Advertisement

ರೈತರಿಗೆ ತಲುಪಲಿ ಸಂಶೋಧನೆ ಫಲ

09:36 AM Feb 11, 2019 | |

ಚಿತ್ರದುರ್ಗ: ರೈತರು ನಗುತ್ತಿದ್ದರೆ ಮಾತ್ರ ದೇಶ ನಗಲು ಸಾಧ್ಯ. ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಯೋಜನೆಗಳನ್ನು ರೈತರಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದು ಸಂಸದ ಬಿ.ಎನ್‌. ಚಂದ್ರಪ್ಪ ಕರೆ ನೀಡಿದರು.

Advertisement

ಇಲ್ಲಿನ ತೋಟಗಾರಿಕೆ ಇಲಾಖೆ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಜಿಪಂ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ 28ನೇ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

ರೈತರ ಮುಖದಲ್ಲಿ ನಗು ನೋಡಿ ಎಷ್ಟೋ ವರ್ಷಗಳಾಗಿವೆ. ಅವರ ಮುಖದಲ್ಲಿ ಮಂದಹಾಸ ಮೂಡಿಸುವ ಕಾರ್ಯ ಮಾಡಬೇಕು. ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಿಗಳ ಸಂಶೋಧನೆ ರೈತರಿಗೆ ತಲುಪಬೇಕು. ಕಡಿಮೆ ನೀರಿನಲ್ಲಿ ಹೆಚ್ಚು ಫಸಲು ಬೆಳೆದು ಲಾಭ ತರುವ ಉತ್ತಮ ತಳಿಗಳನ್ನು ರೈತರಿಗೆ ಪರಿಚಯಿಸಬೇಕು ಎಂದರು.

ಫಲಪುಷ್ಪ ಪ್ರದರ್ಶನದಲ್ಲಿ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಯವರ ಪ್ರತಿಮೆ ಮತ್ತು ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತನೆ ಮಾಡಲಾಗಿರುವ ಅವರ ಸಾಧನೆಯ ಚಿತ್ರಗಳು ಆಕರ್ಷಣೀಯವಾಗಿವೆ. ಬಯಲುಸೀಮೆಯಲ್ಲಿ ಕಡಿಮೆ ನೀರಿನಲ್ಲಿ ಹೇಗೆ ಉತ್ತಮ ಫಸಲು ಪಡೆಯಬಹುದು ಎನ್ನುವ ಪ್ರಾತ್ಯಕ್ಷಿಕೆಯನ್ನು ನೋಡಿ ರೈತರು ತಮ್ಮ ಜಮೀನುಗಳಲ್ಲಿ ಪ್ರಯೋಗ ಮಾಡಬೇಕು ಎಂದು ಹೇಳಿದರು.

ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ರೀತಿಯ ಫಲಪುಷ್ಪ ಪ್ರದರ್ಶನ ಏರ್ಪಡಿಸುವುದರಿಂದ ರೈತರಿಗೆ ಉತ್ತೇಜನ ಸಿಗುತ್ತದೆ. ಜಿಲ್ಲೆಯ ಹಣ್ಣು, ಹೂವು, ತರಕಾರಿಗಳು ದೇಶ-ವಿದೇಶಗಳಿಗೆ ರಫ್ತಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ರೈತರ ಪರಿಶ್ರಮ. ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳಲ್ಲಿ ಮಳೆಯೇ ಬರುವುದಿಲ್ಲ. ಹಾಗಾಗಿ ಸದಾ ಬರಗಾಲ ಇರುತ್ತದೆ. ಇರುವ ಅಲ್ಪ ನೀರಿನಲ್ಲೇ ಹೆಚ್ಚಿನ ಇಳುವರಿ ಪಡೆಯುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಪ್ರದರ್ಶನಕ್ಕೆ ಇಟ್ಟಿರುವ ಬಹುತೇಕ ಹಣ್ಣು, ತರಕಾರಿ, ಹೂವು ಈ ಮೂರು ತಾಲೂಕಗಳಿಂದಲೇ ಜಾಸ್ತಿ ಬಂದಿವೆ. ಸತತ ಬರಗಾಲದ ಮಧ್ಯಯೂ ಜಿಲ್ಲೆಯ ರೈತರು ಕಡಿಮೆ ನೀರಿನಲ್ಲಿ ರೋಗ ರಹಿತ ಬೆಳೆಗಳನ್ನು ಬೆಳೆದು ಹೆಚ್ಚಿನ ಲಾಭ ಗಳಿಸುತ್ತಿರುವ ಪ್ರಗತಿಪರ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದರು.

Advertisement

ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಜಿಪಂ ಸಿಇಒ ಪಿ.ಎನ್‌. ರವೀಂದ್ರ ಮಾತನಾಡಿದರು. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಡಾ| ಜಿ. ಸವಿತಾ, ಸಹಾಯಕ ತೋಟಗಾರಿಕೆ ನಿರ್ದೇಶಕ ಡಾ| ಬಿ. ದೇವರಾಜ, ತಾಪಂ ಸದಸ್ಯೆ ಚಂದ್ರಕಲಾ ಇದ್ದರು. ಆಕಾಶವಾಣಿ ಕಾರ್ಯಕ್ರಮ ಮುಖ್ಯಸ್ಥ ಅರಕಲಗೂಡು ಮಧುಸೂದನ್‌ ಸ್ವಾಗತಿಸಿದರು.

ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ತಂತ್ರಜ್ಞಾನ ಬಳಸಿ ಹೆಚ್ಚಿನ ಫಸಲು ತೆಗೆಯುತ್ತಿರುವ ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ಸೌಲಭ್ಯ ಒದಗಿಸಬೇಕು. ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಹೊಣೆಗಾರಿಕೆ ಸರ್ಕಾರದ ಮೇಲಿದೆ.
• ಜಿ.ಎಚ್. ತಿಪ್ಪಾರೆಡ್ಡಿ, ಶಾಸಕರು.

Advertisement

Udayavani is now on Telegram. Click here to join our channel and stay updated with the latest news.

Next