ಬೆಂಗಳೂರು: ದೇಶದ ಪ್ರಗತಿ ಎಂದರೆ ಶ್ರೀಮಂತರ ಪಟ್ಟಿಗೆ ಸೇರುವುದಲ್ಲ. ದುರ್ಬಲ ವರ್ಗದ ಜನರಿಗೆ ಸೂಕ್ತ ಸೌಲಭ್ಯಗಳನ್ನು ಒದಗಿಸುವುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ಬದ್ಧತೆ ತೋರಬೇಕಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಸಲಹೆ ನೀಡಿದರು.
ಜಯನಗರದ ಸೌತ್ ಎಂಡ್ ವೃತ್ತದಲ್ಲಿ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನದ (ಐಎಸ್‌ಎಫ್) ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದ ಅವರು, ದೇಶವು ಎದುರಿಸುತ್ತಿರುವ ದೊಡ್ಡ ದೊಡ್ಡ ಸಮಸ್ಯೆಗಳ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಸಂಶೋಧಕ ಯೋಧರನ್ನು ಗುರುತಿಸಬೇಕಾಗಿದೆ ಎಂದರು.
ದೇಶವು ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದೆ. ನಾವು ರಾಕೆಟ್ ಮತ್ತು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ್ದೇವೆ. ಉಕ್ಕಿನ ಸ್ಥಾವರಗಳು, ವಿದ್ಯುತ್ ಸ್ಥಾವರಗಳು ಮತ್ತು ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ. ಕೊರೊನಾ ಲಸಿಕೆ ತಯಾರಿಸಿದ್ದೇವೆ, ಹೃದಯ ಮತ್ತು ಮೂತ್ರಪಿಂಡ ಕಸಿ ಮಾಡುತ್ತೇವೆ. ಆದರೂ, ದೇಶದ 140 ಕೋಟಿ ಭಾರತೀಯರಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ, ಪೋಷಣೆ ಮತ್ತು ಆಶ್ರಯದ ದೊಡ್ಡ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಸಾಕಷ್ಟು ದೂರದಲ್ಲಿದ್ದೇವೆ ಎಂದರು.
ಐಎಸ್‌ಎಫ್ ಟ್ರಸ್ಟಿ ಕ್ರಿಶ್ ಗೋಪಾಲಕೃಷ್ಣ ಮಾತನಾಡಿ, ಬೆಂಗಳೂರು, ಕರ್ನಾಟಕ ಮತ್ತು ಭವಿಷ್ಯದ ಭಾರತವನ್ನು ಕುರಿತು ಕೆಲಸ ಮಾಡಲಾಗುತ್ತದೆ. ಇದಕ್ಕಾಗಿ ಕಾಲೇಜುಗಳು, ನವೋದ್ಯಮಗಳು, ವಿಶ್ವವಿದ್ಯಾಲಯಗಳೊಂದಿಗೆ ಸಹಯೋಗ ಹೊಂದುವ ಮೂಲಕ ಉತ್ತಮ ಪರಿಸರ ಮತ್ತು ಉತ್ತಮ ಸಮಾಜ ನಿರ್ಮಾಣಕ್ಕೆ ಹೊಸ ಸಂಶೋಧನೆಗಳನ್ನು ನಡೆಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಎಂಜಿನಿಯರಿಂಗ್ ಮುಗಿಸಿ ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಆವಿಷ್ಕರಿಸಿರುವ ಪ್ರಯೋಗಗಳನ್ನು ಪ್ರಸ್ತುತಪಡಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಟ್ರಸ್ಟಿಗಳಾದ ಮೋಹನ್‌ದಾಸ್ ಪೈ, ನಂದನ್ ನಿಲೇಕಣಿ, ಬಾಟ್ನಿ, ಕೆ. ದಿನೇಶ್ ಹಾಗೂ ಎಸ್.ಡಿ. ಶಿಬುಲಾಲ್ ಉಪಸ್ಥಿತರಿದ್ದರು.
ಐಎಸ್‌ಎಫ್ ನ 25ನೇ ವರ್ಷಾಚರಣೆಗೆ ಸಿದ್ಧತೆ
2006ರಲ್ಲಿ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನ(ಐಎಸ್‌ಎಫ್) ವನ್ನು ಸ್ಥಾಪಿಸಿದ್ದು, ಅದರ 25ನೇ ವರ್ಷಾಚರಣೆಯನ್ನು ಸ್ಮರಣೀಯವಾಗಿಸಲು ಬಯಸಿದ್ದೇವೆ. ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಕೊಡುಗೆ ನೀಡಲು ಗಮನ ಹರಿಸಲಾಗುತ್ತಿದೆ. ವಿಜ್ಞಾನ, ಗಣಿತ ಮತ್ತು ಎಂಜಿನಿಯರಿಂಗ್ ಸಂಶೋಧಕರನ್ನು ಪೋ›ತ್ಸಾಹಿಸಿ ಸಂಶೋಧನೆಯನ್ನು ವೃತ್ತಿ ಜೀವನವಾಗಿ ಆಯ್ಕೆ ಮಾಡಿಕೊಳ್ಳುವ ಯುವಕರಿಗೆ ವೇದಿಕೆ ಕಲ್ಪಿಸಲಾಗುತ್ತದೆ ಎಂದು ಎನ್.ಆರ್. ನಾರಾಯಣ
ಮೂರ್ತಿ ತಿಳಿಸಿದರು.