ನವದೆಹಲಿ: ಈ ಬಾರಿಯೂ ಶೇ.6.5ರ ರೆಪೋ (Repo) ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗುರುವಾರ (ಆಗಸ್ಟ್ 10) ಘೋಷಿಸಿದೆ.
ಇದನ್ನೂ ಓದಿ:NADA test: ರವೀಂದ್ರ ಜಡೇಜಗೆ ಐದು ತಿಂಗಳಲ್ಲಿ ಮೂರು ಬಾರಿ ಉದ್ದೀಪನ ಟೆಸ್ಟ್!
ಈಗಾಗಲೇ ಸತತ ಆರು ಬಾರಿ ರೆಪೋ ದರದಲ್ಲಿ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯಲ್ಲಿ ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ತಿಳಿಸಿದ್ದು, ಇದರೊಂದಿಗೆ ಗೃಹ, ವಾಹನಗಳ ಸಾಲಗಳ ಇಎಂಐ ಪಾವತಿದಾರರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಆಗಸ್ಟ್ 8ರಿಂದ ಮೂರು ದಿನಗಳ ಕಾಲ ಹಣಕಾಸು ನೀತಿ ಸಭೆ ನಡೆದಿದ್ದು, ಆರ್ ಬಿಐ ಸತತ ಮೂರನೇ ಬಾರಿ ಬಡ್ಡಿ ದರವನ್ನು ಏರಿಕೆ ಮಾಡಿಲ್ಲ. ಶೇ.6.5ರ ರೆಪೋ ದರ ಯಥಾಸ್ಥಿತಿ ಕಾಯ್ದುಕೊಳ್ಳುವ ಮೂಲಕ ಮಧ್ಯಮ ವರ್ಗದ ಸಾಲ ಪಾವತಿದಾರರಿಗೆ ನಿಟ್ಟುಸಿರು ಬಿಡುವಂತಾಗಿದೆ.
ದೇಶದಲ್ಲಿನ ಹಣದುಬ್ಬರ ಸ್ಥಿತಿಯನ್ನು ಆರ್ ಬಿಐ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹಣದುಬ್ಬರ ಇಳಿಕೆಗೆ ಸಾಕಷ್ಟು ಒತ್ತು ನೀಡಲಾಗಿದೆ. ಏತನ್ಮಧ್ಯೆ ಟೊಮ್ಯಾಟೊ, ಗೋಧಿ, ಅಕ್ಕಿಯ ಬೆಲೆ ಭಾರೀ ಹೆಚ್ಚಳವಾಗುತ್ತಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು ಎಂದು ವರದಿ ತಿಳಿಸಿದೆ.