Advertisement

Reservation For Job: ಮೀಸಲಾತಿ ಮಸೂದೆ ಪರಾಮರ್ಶೆಗೆ ಸಂಪುಟ ಉಪಸಮಿತಿ ರಚನೆ?

12:15 AM Jul 18, 2024 | Team Udayavani |

ಬೆಂಗಳೂರು: ಅನುಮೋದನೆ ನೀಡಿರುವ ಮಸೂದೆಗೆ ತಾತ್ಕಾಲಿಕ ತಡೆ ನೀಡಿರುವ ಸರಕಾರ, ಜು. 22ರ ಸೋಮವಾರ ಸಚಿವ ಸಂಪುಟ ಸಭೆ ಕರೆದಿದ್ದು ಈ ವಿಚಾರವನ್ನು ಪರಾಮರ್ಶೆಗೆ ಒಳಪಡಿಸಲಿದೆ.

Advertisement

ಸಂಪುಟ ಸಭೆ ಅನುಮೋದಿಸಿ, ಇನ್ನೇನು ಅಧಿವೇಶನದಲ್ಲಿ ಮಸೂದೆ ಮಂಡಿಸುವ ಹಂತದಲ್ಲಿ ತಾತ್ಕಾಲಿಕ ತಡೆ ನೀಡಿರುವ ಸರಕಾರ ಕ್ರಮದ ವಿರುದ್ಧ ವಿಪಕ್ಷಗಳು ಈಗಾಗಲೇ ತಿರುಗಿಬಿದ್ದಿದ್ದು, ಕನ್ನಡಿಗರಿಗೆ ಉದ್ಯೋಗದ ಭರವಸೆ ನೀಡಿ ಮೋಸ ಮಾಡಿದೆ ಎಂದಿದೆ. ಇದಕ್ಕೆ ಕನ್ನಡಪರ ಸಂಘಟನೆಯೂ ಬೇಸರ ವ್ಯಕ್ತಪಡಿಸಿವೆ.

ಖಾಸಗಿ ವಲಯ ಉದ್ಯಮಿಗಳು ಸರಕಾರದ ನಡೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು ಉದ್ಯಮಿಗಳ ಅಸಮಾಧಾನ ತಣಿಸುವ ಕಾರ್ಯಕ್ಕೂ ಸರಕಾರ ಕೈಹಾಕಿದೆ. ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಮಸೂದೆಯ ಪರವಾಗಿದ್ದರೆ, ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಇದರ ವಿರುದ್ಧ ಇದ್ದಾರೆ. ಸಂಪುಟದಲ್ಲೇ ಒಡಕು ಧ್ವನಿ ಮೂಡಿರುವುದರಿಂದ ಸಚಿವರ ವಿವೇಚನೆಗೇ ಬಿಡಲು ಸಿಎಂ ನಿರ್ಧರಿಸಿದ್ದಾರೆ.

ಸೋಮವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ಈ ಮೂವರು ಸಚಿವರ ಜತೆಗೆ ಕಾನೂನು ಸಚಿವ ಎಚ್‌.ಕೆ. ಪಾಟೀಲ್‌, ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅವರನ್ನೊಳಗೊಂಡ ಸಂಪುಟ ಉಪಸಮಿತಿ ರಚಿಸುವ ಸಾಧ್ಯತೆಗಳಿವೆ. ಈ ಸಂಪುಟ ಉಪಸಮಿತಿಯ ಪರಾಮರ್ಶೆಗೆ ಉದ್ದೇಶಿತ ಮಸೂದೆಯನ್ನು ನೀಡಿ, ಅದಕ್ಕೊಂದು ರೂಪ ನೀಡಿದ ಬಳಿಕ ಮುಂದಿನ ದಿನಗಳಲ್ಲಿ ಯಾವ ರೀತಿ ಸಂಪುಟದ ಮುಂದೆ ತರಬೇಕೆಂದು ನಿರ್ಧರಿಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next