ಹೊಸದಿಲ್ಲಿ: ಮಾದಿಗ ಸಹಿತ ದೇಶದಲ್ಲಿ ಇರುವ ಪರಿಶಿಷ್ಟ ಜಾತಿ (ಎಸ್‌ಸಿ) ಗಳು ಎದು ರಿಸುತ್ತಿರುವ ಸಮಸ್ಯೆಗಳನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಸಮಿತಿ ರಚಿಸಿದೆ. ಹೀಗಾಗಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡುವಂತೆ ಒತ್ತಾಯವೂ ಹೆಚ್ಚುತ್ತಿರುವುದರಿಂದ ಕೇಂದ್ರ ಸರಕಾರವೇ ಈ ಬಗ್ಗೆ ಮಧ್ಯ ಪ್ರವೇಶಿಸಿದಂತಾಗಿದೆ.
ಸರಕಾರದ ವಿವಿಧ ಅಭಿವೃದ್ಧಿ ಯೋಜನೆಗಳು, ಮೀಸಲು ವ್ಯವಸ್ಥೆಯ ಲಾಭಗಳು ಪರಿಶಿಷ್ಟ ಜಾತಿಗಳ ವ್ಯಾಪ್ತಿಯಲ್ಲಿ ಬರುವ ಎಲ್ಲ ವರ್ಗದವರಿಗೂ ಲಭ್ಯವಾಗುತ್ತಿವೆಯೇ ಎಂಬುದನ್ನು ಈ ಸಮಿತಿ ಪರಿಶೀಲಿಸಲಿದೆ.
ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅದರಲ್ಲಿ ಗೃಹ, ಸಿಬಂದಿ ಮತ್ತು ತರಬೇತಿ, ಬುಡಕಟ್ಟು ವ್ಯವಹಾರಗಳು, ಸಾಮಾಜಿಕ ನ್ಯಾಯಖಾತೆ ಮತ್ತು ಕಾನೂನು ಸಚಿವಾಲಯಗಳ ಕಾರ್ಯದರ್ಶಿಗಳು ಇರಲಿದ್ದಾರೆ. ಪ್ರಧಾನಮಂತ್ರಿ ಮೋದಿ ಸೂಚನೆ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುವಾರವಷ್ಟೇ ಕರ್ನಾಟಕದಲ್ಲಿ ದಲಿತರಿಗೆ ಒಳ ಮೀಸಲಾತಿ ನೀಡಬೇಕು ಎಂಬ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಇದಾದ ಬೆನ್ನಲ್ಲೇ ಕೇಂದ್ರದಿಂದ ಹೊಸ ಸಮಿತಿ ರಚನೆಯಾಗಿದೆ.