Advertisement

ಶ್ಮಶಾನಕ್ಕೆ ಜಾಗ ಮೀಸಲು ಕಡ್ಡಾಯ: ಸುನಿಲ್‌ ಕುಮಾರ್

11:24 AM May 18, 2022 | Team Udayavani |

ಪುತ್ತೂರು: ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಡೀಮ್ಡ್ ಫಾರೆಸ್ಟ್‌ ವಿರಹಿತದಿಂದ ಲಭ್ಯವಾಗುವ ಜಮೀನಿನಲ್ಲಿ ಶ್ಮಶಾನ, ಆಟದ ಮೈದಾನ, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಜಾಗ ಕಡ್ಡಾಯವಾಗಿ ಮೀಸಲಿಡುವಂತೆ ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಖಾತೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್‌ ಕುಮಾರ್‌ ಸೂಚನೆ ನೀಡಿದರು.

Advertisement

ಪುತ್ತೂರು ತಾ.ಪಂ. ಸಭಾಂಗಣದಲ್ಲಿ ತಾಲೂಕು ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಇದರೊಂದಿಗೆ ಐದು ಎಕ್ರೆ ಜಾಗ ನಿವೇಶನ ರಹಿತರಿಗೆ ನೀಡಲು ಕಾದಿರಿಸಬೇಕು ಎಂದು ನಿರ್ದೇಶಿಸಿದರು. ತಾಲೂಕಿನಲ್ಲಿ 3,326 ಹೆಕ್ಟೇರ್‌ ಡೀಮ್ಡ್ ಫಾರೆಸ್ಟ್‌ ವಿರಹಿತ ಗೊಂಡು ಕಂದಾಯ ಇಲಾಖೆಗೆ ಲಭ್ಯವಾಗಲಿದೆ. ಎಂದು ದ.ಕ. ಜಿ.ಪಂ. ಸಿಇಒ ಡಾ| ಕುಮಾರ್‌ ತಿಳಿಸಿದರು.

94ಸಿ ಅರ್ಜಿ ತಿರಸ್ಕರಿಸಬಾರದು

ಕಂದಾಯ ಇಲಾಖೆಯಿಂದ 94ಸಿ/94ಸಿಸಿ ಅರ್ಜಿ ವಿಲೇ ಪ್ರಗತಿ ಮಾಹಿತಿ ಪಡೆದ ಸಚಿವರು ವಿಲೇವಾರಿ ಆಗದ ಅರ್ಜಿ ತಿರಸ್ಕರಿಸದಂತೆ ತಹಶೀಲ್ದಾರ್‌ಗೆ ಸೂಚಿಸಿದರು.

ಜೂ. 30ರೊಳಗೆ ಐ-ಸ್ಕೆಚ್‌ಗೆ ಸೂಚನೆ

Advertisement

94ಸಿ ಅಡಿಯಲ್ಲಿ ಹೊಸದಾಗಿ ಸಲ್ಲಿಕೆಯಾಗಿರುವ ಅರ್ಜಿ ಗಳ ಪೈಕಿ 2,690 ಹಾಗೂ 94ಸಿಸಿಯಲ್ಲಿ 542 ಅರ್ಜಿ ವಿಲೇ ಆಗಬೇಕಿದೆ ಎಂದು ತಹಶೀಲ್ದಾರ್‌ ರಮೇಶ್‌ ಬಾಬು ಹೇಳಿ ದರು. ಜೂ. 30ರೊಳಗೆ ಸ್ಥಳ ಪರಿಶೀಲನೆ ನಡೆಸಿ ಐ ಸ್ಕೆಚ್‌ ಸಿದ್ಧಪಡಿಸಬೇಕು ಎಂದರು.

ಆರ್‌ಟಿಸಿ ಅಗತ್ಯ ಇಲ್ಲ

94ಸಿ/94ಸಿಸಿ ಅಡಿಯಲ್ಲಿ ದೊರೆತಿರುವ ಹಕ್ಕುಪತ್ರಕ್ಕೆ ಮಾನ್ಯತೆ ಇದ್ದು, ಆರ್‌ಟಿಸಿಯ ಅಗತ್ಯ ಇಲ್ಲ. ಬ್ಯಾಂಕ್‌ ಸಾಲ ಸೇರಿ ಇತರ ಯೋಜನೆಗಳಿಗೆ ಫಲಾನುಭವಿಗಳಿಂದ ಆರ್‌ಟಿಸಿ ನೀಡಲು ಕೇಳುತ್ತಿರುವ ದೂರು ಇದ್ದು, ಸಂಬಂಧಪಟ್ಟವರಿಗೆ ಸೂಚನೆ ನೀಡುವಂತೆ ಸಚಿವರು ನಿರ್ದೇಶಿಸಿದರು.

ವಿದ್ಯಾನಿಧಿ ಬಳಕೆ ಸಂಖ್ಯೆ ಕಡಿಮೆ

ಅಸಮಾಧಾನ ಕೃಷಿ ಇಲಾಖೆಯ ಮೂಲಕ ರೈತರ ಮಕ್ಕಳಿಗೆ ದೊರೆಯುವ ವಿದ್ಯಾನಿಧಿ ಸ್ಕಾಲರ್‌ ಶಿಪ್‌ನಲ್ಲಿ 4,827 ವಿದ್ಯಾರ್ಥಿಗಳು ಮಾತ್ರ ಸೌಲಭ್ಯ ಪಡೆದಿರುವ ಬಗ್ಗೆ ಸಚಿವ ಸುನಿಲ್‌ ಅಸಮಾಧಾನ ವ್ಯಕ್ತಪಡಿಸಿದರು. ಕೃಷಿ ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಸಭೆ ನಡೆಸಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಿ ವಿದ್ಯಾನಿಧಿ ಸೌಲಭ್ಯ ಪಡೆಯುವಂತೆ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು.

ನಗರಸಭೆ ಅಧ್ಯಕ್ಷ ಜೀವಂಧರ್‌ ಜೈನ್‌, ಪುಡಾ ಅಧ್ಯಕ್ಷ ಭಾಮಿ ಅಶೋಕ್‌ ಶೆಣೈ, ಸಹಾಯಕ ಆಯುಕ್ತ ಗಿರೀಶ್‌ ನಂದನ್‌, ಡಿವೈಎಸ್ಪಿ ಡಾ| ಗಾನಾ ಪಿ. ಕುಮಾರ್‌, ಮೆಸ್ಕಾಂ ಮಂಗಳೂರು ವೃತ್ತ ಅಧೀಕ್ಷಕ ಎಂಜಿನಿಯರ್‌ ಕೃಷ್ಣರಾಜ್‌ ಮತ್ತಿತರರು ಉಪಸ್ಥಿತರಿದ್ದರು.

ಉದಾಸೀನ ಸಹಿಸಲಾಗದು

ಇಲಾಖೆಯಿಂದ ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಅನ್ನುವುದು ಪ್ರಗತಿ ಪರಿಶೀಲನೆ ಸಭೆಯಿಂದ ಸ್ಪಷ್ಟವಾಗಿದೆ. ಅಧಿಕಾರಿಗಳ ಬಳಿ ಮೂಲ ಡಾಟಾ ಇರಬೇಕು. ಹೆಚ್ಚಿನ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ. ಉದಾಸಿನ, ತಾತ್ಸಾರ ಸಹಿಸಲ್ಲ ಎಂದು ಸುನಿಲ್‌ ಕುಮಾರ್‌ ಇಲಾಖಾಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಸಾಮಾನ್ಯ ಜನರ ದೂರು-ದುಮ್ಮಾನಗಳಿಗೆ ಸ್ಪಂದನೆ ನೀಡಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next