Advertisement

ಸಾಲಮನ್ನಾ ಸಾಧಕ-ಬಾಧಕ ಚಿಂತಿಸಿ: ರಮೇಶ

05:16 PM Aug 24, 2018 | Team Udayavani |

ಚಿಕ್ಕೋಡಿ: ಸರಕಾರಗಳು ಕೇವಲ ರಾಜಕಾರಣಕ್ಕಾಗಿ ಸಾಲ ಮತ್ತು ಬಡ್ಡಿ ಮನ್ನಾ ಮಾಡಿ ಹೋಗದೇ, ಬಜೆಟ್‌ನಲ್ಲಿ ಅದಕ್ಕೆ ಹಣ ತೆಗೆದಿಡುವ ಕೆಲಸ ಮಾಡಬೇಕು ಎಂದು ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಹೇಳಿದರು. ತಾಲೂಕಿನ ಕೇರೂರ ಗ್ರಾಮದಲ್ಲಿ ಬಿಡಿಸಿಸಿ ಬ್ಯಾಂಕಿನ 88ನೇ ಶಾಖೆ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಸರಕಾರ ಸಾಲ ಮತ್ತು ಬಡ್ಡಿ ಮನ್ನಾ ಮಾಡುವ ಮೊದಲು ಅದರ ಸಾಧಕ, ಬಾಧಕಗಳನ್ನು ವಿಚಾರಣೆ ಮಾಡಬೇಕು. ಸರಕಾರ ಪ್ರತಿಯೊಂದರಲ್ಲಿಯೂ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು. ಹಿಂದಿನ ಸರಕಾರ ಘೋಷಣೆ ಮಾಡಿರುವ ಸಾಲ ಬಡ್ಡಿ ಹಣ ಬೆಳಗಾವಿ ಜಿಲ್ಲೆಗೆ ಇನ್ನೂ 619ಕೋಟಿ ರೂ. ಮೊದಲು ಕೊಡಬೇಕು. ರೈತರ ಜೀವನದೊಂದಿಗೆ ಚೆಲ್ಲಾಟವಾಡುವುದನ್ನು ನಿಲ್ಲಿಸಬೇಕು ಎಂದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬ್ಯಾಂಕಿನ ನಿರ್ದೇಶಕ ಡಿ.ಟಿ.ಪಾಟೀಲ ಮಾತನಾಡಿ, ಬಿಡಿಸಿಸಿ ಬ್ಯಾಂಕು ಕೇವಲ ಬೆಳೆ ಸಾಲಕ್ಕೆ ಸೀಮಿತವಾಗಿಲ್ಲ. ಉಳಿದ ರಾಷ್ಟ್ರೀಕೃತ ಬ್ಯಾಂಕಿನಂತೆ ವಿವಿಧ ರೂಪದ ಸಾಲಗಳನ್ನು ಕಡಿಮೆ ಬಡ್ಡಿ ದರದಲ್ಲಿ ನೀಡಲಾಗುತ್ತಿದ್ದು, ಈ ಭಾಗದ ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಈ ಭಾಗದ ರೈತರು ಬ್ಯಾಂಕಿನಿಂದ ದೊರೆಯುವ ಸಾಲ ಸೌಲಭ್ಯ ಪಡೆದುಕೊಂಡು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಂಡು ಮಿಶ್ರ ಬೆಳೆ ಬೆಳೆಯುವ ಮುಖಾಂತರ ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು ಎಂದು ಹೇಳಿದರು.

ಚಿಕ್ಕೋಡಿಯ ಸಂಪಾದನಾ ಚರಮೂರ್ತಿಮಠದ ಸಂಪಾದನಾ ಮಹಾಸ್ವಾಮಿಗಳು ಶಾಖೆ ಉದ್ಘಾಟಿಸಿದರು. ಮಾಜಿ ಶಾಸಕರಾದ ಬಾಳಾಸಾಹೇಬ ವಡ್ಡರ, ದತ್ತು ಹಕ್ಯಾಗೋಳ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಸುರೇಶ ಅಳಗುಂಡಿ, ಸುರೇಶ ಬೆಲ್ಲದ, ಅನ್ನಾಸಾಬ ಕೋಳಿ, ಮಲ್ಲಿಕಾರ್ಜುನ ಪಾಟೀಲ, ಚನಗೌಡ ಪಾಟೀಲ, ಎಂ.ಎ.ಪಾಟೀಲ, ಶೇಖರ ಪಾಟೀಲ, ಹರೀಶ ಇನಾಮದಾರ, ಮಹಾಂತೇಶ ಪಾಟೀಲ, ಟಿಸಿಒ ಎಂ.ಬಿ.ಖಟಾವಕರ, ಪಿ.ಡಿ.ನವಲೆ, ವಿ.ಎಸ್‌.ಮಾಳಿಂಗೆ, ಅನೀಲ ಅಂಬಿ ಮುಂತಾದವರು ಉಪಸ್ಥಿತರಿದ್ದರು. ಎ.ಸಿ.ಕಲ್ಮಟ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next