಸಲಹೆ ಮಾಡಿದರು.

Advertisement

ಮಾತನಾಡಿದ ಸದಸ್ಯರಾದ ಮುರಳಿ ಕರುಂಬಮ್ಮಯ್ಯ ಅವರು ಕ್ರಿಯಾ ಯೋಜನೆಗೆ ಅನುಮೋದನೆ ದೊರೆತಿದ್ದು, ಎಲ್ಲಾ ಕ್ಷೇತ್ರಗಳಿಗೂ ಸಮಾನ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್‌ ಅವರು ಕೊಡಗು ಜಿಲ್ಲೆಯಲ್ಲಿ ರೈತರ ಹಲವು ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳು ಜರಗುತ್ತಿವೆ ಎಂದು ಅವರು ತಿಳಿಸಿದರು. ಇದಕ್ಕೂ ಮುನ್ನ ವಿಷಯ ಪ್ರಸ್ತಾವಿಸಿದ ಬಾನಂಡ ಎನ್‌. ಪ್ರತ್ಯು ರೈತರ ಸಾಲ ಮನ್ನಾ ಸಮರ್ಪಕವಾಗಿ ಆಗಬೇಕು ಎಂದು ಗಮನ ಸೆಳೆದರು.

ಜಾಗ ಗುರುತಿಸಲಾಗಿದೆ
ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯಾ ಅವರು ಮಾತನಾಡಿ ಮಡಿಕೇರಿ ತಾಲೂಕಿನಲ್ಲಿ 13 ಎಕರೆ, ಸೋಮವಾರಪೇಟೆ ತಾಲೂಕಿನಲ್ಲಿ 15 ಎಕರೆ ಮತ್ತು ವಿರಾಜಪೇಟೆ ತಾಲೂಕಿನಲ್ಲಿ 49 ಎಕರೆ ಭೂಮಿ ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜಿ.ಪಂ. ಸದಸ್ಯರಾದ ಪಂಕಜಾ ಅವರು ಆದಿವಾಸಿಗಳು ಇಂದಿಗೂ ಸಹ ಪ್ಲಾಸ್ಟಿಕ್‌ ಹೊದಿಕೆಯಲ್ಲಿ ಮನೆ ಕಟ್ಟಿಕೊಂಡು ಬದುಕು ದೂಡುತ್ತಿದ್ದಾರೆ. ಇವರಿಗೆ ಶಾಶ್ವತ ವಸತಿ ಕಲ್ಪಿಸಬೇಕು ಎಂದು ನೋವು ತೋಡಿಕೊಂಡರು.

ಮೂಕೊಂಡ ವಿಜು ಸುಬ್ರಮಣಿ ಅವರು ಜಿಲ್ಲೆಯಲ್ಲಿ ಒಂದು ಅಥವಾ ಎರಡು ಎಕರೆ ಭೂಮಿ ಒತ್ತುವರಿ ಮಾಡಿಕೊಂಡಿರುವವರನ್ನು ತೆರವುಗೊಳಿಸಬಾರದು ಎಂದು ಒತ್ತಾಯಿಸಿದರು.

ಮಾತನಾಡಿದ ಶಿವುಮಾದಪ್ಪ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next