Advertisement

ಅತೃಪ್ತರಿಗೆ ಸೀಟು ರಿಸರ್ವ್‌

01:43 AM Jul 29, 2019 | Sriram |

ಬೆಂಗಳೂರು: ಯಡಿಯೂರಪ್ಪ ನೇತೃತ್ವದ ಸರ್ಕಾರ ಬಹುಮತ ಸಾಬೀತಿಗೆ ಪ್ರಯತ್ನ ನಡೆಸುತ್ತಿರುವಂತೆಯೇ ಸಂಪುಟಕ್ಕೆ ಯಾರು ಸೇರಬೇಕು ಎಂಬ ಚರ್ಚೆ, ಕಸರತ್ತುಗಳು ಶುರುವಾಗಿವೆ. ಅನರ್ಹಗೊಂಡ 17 ಮಂದಿ ಶಾಸಕರು ಕೋರ್ಟಿನಲ್ಲಿ ಗೆದ್ದು ಬಂದ ನಂತರ ಕೊಡಲೆಂದೇ ಕೆಲವು ಖಾತೆಗಳನ್ನು ಭರ್ತಿ ಮಾಡದೇ ಇರಲು ಬಿಜೆಪಿ ನಿರ್ಧರಿಸಿದೆ.

Advertisement

ಹೀಗಾಗಿ, ವಿಶ್ವಾಸಮತ ಪ್ರಾಪ್ತಿಯಾದ ಬಳಿಕ ನಡೆಯುವ ಸಂಪುಟ ವಿಸ್ತರಣೆ ಪೂರ್ಣ ಪ್ರಮಾಣದ್ದು ಆಗಿರುವುದಿಲ್ಲ. ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರದಲ್ಲಿದ್ದಾಗಲೇ ಪಕ್ಷ ತೊರೆದ ಶಾಸಕರಿಗೆ ಬಿಜೆಪಿಯಲ್ಲಿ ಸೂಕ್ತ ಸ್ಥಾನಮಾನಗಳನ್ನು ಕೊಡಬೇಕಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಲ್ಲಿ ಕೆಲವರಿಗಂತೂ ಸಚಿವ ಸ್ಥಾನ ನೀಡಲೇ ಬೇಕಾದ ಒತ್ತಡವಿದೆ. ಇನ್ನಿತರರಿಗೆ ನಿಗಮ ಮಂಡಳಿ ನೀಡುವ ಸಾಧ್ಯತೆಯೂ ಇದೆ. ಬೆಂಗಳೂರಿನ ಶಾಸಕರಾದ ಆರ್‌. ಅಶೋಕ್‌, ಡಾ.ಅಶ್ವತ್ಥ್ ನಾರಾಯಣ, ಅರವಿಂದ ಲಿಂಬಾವಳಿ, ಸುರೇಶ್‌ ಕುಮಾರ್‌ ಮೊದಲಾದವರಲ್ಲಿ ಕೆಲವರಿಗಾದರೂ ಸಚಿವ ಸ್ಥಾನ ನೀಡಲೇ ಬೇಕಾಗುತ್ತದೆ. ಬಿಜೆಪಿ ನಾಯಕರಾದ ಕೆ.ಎಸ್‌.ಈಶ್ವರಪ್ಪ, ಶ್ರೀ ರಾಮುಲು, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಉಮೇಶ್‌ ಕತ್ತಿ, ಸಿ.ಎಂ.ಉದಾಸಿ, ಬಸವನಗೌಡ ಪಾಟೀಲ್ ಯತ್ನಾಳ್‌, ಬಾಲಚಂದ್ರ ಜಾರಕಿಹೊಳಿ, ವಿಶ್ವೇಶ್ವರ ಹೆಗಡೆ ಕಾಗೇರಿ, ಪರಣ್ಣ ಮುನವಳ್ಳಿ, ದತ್ತಾತ್ರೆಯ ಪಾಟೀಲ್, ಎಸ್‌.ಎ. ರಾಮದಾಸ್‌, ರೇಣುಕಾಚಾರ್ಯ, ಸಿ.ಸಿ.ಪಾಟೀಲ್, ಕರಾವಳಿ ಭಾಗದಿಂದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್‌, ಎಸ್‌.ಅಂಗಾರ, ಸಂಜೀವ ಮಟಂದೂರು, ರಘುಪತಿ ಭಟ್, ವೇದವ್ಯಾಸ ಕಾಮತ್‌ ಹೀಗೆ ಬಿಜೆಪಿ ಪಟ್ಟಿ ದೊಡ್ಡದಿದೆ. ಪರಿಷತ್‌ನಿಂದಲೂ ಹಿರಿತನದ‌ಲ್ಲಿ ಒಬ್ಬರಿಗೆ ಅಥವಾ ಇಬ್ಬರಿಗೆ ಸಚಿವ ಸ್ಥಾನ ನೀಡಬೇಕಾಗುತ್ತದೆ.

ಒಟ್ಟು ಇರುವ 34 ಖಾತೆಗಳಲ್ಲಿ 20ರಿಂದ 25 ಖಾತೆಗಳನ್ನು ಮಾತ್ರ ಈಗ ಭರ್ತಿ ಮಾಡಿಕೊಂಡು, ಉಳಿದ ಖಾತೆಗಳನ್ನು ಸಚಿವರಲ್ಲಿ ಕೆಲವರಿಗೆ ಹಂಚುವ ಅಥವಾ ಮುಖ್ಯಮಂತ್ರಿಯೇ ತನ್ನಲ್ಲಿ ಇಟ್ಟುಕೊಳ್ಳುವ ಬಗ್ಗೆಯೂ ಬಿಜೆಪಿಯ ರಾಜ್ಯ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಸದ್ಯ ಇರುವ 34 ಖಾತೆಗಳನ್ನು ಒಮ್ಮೆಗೆ ಹಂಚಿಕೆ ಮಾಡಿದರೆ ಅನರ್ಹ ಶಾಸಕರಿಗೆ ಏಕಾಏಕಿ ನಿರಾಸೆಯಾಗಲಿದೆ ಎಂಬ ಉದ್ದೇಶದಿಂದ ಕಾನೂನು ಹೋರಾಟಕ್ಕೆ ಮುಂದಾಗಿರುವ ಶಾಸಕರಿಗೆ ಸಂಪುಟ ರಚನೆಯಿಂದ ಸ್ವಲ್ಪವಾದರೂ ಆಸೆ ಜೀವಂತ ಉಳಿಸಲು ಬೇಕಾಗಿ ಈ ರೀತಿಯ ತಂತ್ರ ಅನುಸರಿಸಲಾಗುತ್ತದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

Advertisement

ಅನರ್ಹರಲ್ಲಿ ಬೆಂಗಳೂರಿನ ನಾಲ್ವರು ಶಾಸಕರಿದ್ದಾರೆ. ಹೀಗಾಗಿ ಬೆಂಗಳೂರಿನ ಕೋಟಾದಡಿ ಕನಿಷ್ಠ ಎರಡು ಖಾತೆಯಾದರೂ ಹಂಚಿಕೆ ಮಾಡದೇ ಉಳಿಸಿಕೊಳ್ಳಬೇಕಾಗುತ್ತದೆ. ಹಾಗೆಯೇ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ಮೈಸೂರು ಕರ್ನಾಟಕ ಭಾಗದ ಅನರ್ಹ ಶಾಸಕರಿಗೆ ಅವರ ಜಿಲ್ಲೆಯ ಪ್ರಾತಿನಿತ್ಯದಡಿ ಕೆಲವು ಸ್ಥಾನವನ್ನು ನೀಡಬೇಕಾಗಿರುವ ಪ್ರಯತ್ನ ಬಂದರೆ, ಹಂಚಿಕೆ ಮಾಡಲೇ ಬೇಕಾಗುತ್ತದೆ. ಹೀಗಾಗಿ ಆಯಾ ಜಿಲ್ಲೆಗಳ ಲೆಕ್ಕಾಚಾರದಲ್ಲಿ ಅನರ್ಹ ಶಾಸಕರನ್ನು ಗಮನದಲ್ಲಿ ಇಟ್ಟುಕೊಂಡು ಖಾತೆ ಹಂಚಿಕೆಯ ತಂತ್ರಗಾರಿಕೆ ಅನುಸರಿಸಲಾಗುತ್ತಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಸಚಿವ ಸಂಪುಟ ರಚನೆಯ ಸಂದರ್ಭದಲ್ಲಿ ಬಿಜೆಪಿ ಪಕ್ಷದಿಂದಲೇ ಬಡಾಯ ಬಿಸಿ ಕೂಡ ಎದುರಾಗಿವ ಸಾಧ್ಯತೆ ಇದೆ. ಇದನ್ನು ಸಮರ್ಪಕವಾಗಿ ನಿಭಾಯಿಸಲು ಬೇಕಾದ ಕಾರ್ಯತಂತ್ರವನ್ನು ಬಿಜೆಪಿ ನಾಯಕರು ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಜಾತಿ ಲೆಕ್ಕಚಾರ, ಹಿರಿತನ, ಆರ್‌ಎಸ್‌ಎಸ್‌ ಹಿನ್ನೆಲೆ, ಯುವ ನಾಯಕತ್ವ ಇದನ್ನೆಲ್ಲ ಮಾನದಂಡವಾಗಿ ಪರಿಗಣಿಸುವ ಜತೆಗೆ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯವನ್ನು ವೃದ್ಧಿಸಿಕೊಳ್ಳುವ ಸಲುವಾಗಿ ಈ ಭಾಗದಲ್ಲೇ ಪ್ರಮುಖರನ್ನು ಜಾತಿ ಆಧಾರದಲ್ಲಿ ಲೆಕ್ಕಾಚಾರ ಮಾಡಿ ಖಾತೆ ಹಂಚಿಕೆ ಮಾಡುವ ಬಗ್ಗೆಯೂ ಮಾತುಕತೆ ವರಿಷ್ಠರ ನಡುವೆ ನಡೆದಿದೆ ಎನ್ನಲಾಗಿದೆ.

ಯುವ ನಾಯಕರಿಗೆ ಆದ್ಯತೆ?

ಬಿಜೆಪಿ ಸರ್ಕಾರದಲ್ಲಿ ಯುವ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಕೇಳಿಬರುತ್ತದೆ. ಕರಾವಳಿಯ ಮೂರು ಜಿಲ್ಲೆಗಳ 19 ಶಾಸಕರಲ್ಲಿ 16 ಮಂದಿ ಬಿಜೆಪಿಗರಿದ್ದಾರೆ. ಯಲ್ಲಾಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿರುವ ಶಿವರಾಮ್‌ ಹೆಬ್ಟಾರ ಅವರು ಈಗ ಅನರ್ಹರಾಗಿರುವುದರಿಂದ 18ರಲ್ಲಿ 16 ಸ್ಥಾನ ಬಿಜೆಪಿ ಕೈಯಲ್ಲಿದೆ.(ಹಳಿಯಾಳದಲ್ಲಿ ಆರ್‌.ವಿ.ದೇಶಪಾಂಡೆ, ಉಳ್ಳಾಳದಲ್ಲಿ ಯು.ಟಿ.ಖಾದರ್‌ ಕಾಂಗ್ರೆಸ್‌ ಶಾಸಕ) ಸುಳ್ಯದ ಅಂಗಾರ, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಶಿರಸಿಯ ವಿಶ್ವೇಶ್ವರ ಹೆಗಡೆ ಕಾಗೇರಿ, ಉಡುಪಿಯ ರಘುಪತಿ ಭಟ್, ಕಾರ್ಕಳದ ವಿ.ಸುನಿಲ್ ಕುಮಾರ್‌ ಹಾಗೂ ಕಾಪು ಕ್ಷೇತ್ರದ ಲಾಲಾಜಿ ಮೆಂಡನ್‌ ಹೊರತುಪಡಿಸಿ ಉಳಿದ ಎಲ್ಲ ಶಾಸಕರು ಮೊದಲ ಬಾರಿಗೆ ಆಯ್ಕೆಯಾದವರಾಗಿದ್ದಾರೆ. ದ.ಕ. ಜಿಲ್ಲೆಯ 8 ಕ್ಷೇತ್ರದಲ್ಲಿ 7 ಮಂದಿ ಬಿಜೆಪಿ ಶಾಸಕರಿದ್ದು, ಅಂಗಾರ ಹೊರತುಪಡಿಸಿ ಉಳಿದ ಆರು ಮಂದಿ ಮೊದಲ ಬಾರಿಗೆ ಆಯ್ಕೆಯಾಗಿದ್ದರಿಂದ ಅವರಲ್ಲಿ ಯಾವರಿಗಾದರೂ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರಾವಳಿ ಭಾಗದಿಂದ ಬಿಜೆಪಿ ಪ್ರಮುಖರಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
Advertisement

Udayavani is now on Telegram. Click here to join our channel and stay updated with the latest news.

Next