ಬೆಂಗಳೂರು:ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ಕಲ್ಪಿಸಿಕೊಡಬೇಕೆಂಬ ಆಗ್ರಹಕ್ಕೆ ರಾಜ್ಯ ಸರ್ಕಾರ ಮಣಿಯುವ ಮೂಲಕ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಸಮಿತಿಯನ್ನು ರಚಿಸಿ, ಸಂಪುಟದಲ್ಲಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು 2 ತಿಂಗಳ ಸಮಯಾವಕಾಶ ಕೇಳಿದೆ. ಏತನ್ಮಧ್ಯೆ 2 ತಿಂಗಳೊಳಗೆ ಶೇ.7.5ರಷ್ಟು ಮೀಸಲಾತಿ ನೀಡದಿದ್ದರೆ ಸಾಮೂಹಿಕವಾಗಿ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪ್ರಸನ್ನಾನಂದಶ್ರೀ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ವಾಲ್ಮೀಕಿ ಸಮುದಾಯಕ್ಕೆ ಶೇ.7.5ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಗುರುಪೀಠದ ಪ್ರಸನ್ನಾನಂದಶ್ರೀ ಸ್ವಾಮೀಜಿ ನೇತೃತ್ವದಲ್ಲಿ ಜೂನ್ 9ರಿಂದ ದಾವಣಗೆರೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಪಾದಯಾತ್ರೆ ಆರಂಭಿಸಿದ್ದು, ಇಂದು ಪಾದಯಾತ್ರೆ ಬೆಂಗಳೂರು ತಲುಪಿತ್ತು.
ವಿಧಾನಸೌಧ ಮುತ್ತಿಗೆ ಹಾಕಲು ಯತ್ನಿಸಿದ್ದು, ಬಳಿಕ ಪ್ರತಿಭಟನೆಯನ್ನು ಫ್ರೀಡಂಪಾರ್ಕ್ ನಲ್ಲಿ ಮುಂದುವರಿಸಿದ್ದರು. ಸ್ಥಳಕ್ಕೆ ಸಿಎಂ ಕುಮಾರಸ್ವಾಮಿ ಆಗಮಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಮುಖಂಡ ವಿಎಸ್ ಉಗ್ರಪ್ಪ, ಬಿಜೆಪಿ ಮುಖಂಡ ಶ್ರೀರಾಮುಲು ಸಾಥ್ ನೀಡಿದ್ದರು.
ತದನಂತರ ಸರ್ಕಾರದ ಪರವಾಗಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದರು. ಶೇ.7.5ರಷ್ಟು ಮೀಸಲಾತಿ ಕೊಡಲು ಸರ್ಕಾರ ತಯಾರಿದೆ. ಆದರೆ ಇದಕ್ಕಾಗಿ ಸಮಿತಿಯನ್ನು ರಚಿಸಿ, ಸಂಪುಟದಲ್ಲಿ ಚರ್ಚಿಸಲು 2 ತಿಂಗಳ ಕಾಲಾವಕಾಶ ನೀಡಬೇಕೆಂದು ಕೇಳಿದ್ದರು.
ಈ ಹಿನ್ನೆಲೆಯಲ್ಲಿ ಪ್ರಸನ್ನಾನಂದ ಸ್ವಾಮೀಜಿ ಸರ್ಕಾರಕ್ಕೆ 2 ತಿಂಗಳ ಗಡುವು ನೀಡಿ, ಒಂದು ವೇಳೆ ಭರವಸೆಯನ್ನು ಈಡೇರಿಸದಿದ್ದರೆ ಪಕ್ಷಾತೀತವಾಗಿ ವಾಲ್ಮೀಕಿ ಸಮುದಾಯದ 15ಮಂದಿ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ. ಆಗ ಕುಮಾರಸ್ವಾಮಿ ಅಲ್ಲ, ಅವರ ತಂದೆಯೂ ನಮ್ಮ ಮಾತನ್ನು ಕೇಳಬೇಕು ಎಂಬ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.