ಬಳ್ಳಾರಿ: ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸುವಂತೆ ಶಿಫಾರಸ್ಸು ಮಾಡಿರುವ ನ್ಯಾ. ನಾಗಮೋಹನ್‌ದಾಸ್ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ವಾಲ್ಮೀಕಿ ಸ್ವಾಮೀಜಿ ಈಗಾಗಲೇ ಅಹೋರಾತ್ರಿ ಧರಣಿ ನಡೆಸುತ್ತಿದ್ದು ರಾಜ್ಯ ಸರ್ಕಾರ 15 ದಿನಗಳಲ್ಲಿ ನಿರ್ಣಯ ಕೈಗೊಳ್ಳದಿದ್ದಲ್ಲಿ ಮೇ 20 ರಂದು ರಾಜ್ಯಾದ್ಯಂತ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಸ್ವಾಭಿಮಾನಿ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಮುಖಂಡ ನರಸಿಂಹ ನಾಯಕ ಎಚ್ಚರಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ, ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡುವಂತೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಎಚ್.ಡಿ. ಕುಮಾರಸ್ವಾಮಿಯವರು, ಜಸ್ಟೀಸ್ ನಾಗಮೋಹನ್ ದಾಸ್ ಅವರ ಏಕಸದಸ್ಯ ಸಮಿತಿಯನ್ನು ರಚಿಸಿದರು. ರಾಜ್ಯಾದ್ಯಂತ ಸಂಚರಿಸಿ ಸಮೀಕ್ಷೆ ನಡೆಸಿದ ನಾಗಮೋಹನ್ ದಾಸ್ ಅವರು, ವಿಸ್ತೃತ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಎಸ್‌ಸಿಗೆ ಶೇ.15 ರಿಂದ ಶೇ.17ಕ್ಕೆ, ಎಸ್‌ಟಿಗೆ ಶೇ.3 ರಿಂದ ಶೇ.7.5ಕ್ಕೆ ಹೆಚ್ಚಿಸುವಂತೆ ಶಿಫಾರಸ್ಸು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿಯವರು, ನಾಗಮೋಹನ್ ದಾಸ್ ವರದಿಯನ್ನು ಹೆಚ್ಚಿಸುವಂತೆ ಕಳೆದ ಮೂರು ತಿಂಗಳಿಂದ ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಕಳೆದ ಮಾ. 30ರಂದು ಸರ್ಕಾರದ ಪ್ರತಿನಿಧಿ ಗಳಾಗಿ ಸಚಿವರಾದ ಗೋವಿಂದ ಕಾರಜೋಳ, ಶಂಕರ್ ಪಾಟೀಲ್ ಮುನೇನಕೊಪ್ಪ, ಹಾಲಪ್ಪ ಬಿ ಆಚಾರ್, ಶಾಸಕರಾದ ರಾಜೂಗೌಡ, ಸೋಮಲಿಂಗಪ್ಪ, ಎಸ್.ವಿ.ರಾಮಚಂದ್ರಪ್ಪ, ಎನ್.ವೈ. ಗೋಪಾಲಕೃಷ್ಣ ಅವರ ನಿಯೋಗ ತೆರಳಿ ಸ್ವಾಮೀಜಿಗಳೊಂದಿಗೆ ಚರ್ಚಿಸಿದರು.
ಈ ವೇಳೆ ಸಚಿವರೆಲ್ಲರೂ 15 ದಿನ ಕಾಲಾವಕಾಶ ಕೊಡಿ ಅಷ್ಟರಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ 15 ದಿನಗಳ ಗಡುವು ಮುಗಿದಿದೆ. ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರದ ಈ ನಡೆಯನ್ನು ಸಮುದಾಯ ಸೂಕ್ಷ್ಮವಾಗಿ ಗಮನಿಸಿ ಮುಂದಿನ ನಡೆ ಹಾಗೂ ಹೋರಾಟದ ರೂಪುರೇಷೆ ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ ಎಂದು ವಿವರಿಸಿದರು.
ಈ ನಿಟ್ಟಿನಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಲು ರೂಪುರೇಷೆಗಳ ಸಿದ್ಧಪಡಿಸಲಾಗುತ್ತಿದೆ. ಸಮುದಾಯಗಳ ಜನರಲ್ಲಿ ಜಾಗೃತಿ ಮೂಡಿಸಲು ರಾಜ್ಯದ ನಾಲ್ಕು ಭಾಗಗಳಿಂದ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಸಪೇಟೆಯಲ್ಲಿ ಆರಂಭಿಸಿ, ಕಲಬುರಗಿ ಮೂಲಕ ಇದೀಗ ಬಳ್ಳಾರಿಯಲ್ಲಿ ಮುಕ್ತಾಯಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಮೇ 20ರಂದು ಬೆಂಗಳೂರಿನಲ್ಲಿ ಶ್ರೀಗಳ ಹೋರಾಟ ನೂರು ದಿನಗಳು ಪೂರೈಸಲಿರುವ ಹಿನ್ನೆಲೆಯಲ್ಲಿ ಅಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ರಸ್ತೆ, ರೈಲು ತಡೆ ಸೇರಿದಂತೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಅದಕ್ಕೂ ಸರ್ಕಾರದಿಂದ ಸ್ಪಂದನೆ ಲಭಿಸದಿದ್ದಲ್ಲಿ ರಾಜಧಾನಿಯನ್ನು ನಾಲ್ಕು ದಿಕ್ಕುಗಳಲ್ಲಿ ದಿಗ್ಬಂಧನ ಮಾಡುವ ಸಾಧ್ಯತೆಯಿದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರುಗಳಾದ ಶಾನವಾಸಪುರದ ದೊಡ್ಡ ಎರ್ರಿಸ್ವಾಮಿ, ಎ.ಮಾನಯ್ಯ, ರಾಮುನಾಯ್ಕ, ಸಿಂಗಪುರ ವೆಂಕಟೇಶ್, ಶ್ರೀನಿವಾಸ್, ನಾಗರಾಜ್ ಗಾಣದ ಉಣಸಿ, ಶಿವಾನಂದ್, ಜನಾರ್ಧನ ನಾಯಕ, ಚಲವಾದಿ ಮಹಾಸಭಾದ ನರಸಪ್ಪ ಇದ್ದರು.