ನವದೆಹಲಿ: ಸದ್ಯದಲ್ಲೇ ನೀವು ನಿಮ್ಮ ಬ್ಯಾಟರಿ-ಆಧಾರಿತ ಗ್ಯಾಜೆಟ್ಗಳು ಅಥವಾ ವಿದ್ಯುತ್ಚಾಲಿತ ವಾಹನಗಳನ್ನು ಅಲ್ಟ್ರಾ-ಫಾಸ್ಟ್ ವೇಗದಲ್ಲಿ ಚಾರ್ಜ್ ಮಾಡಬಹುದು!
ಗಾಂಧಿನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿಜಿಎನ್) ಮತ್ತು ಜಪಾನ್ ಅಡ್ವಾನ್ಸ್ಡ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಜೆಎಐಎಸ್ಟಿ) ಯ ಸಂಶೋಧಕರ ತಂಡವೊಂದು, ಕೆಲವೇ ಕೆಲವು ನಿಮಿಷಗಳೊಳಗೆ ಲೀಥಿಯಂ ಬ್ಯಾಟರಿಗಳನ್ನು ರೀಚಾರ್ಜ್ ಮಾಡಬಲ್ಲಂಥ ಹೊಸ ಅನೋಡ್(ವಿದ್ಯುತ್ಛಕ್ತಿಯ ಧ್ರುವ) ಪರಿಕರವನ್ನು ಅಭಿವೃದ್ಧಿಪಡಿಸಿದೆ.
ಟೈಟಾನಿಯಂ ಡಿಬೋರೈಡ್ನಿಂದ ತೆಗೆದ ನ್ಯಾನೋಶೀಟ್ಗಳನ್ನು ಬಳಸಿಕೊಂಡು ಈ ಹೊಸ 2ಡಿ ಅನೋಡ್ ಸಾಧನವನ್ನು ತಯಾರಿಸಲಾಗಿದೆ. ಇದು ಬ್ಯಾಟರಿಯನ್ನು ಅತ್ಯಂತ ವೇಗವಾಗಿ ಚಾರ್ಜ್ ಮಾಡುವುದರ ಜೊತೆಗೆ, ಅದು ದೀರ್ಘಾವಧಿ ಬಾಳಿಕೆ ಬರುವಂತೆಯೂ ನೋಡಿಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದು ವಿದ್ಯುತ್ಚಾಲಿತ ವಾಹನಗಳ ಹಾಗೂ ಗ್ಯಾಜೆಟ್ಗಳ ಯುಗವಾಗಿರುವ ಕಾರಣ, ಅಧಿಕ ವೇಗದ ಚಾರ್ಜಿಂಗ್ ತಂತ್ರಜ್ಞಾನದ ಅಗತ್ಯತೆಯೂ ಹೆಚ್ಚೇ ಇದೆ. ಈ ಕುರಿತು ಇನ್ನಷ್ಟು ಸಂಶೋಧನೆಗಳು ನಡೆದರೆ, ಇವಿ ಬಳಕೆದಾರರಿಗೆ ನೆರವಾಗಲಿದೆ. ಜತೆಗೆ, ವಾಯುಮಾಲಿನ್ಯ ತಗ್ಗಲೂ ಸಹಕಾರಿಯಾಗಲಿದೆ ಎಂದೂ ಅವರು ಹೇಳಿದ್ದಾರೆ.