ಸುವರ್ಣ ವಿಧಾನಸೌಧ: ರಾಜ್ಯದಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎಲ್ಲ ಇಲಾಖೆಗಳಲ್ಲಿ ಹಾಗೂ ಸರ್ಕಾರೇತರ ಸಂಸ್ಥೆಗಳಲ್ಲಿನ ಸಿ ಮತ್ತು ಡಿ ದರ್ಜೆ ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡಬೇಕೆಂಬ ಖಾಸಗಿ ನಿರ್ಣಯವನ್ನು ಶುಕ್ರವಾರ ವಿಧಾನಪರಿಷತ್ತಿನಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಅವರು ಮಂಡಿಸಿದ ಖಾಸಗಿ ನಿರ್ಣಯವನ್ನು ಸದನದಲ್ಲಿ ಮತಕ್ಕೆ ಹಾಕಲಾಯಿತು. ಬಳಿಕ ಧ್ವನಿಮತದ ಮೂಲಕ ನಿರ್ಣಯಕ್ಕೆ ಸದನದ ಅನುಮೋದನೆ ಪಡೆದುಕೊಳ್ಳಲಾಯಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಥಳೀಯ ಭಾಷೆ ಮಾತನಾಡುವ ಆಯಾ ರಾಜ್ಯದ ಜನರಿಗೆ ತಾಂತ್ರಿಕೇತರ ಸಿ ಮತ್ತು ಡಿ ಗ್ರೂಪ್ ಹುದ್ದೆಗಳನ್ನು ಮೀಸಲಿಡುವ ಯಾವುದೇ ಕಾನೂನು ನಿಯಮಗಳನ್ನು ರೂಪಿಸಿಲ್ಲ. ಇದರಿಂದ ಸ್ಥಳೀಯರು ಉದ್ಯೋಗ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಕರ್ನಾಟಕ ರಾಜ್ಯದಲ್ಲಂತೂ ಕೇಂದ್ರ ಸರ್ಕಾರದ ಬಹುತೇಕ ಹುದ್ದೆಗಳು ಅನ್ಯ ಭಾಷಿಕರ ಪಾಲಾಗಿವೆ. ಆದ್ದರಿಂದ ನಮ್ಮ ರಾಜ್ಯ ಸರ್ಕಾರ ಉಭಯ ಸದನಗಳಲ್ಲಿ ಸಂವಿಧಾನ ತಿದ್ದುಪಡಿಗಾಗಿ ಒಂದು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಖಾಸಗಿ ನಿರ್ಣಯ ಪ್ರಸ್ತಾಪದಲ್ಲಿ ಯು.ಬಿ. ವೆಂಕಟೇಶ್ ವಿವರಿಸಿದ್ದಾರೆ.
ಕೇಂದ್ರ ಸರ್ಕಾರದಲ್ಲಿನ ಶೇ.80ರಷ್ಟು ಹುದ್ದೆಗಳನ್ನು ಕನ್ನಡಿಗರಿಗೆ ಮೀಸಲಿಡುವ ಸಂಬಂಧ ಡಾ. ಸರೋಜಿನಿ ಮಹಿಷಿ ಅವರು ನೀಡಿದ ವರದಿ ದಶಕಗಳು ಕಳೆದರೂ ಜಾರಿಗೆ ಬಂದಿಲ್ಲ ಎಂದು ಖಾಸಗಿ ನಿರ್ಣಯ ಪ್ರಸ್ತಾಪದಲ್ಲಿ ಮನದಟ್ಟು ಮಾಡಲಾಗಿದೆ.