Advertisement
ಕಾವೇರಿ ಜಲಾನಯನ ಪ್ರದೇಶದಲ್ಲಿ ಬರುವ ಕೊಡಗು, ಹಾಸನ, ಮೈಸೂರು, ಮಂಡ್ಯ ಹಾಗೂ ಚಾಮರಾಜ ನಗರ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದರ ಪರಿಣಾಮ ಈ ಭಾಗದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಹೇಮಾವತಿ, ಹಾರಂಗಿ ಜಲಾಶಯಗಳಿಗೆ ಒಳ ಹರಿವು ಹೆಚ್ಚಳವಾಗಿದೆ. ಅತ್ತ ಕೇರಳದ ವೈನಾಡು ಪ್ರದೇಶದಲ್ಲೂ ಉತ್ತಮ ಮಳೆಯಾಗುತ್ತಿರುವುದರಿಂದ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯಕ್ಕೆ ಕೂಡ ಒಳ ಹರಿವು ಕಳೆದ ಮೂರು ದಿನಗಳಿಂದ ಹೆಚ್ಚಳವಾಗಿದೆ.
Related Articles
Advertisement
ಕಬಿನಿಗೆ ಒಳ ಹರಿವು: ಇನ್ನು ಕಾವೇರಿ ಕಣಿವೆಯ ಜಲಾಶಯಗಳಪೈಕಿ ಮೊದಲು ತುಂಬುವ ಜಲಾಶಯ ಎಂಬ ಹೆಗ್ಗಳಿಕೆ ಹೊಂದಿರುವ ಎಚ್.ಡಿ.ಕೋಟೆ ತಾಲೂಕು ಕಬಿನಿ ಜಲಾಶಯಕ್ಕೆ ಕೇರಳದ ವೈನಾಡು ಪ್ರದೇಶದಲ್ಲಿ ಉತ್ತಮವಾಗಿರುವುದರಿಂದ ಒಳ ಹರಿವು ಹೆಚ್ಚಳವಾಗಿದ್ದು, ಮೈದುಂಬಿ ಕೊಳ್ಳುತ್ತಿದೆ. 2284.00 ಅಡಿ ಗರಿಷ್ಟ ನೀರು ಸಂಗ್ರಹಣಾ ಸಾಮರ್ಥ್ಯದ ಕಬಿನಿ ಜಲಾಶಯಕ್ಕೆ ಗುರುವಾರ ಸಂಜೆಯ ಮಾಪನದ ಪ್ರಕಾರ 14000 ಕ್ಯೂಸೆಕ್ ಒಳಹರಿವು ಬರುತ್ತಿದ್ದು, ಜಲಾಶಯದ ಮಟ್ಟ 2260.04 ಅಡಿಗೆ ಏರಿಕೆಯಾಗಿದ್ದು, 2000 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಎರಡು ದಿನಗಳಿಂದ ಉತ್ತಮ ಮಳೆ: ಕಳೆದ ವರ್ಷ ಇದೇ ಅವಧಿಯಲ್ಲಿನ ಜಲಾಶಯಗಳ ನೀರಿನ ಮಟ್ಟ ಈ ವರ್ಷಕ್ಕಿಂತಲೂ ಉತ್ತಮವಾಗಿದ್ದರೂ ಜುಲೈ ನಂತರ ಮಳೆ ಕೈಕೊಟ್ಟಿದ್ದರಿಂದ ಈ ಭಾಗದ ಯಾವುದೇ ಜಲಾಶಯಗಳೂ ತುಂಬದೇ ಕೃಷಿ ಚಟುವಟಿಕೆಗೆ ತೊಂದರೆಯಾಗಿದ್ದು ಮಾತ್ರವಲ್ಲದೆ, ಜನ-ಜಾನುವಾರುಗಳ ಕುಡಿಯುವ ನೀರಿಗೂ ತೊಂದರೆ ಉಂಟಾಗಿತ್ತು.
ಈ ವರ್ಷ ಪೂರ್ವ ಮುಂಗಾರು ಉತ್ತಮವಾಗಿ ಸುರಿದ ಪರಿಣಾಮ ಬಿತ್ತನೆ ಮಾಡಿದ್ದ ರೈತರು ನಂತರದ ದಿನಗಳಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ದಿಕ್ಕು ಕಾಣದಂತಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಪುನರ್ವಸು ಮಳೆ ಉತ್ತಮವಾಗಿ ಸುರಿಯುತ್ತಿದೆ.
ಮುಂದಿನವಾರ ಜಲಾಶಯಗಳು ಭರ್ತಿಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳು ಮಾತ್ರವಲ್ಲದೆ, ನುಗು, ತಾರಕ, ಗುಂಡಾಲ್, ವಾಟೆಹೊಳೆ, ಮಾರ್ಕೋನಹಳ್ಳಿ, ಮಂಚನಬೆಲೆ, ಕಣ್ಣ ಮತ್ತು ಭೈರಮಂಗಲ ಜಲಾಶಯಗಳು ಸೇರಿದಂತೆ ಸಣ್ಣಪುಟ್ಟ ಜಲಾಶಯಗಳೂ ಮೈದುಂಬಿಕೊಳ್ಳುತ್ತಿದ್ದು, ಈ ವರ್ಷವೂ ಮುಂಗಾರು ಕೈಕೊಟ್ಟು ಬರಗಾಲ ಆವರಿಸಲಿದೆ ಎಂಬ ಮಾತುಗಳಿಗೆ ವಿರಾಮ ಹೇಳಿ, ಆಶಾದಾಯಕ ವಾತಾವರಣ ನಿರ್ಮಾಣವಾಗುತ್ತಲಿದೆ. ಜಲಾಶಯಗಳಿಗೆ ಇದೇ ರೀತಿ ಒಳ ಹರಿವು ಬಂದಲ್ಲಿ ಮುಂದಿನ ಒಂದು ವಾರದಲ್ಲಿ ಎಲ್ಲ ಜಲಾಶಯಗಳೂ ಭರ್ತಿಯಾಗಲಿವೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. * ಗಿರೀಶ್ ಹುಣಸೂರು