Advertisement
ವರ್ಷಕ್ಕೊಮ್ಮೆ ಮಹಾನಗರ ಪಾಲಿಕೆಗಳಿಗೆ ಮೇಯರ್, ಉಪಮೇಯರ್ ಮೀಸಲಾತಿ ಘೋಷಣೆ ಮಾಡಲಾಗುತ್ತದೆ. ಮೀಸಲಾತಿ ಆಧಾರದ ಮೇಲೆ ಹೊಸಬರು ಬಹುಮತ ಪಡೆದು ಆಯ್ಕೆಯಾಗುತ್ತಾರೆ. ಆದರೆ ಜಿಪಂ, ತಾಪಂ ಚುನಾವಣೆಗಳಿಗೆ ಎದುರಾದ ವಿಘ್ನವೇ ಈಗ ಮಹಾನಗರ ಪಾಲಿಕೆಗೂ ಎದುರಾಗಿದೆ. ಮೇಯರ್, ಉಪಮೇಯರ್ ಅವಧಿ ಒಂದು ವರ್ಷದಾಗಿದ್ದು ಮಾ.10ಕ್ಕೆ ಮುಕ್ತಾಯವಾಗಬೇಕಿತ್ತು. ಹೊಸ ಮೀಸಲಾತಿ ಕೂಡ ನಿಗದಿಯಾಗಬೇಕಿತ್ತು. ಆದರೆ ಸುಪ್ರೀಂ ಕೋರ್ಟ್ ಹಿಂದುಳಿದ ವರ್ಗಗಳನ್ನು ಸಾಮಾನ್ಯ ಮೀಸಲಿಗೆ ಒಳಪಡಿಸಬೇಕು ಎಂದಿರುವುದರಿಂದ ಮೀಸಲು ನಿಗದಿ ಪ್ರಕ್ರಿಯೆ ಸ್ಥಗಿತಗೊಂಡಿದೆ.
Related Articles
Advertisement
ಮೇಯರ್ ಅವಧಿ ಮುಗಿಯುವ ಮೊದಲೇ ತಮಗೆ ಬೇಕಾದ ಮೀಸಲು ಪಡೆಯಲು ಬೆಂಗಳೂರು ಭೇಟಿ ಶುರುವಾಗಿತ್ತು. ಸರ್ಕಾರದ ಮಟ್ಟದಲ್ಲಿ ಪ್ರಭಾವ ಬೀರುವಂತಹ ಜನಪ್ರತಿನಿಧಿಗಳ ಮೂಲಕ ಆಕಾಂಕ್ಷಿಗಳು ಎಡತಾಕುತ್ತಿದ್ದರು. ಸರದಿ ಪ್ರಕಾರ ಈ ಬಾರಿ ತಮ್ಮ ಪರ ಮೀಸಲು ಬರಬಹುದೆಂಬ ಲೆಕ್ಕಾಚಾರದಲ್ಲಿದ್ದ ಸದಸ್ಯರು ನಿರಾಶರಾಗಿದ್ದಾರೆ. ಮತ್ತೂಂದು ಕಡೆ ಒಂದು ವರ್ಷದ ಮೇಯರ್-ಉಪಮೇಯರ್ ಸ್ಥಾನಗಳಿಗೆ ಐದು ವರ್ಷದ ಅವಧಿಯಲ್ಲಿ ತಲಾ ಐವರಿಗೆ ಅವಕಾಶ ಸಿಗಬೇಕು. ಅದರೆ, ಪ್ರತಿ ಬಾರಿ ತಡವಾಗಿ ಪ್ರಕಟವಾಗುವ ಮೀಸಲು ಮತ್ತು ಈ ಬಾರಿ ಒಬಿಸಿ ಮೀಸಲು ಗೊಂದಲದಿಂದಾಗಿ ತಲಾ ನಾಲ್ವರಿಗೆ ಸೀಮಿತವಾಗಲಿದೆ. ಐದು ವರ್ಷದ ಅಧಿಕಾರ 2023ನೇ ಸೆಪ್ಟೆಂಬರ್‌ಗೆ ಅಂತ್ಯವಾಗಲಿದ್ದು ಒಂದೂವರೆ ವರ್ಷ ಮಾತ್ರ ಉಳಿದುಕೊಂಡಿದೆ.
58 ಸ್ಥಳೀಯ ಸಂಸ್ಥೆಗಳ ಅಧಿಕಾರಕ್ಕೂ ಗ್ರಹಣ
ಸುಪ್ರೀಂ ಕೋರ್ಟ್ ಆದೇಶ ಜಿಪಂ, ತಾಪಂ ಚುನಾವಣೆಗಳಿಗಷ್ಟೇ ಅಲ್ಲದೆ ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಮೀಸಲಿಗೂ ಗ್ರಹಣ ಹಿಡಿಸಿದೆ. 5 ನಗರಸಭೆ, 19 ಪುರಸಭೆ, 34 ಪಪಂಗಳಿಗೆ 2021, ಡಿ.27ರಂದು ನಡೆದ ಚುನಾವಣೆಯಲ್ಲಿ ಹೊಸ ಸದಸ್ಯರು ಆಯ್ಕೆಯಾಗಿ ಬಂದಿದ್ದಾರೆ. ಆದರೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲು ಪ್ರಕಟವಾಗದಿರುವುದರಿಂದ ಆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇದ್ದರೂ ಅಧಿಕಾರಿಗಳ ಆಡಳಿತ ಮುಂದುವರಿದಿದೆ.
ಒಬಿಸಿ ಮೀಸಲಾತಿ ಗೊಂದಲ ಇದ್ದು ಆಯೋಗ ರಚನೆ ಮಾಡಿ ಅದರ ಮೂಲಕ ಹೊಸ ಮೀಸಲಾತಿ ಘೋಷಣೆಗೆ ತೀರ್ಮಾನ ಮಾಡಲಾಗಿದೆ. ಈಗಿರುವ ಪರಿಸ್ಥಿತಿ ನೋಡಿದರೆ ಇನ್ನು ಮೂರ್‍ನಾಲ್ಕು ತಿಂಗಳು ಮೀಸಲಾತಿ ಘೋಷಣೆಯಾಗುವುದು ಅನುಮಾನ. ಸರ್ಕಾರದ ಸೂಚನೆಯಂತೆ ಅಲ್ಲಿವರೆಗೂ ಕೆಲಸ ಮಾಡಿಕೊಂಡು ಹೋಗಲಾಗುವುದು. –ಸುನೀತಾ ಅಣ್ಣಪ್ಪ, ಮೇಯರ್, ಶಿವಮೊಗ್ಗ ಮಹಾನಗರ ಪಾಲಿಕೆ
–ಶರತ್ ಭದ್ರಾವತಿ