ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಅಭಿಪ್ರಾಯ ತಿಳಿಸಿದ್ದೇನೆ. ನನ್ನನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ನಾನು ಲಾಬಿ ಮಾಡಿಲ್ಲ. ಮಾಡುವುದು ಇಲ್ಲ ಎಂದು ಎಂ.ಬಿ ಪಾಟೀಲ್ ಹೇಳಿದ್ದಾರೆ.
ರಾಜ್ಯದಲ್ಲಿ 1989 ರಲ್ಲಿ ವೀರೇಂದ್ರ ಪಾಟೀಲ್ ನಾಯಕತ್ವದಲ್ಲಿ ಕಾಂಗ್ರೆಸ್ 189 ಸ್ಥಾನ ಗೆದ್ದಿತ್ತು.ಆ ನಂತರ ಲಿಂಗಾಯತ ಸಮುದಾಯ ಕಾಂಗ್ರೆಸ್ ನಿಂದ ದೂರವಾಗಿದೆ. ಅದೇ ರೀತಿ ಅನೇಕ ಸಮುದಾಯಗಳು ಕಾಂಗ್ರೆಸ್ ನಿಂದ ದೂರವಾಗಿವೆ. ರಾಜ್ಯದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದರೆ ಎಲ್ಲ ಸಮುದಾಯಗಳ ವಿಶ್ವಾಸ ಪಡೆಯುವುದು ಅಗತ್ಯವಾಗಿದೆ ಎಂದರು.
ಕೆಪಿಸಿಸಿ ಅಧ್ಯಕ್ಷರ ನೇಮಕದಲ್ಲಿ ಯಾವ ಮಾನದಂಡ ಅನುಸರಿಸಿದರೆ ಅನುಕೂಲವಾಗುತ್ತದೆ ಎಂದು ಸೋನಿಯಾ ಗಾಂಧಿಯವರಿಗೆ ತಿಳಿಸಿದ್ದೇನೆ. ಸಿದ್ದರಾಮಯ್ಯ ಯಾರ ಪರವಾಗಿ ಅಭಿಪ್ರಾಯ ತಿಳಿಸಿದ್ದಾರೆಯೋ ಗೊತ್ತಿಲ್ಲ. ನನ್ನ ಪರವಾಗಿ ಹೇಳಿರುವ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಇಲ್ಲದ ಕಾಂಗ್ರೆಸ್ ಅನ್ನು ಊಹಿಸಲೂ ಸಾಧ್ಯವಿಲ್ಲ. ಸದ್ಯ ಅವರನ್ನು ಬಿಟ್ಟು ಪಕ್ಷ ಕಟ್ಟುವುದು ಕಷ್ಟ. ಸಿದ್ದರಾಮಯ್ಯ ಅವರ ನಾಯಕತ್ವ, ಖರ್ಗೆಯವರ ಸಲಹೆ ಹಾಗೂ ಎಲ್ಲ ಸಮುದಾಯದ ನಾಯಕರನ್ನು ಒಳಗೊಂಡಿರುವಂತೆ ಸ್ಥಾನಗಳನ್ನು ನೀಡಬೇಕಾಗುತ್ತದೆ.
ರಾಜ್ಯದಲ್ಲಿ ಲಿಂಗಾಯಿತ ಸಮುದಾಯಕ್ಕೆ ಶೇ 16 ರಷ್ಟು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ವಿಚಾರವಾಗಿ ಮಾತನಾಡಿ ಬಡವರಿಗೆ ಅನುಕೂಲವಾಗುವುದಾದರೆ ಮೀಸಲಾತಿಗೆ ನನ್ನ ಬೆಂಬಲವಿದೆ. ಬಡ ಲಿಂಗಾಯಿತ ವಿದ್ಯಾರ್ಥಿಗಳಿಗೆ ಇದರಿಂದ ಬಹಳ ಉಪಯೋಗವಿದೆ. ಮೀಸಲಾತಿ ನೀಡುವುದರಲ್ಲಿ ತಪ್ಪಿಲ್ಲ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಮೀಸಲಾತಿ ಕೊಟ್ಟಿದ್ದಾರೆ. ಮರಾಠಿಗರಿಗೆ ನೀಡಿದ ಮಾದರಿಯಲ್ಲೇ ರಾಜ್ಯದಲ್ಲೂ ಲಿಂಗಾಯಿತರು ಮನವಿ ಸಲ್ಲಿಸಿದ್ದಾರೆ. ಬಡ ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದರಿಂದ ಮೀಸಲಾತಿ ನೀಡಲು ನನ್ನ ಬೆಂಬಲವಿದೆ. ಎಂದು ಮೀಸಲಾತಿ ಪರ ಸರ್ಕಾರವನ್ನು ಇದೆ ವೇಳೆ ಒತ್ತಾಯಿಸಿದರು.