ವಿಜಯಪುರ: ಹೊಸ ಜ್ಞಾನದ ಸೃಷ್ಟಿ ಜೊತೆಗೆ ಇರುವ ಜ್ಞಾನವನ್ನು ಪರಾಮರ್ಶಿಸಿ, ಪರಿಶೀಲನೆ ಮಾಡುವುದೇ ಸಂಶೋಧನೆ. ಸಂಶೋಧನೆಗಳು ನ್ಯಾಯೋಚಿತವಾದ ಸಮಗ್ರ ಪರಿವರ್ತನೆಗೆ ದಾರಿ ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ತುಳಸಿಮಾಲಾ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜಿಸಿದ್ದ “ಸ್ತ್ರೀವಾದಿ ಸಂಶೋಧನಾ ವೈಧಾನಿಕತೆ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಂಶೋಧನೆಯಲ್ಲಿ ಹಲವಾರು ವಿಧಾನಗಳಿದ್ದು ಅವುಗಳಲ್ಲಿ ನಮ್ಮ ಸಂಶೋಧನೆಗೆ ಸೂಕ್ತವಾಗಿರುವ ವಿಧಾನ ಬಳಸಿ ವಿಷಯ ವಿಶ್ಲೇಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಸಂಶೋಧನೆಯ ಫಲಶೃತಿಗಳು ಬದಲಾವಣೆಯ ಮಾರ್ಗಗಳನ್ನು ಸೂಚಿಸಬೇಕು. ಅಂದಾಗ ಮಾತ್ರ ಅದು ಸಮಾಜಕ್ಕೆ ಉಪಯುಕ್ತವಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯರ ಅಸ್ಮಿತೆ ಗುರುತಿಸಿ ಅವರ ಚಟುವಟಿಕೆ, ಸ್ಥಿತಿಗತಿ, ಅನುಭವಗಳನ್ನು ಆಧರಿಸಿ ನಡೆಸುವ ಸಂಶೋಧನೆಯೇ ಸ್ತ್ರೀವಾದಿ ಸಂಶೋಧನಾ ವಿಧಾನವಾಗಿದೆ. ಈ ವಿಧಾನವು ಮಹಿಳೆಯರಿಗಾಗಿ ಮಾಡುವ ಸಂಶೋಧನೆ ಹಾಗೂ ಮಹಿಳೆಯರ ಅನುಭವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದರು. ಪ್ರಸ್ತುತ ದಿನಮಾನದ ತಂತ್ರಜ್ಞಾನದಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ.
ಆ ಎಲ್ಲ ಬದಲಾವಣೆಗಳನ್ನು ಬಳಸಿಕೊಂಡು ಸ್ತ್ರೀವಾದಿ ಸಂಶೋಧನೆಯನ್ನು ಇನ್ನಷ್ಟು ವೈಜ್ಞಾನಿಕ ದೃಷ್ಟಿಕೋನದಿಂದ ಮಾಡಬಹುದು ಎಂದು ಅವರು ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು. ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ ಮುಖ್ಯಸ್ಥ ಬಿ.ಗಣೇಶ ಪವಾರ ಮಾತನಾಡಿ, ಭವಿಷ್ಯದಲ್ಲಿ ಸಂಶೋಧಕರ ಕೆಲಸ ತುಂಬ ಮಹತ್ವದ್ದಾಗಿದೆ. ಸಂಶೋಧನಾ ವಿಧಾನದ ಬಗ್ಗೆ ತಿಳಿದುಕೊಂಡು ಸೂಕ್ತ ವಿಧಾನವನ್ನು ಬಳಸಿ ಸಂಶೋಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.ಸಂಶೋಧನಾ ಮನೋಭಾವ ಬೆಳೆಸಿಕೊಳ್ಳಲು ಇದು ಸಹಕಾರಿಯಾಗಿದೆ. ಸಂಶೋಧನಾರ್ಥಿಗಳು ತಮ್ಮ ಆಲೋಚನೆಗಳನ್ನು, ವಿಚಾರಗಳನ್ನು ಸಂಶೋಧನೆಯಲ್ಲಿ ಬಳಸಿದಾಗ ಮಾತ್ರ ಅದು ಉಪಯುಕ್ತ ಆಗಲಿದೆ ಎಂದು ಸಲಹೆ ನೀಡಿದರು.
ಸಮಾಜ ವಿಜ್ಞಾನ ನಿಕಾಯದ ಡೀನ ಡಿ.ಎಂ. ಮಾದರಿ ಮಾತನಾಡಿ, ವಿದ್ಯಾರ್ಥಿನಿಯರಿಗೆ ಇಂತಹ ಕಾರ್ಯಾಗಾರಗಳು ಅತ್ಯಂತ ಉಪಯುಕ್ತವಾಗಿದ್ದು ಇದರ ಪ್ರಯೋಜನ ವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು. ಕಾರ್ಯಾಗಾರದಲ್ಲಿ ಮಹಿಳಾ ವಿವಿಯ ವಿವಿಧ ವಿಭಾಗಗಳ ಸಂಶೋಧನಾ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿನಿಯರು ಮಹಿಳಾ ಗೀತೆಯನ್ನು ಹಾಡಿದರು. ಅಹಲ್ಯಾಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ-ವಿಸ್ತರಣಾ ಕೇಂದ್ರದ ನಿರ್ದೇಶಕಿ ಡಾ| ಲಕ್ಷ್ಮೀದೇವಿ ಪ್ರಾಸ್ತಾವಿಕ ಮಾತನಾಡಿದರು. ಡಾ| ಭುವನೇಶ್ವರಿ ಕಾಂಬಳೆ, ಡಾ| ಶೈಲಾ ಬಳಗಾನೂರ ಪರಿಚಯಿಸಿದರು. ಡಾ| ಸುರೇಖಾ ರಾಠೊಡ ನಿರೂಪಿಸಿದರು. ಡಾ| ಮಂಜುಳಾ ದೇವಪ್ಪ ವಂದಿಸಿದರು.