Advertisement

ಮಂಗನ ಕಾಯಿಲೆ ಮದ್ದಿಗಾಗಿ ಸಂಶೋಧನೆ ಶುರು 

06:20 AM Oct 01, 2018 | Team Udayavani |

ಶಿವಮೊಗ್ಗ: ಮಲೆನಾಡು ಮತ್ತು ಕರಾವಳಿಯ ಕೆಲ ಭಾಗಗಳಲ್ಲಿ ಪ್ರತಿ ಚಳಿಗಾಲ ಮತ್ತು ಬೇಸಿಗೆಯಲ್ಲಿ ತೀವ್ರವಾಗಿ ಕಾಡುತ್ತಿರುವ ಮಂಗನ ಕಾಯಿಲೆಗೆ ಔಷಧ ಕಂಡುಹಿಡಿಯಲು ಕುವೆಂಪು ವಿಶ್ವವಿದ್ಯಾಲಯ ಮುಂದಾಗಿದೆ.

Advertisement

ಆರೋಗ್ಯ ಇಲಾಖೆಗೆ ಮಂಗನ ಕಾಯಿಲೆ ನಿಯಂತ್ರಣ ಇಂದಿಗೂ ದೊಡ್ಡ ಸವಾಲು. ಹೀಗಾಗಿ ಈ ಕಾಯಿಲೆಗೆ ಕುವೆಂಪು ವಿವಿಯ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗವು ಔಷಧ ಕಂಡು ಹಿಡಿಯಲು ಕಾರ್ಯಯೋಜನೆ ಹಾಕಿಕೊಂಡಿದೆ. ಮನುಷ್ಯನ ದೇಹಕ್ಕೆ ಅಂಟಿಕೊಂಡ ಮಂಗನ ಕಾಯಿಲೆಯನ್ನು ಅತಿ ಕಡಿಮೆ ಅವಧಿಯಲ್ಲಿ ಪತ್ತೆ ಮಾಡಬಹುದಾದ ವಿಧಾನ, ವ್ಯಾಕ್ಸಿನ್‌ ಮತ್ತು ಇದಕ್ಕೆ ನೀಡಬೇಕಾದ ಚಿಕಿತ್ಸಾ ಪದ್ಧತಿ ಇವನ್ನೆಲ್ಲ ಒಟ್ಟೊಟ್ಟಿಗೆ ಅಭಿವೃದ್ಧಿಪಡಿಸಲು ಸಂಶೋಧನೆ ಆರಂಭಗೊಂಡಿದೆ.

ಈವರೆಗೂ ಔಷಧವಿಲ್ಲ: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳ ಒಂದಲ್ಲ ಒಂದು ಕಡೆ ಪ್ರತಿವರ್ಷ ಕಾಣಿಸಿಕೊಳ್ಳುತ್ತಿರುವ ನರಕ ಸದೃಶವಾದ ಈ ಕಾಯಿಲೆಗೆ ಈವರೆಗೂ ಔಷಧವಿಲ್ಲ. ಹೆಚ್ಚಾಗಿ ದಟ್ಟ ಅಡವಿ ಹಾಗೂ ಅರಣ್ಯದ ಸುತ್ತಮುತ್ತಲಿನ ಊರುಗಳಲ್ಲಿ ವಾಸಿಸುವವರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುತ್ತದೆ. ಇದರ ನಿಯಂತ್ರಣಕ್ಕೆ ವ್ಯಾಕ್ಸಿನ್‌ ಇದೆಯಾದರೂ ಅದು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ. ಅಲ್ಲದೆ ಇದು ತೀವ್ರ ನೋವು ಉಂಟು ಮಾಡುವುದರಿಂದ ಅರಣ್ಯವಾಸಿಗಳು ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಹಿಂಜರಿಯುತ್ತಾರೆ.

40 ಲಕ್ಷ ರೂ.ಅನುದಾನ: ಪ್ರಖ್ಯಾತ ವಿಜ್ಞಾನಿ, ಭಾರತ ರತ್ನ ಪ್ರೊ| ಸಿ.ಎನ್‌.ಆರ್‌. ರಾವ್‌ ಅಧ್ಯಕ್ಷರಾಗಿರುವ ವಿಜನ್‌ ಗ್ರೂಪ್‌ ಆಫ್‌ ಸೈನ್ಸ್‌ ಆ್ಯಂಡ್‌ ಟೆಕ್ನಾಲಜಿ ಸಂಸ್ಥೆ ಈ ಸಂಶೋಧನೆಗೆ 40 ಲಕ್ಷ ರೂ. ಅನುದಾನ ಒದಗಿಸಿದೆ. 

ಮುಂಬೈನ ಪ್ರತಿಷ್ಠಿತ ಲೇಡಿ ಟಾಟಾ ಮೆಮೋರಿಯಲ್‌ ಟ್ರಸ್ಟ್‌ ಸಹ ಸಂಶೋಧನಾ ವಿದ್ಯಾರ್ಥಿ ಸೈಯದ್‌ ಹಫೀಜ್‌ ಅವರಿಗೆ ಐದು ವರ್ಷಗಳ ಫೆಲೋಷಿಪ್‌ ನೀಡಿದೆ. ಕೇರಳದ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯು ಸಂಶೋಧನೆಗೆ ಸಹಯೋಗ ನೀಡಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕ್ಯಾಸನೂರು ಅರಣ್ಯ ವಿಭಾಗದ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ.

Advertisement

ಡಿಸೆಂಬರ್‌ನಿಂದ ಸಂಶೋಧನೆ ಚುರುಕು: ಸಂಶೋಧನೆಗೆ ಅಗತ್ಯವಾಗಿರುವ ಕಾಯಿಲೆ ಪೀಡಿತರ ರಕ್ತದ ಮಾದರಿಗಾಗಿ ಹ್ಯೂಮನ್‌ ಎಥಿಕಲ್‌ ಕ್ಲಿಯರೆನ್ಸ್‌ ಸೆಂಟರ್‌ನಿಂದ ಕೋರಲಾಗಿದ್ದ ಅನುಮತಿಗೂ ಹಸಿರು ನಿಶಾನೆ ಸಿಕ್ಕಿದ್ದು ನವೆಂಬರ್‌ ಅಂತ್ಯದೊಳಗೆ ಪ್ರಮಾಣಪತ್ರ ಲಭ್ಯವಾಗಲಿದೆ. ಡಿಸೆಂಬರ್‌ನಿಂದ ಕಾಯಿಲೆ ಪೀಡಿತರ ರಕ್ತದ ಸ್ಯಾಂಪಲ್‌ ಪಡೆದುಕೊಳ್ಳಬಹುದಾಗಿದ್ದು ನಂತರ ಸಂಶೋಧನೆ ಚುರುಕು ಪಡೆದುಕೊಳ್ಳಲಿದೆ.

ಕ್ಯಾಸನೂರು ಕಾಯಿಲೆಯ ತವರು
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಕ್ಯಾಸನೂರಲ್ಲಿ ಮೊಟ್ಟ ಮೊದಲ ಬಾರಿಗೆ 1957ರಲ್ಲಿ ಕಾಣಿಸಿಕೊಂಡ ಈ ಕಾಯಿಲೆಗೆ ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್‌ಡಿ) ಎಂದು ಕರೆಯಲಾಗಿತ್ತು. ಈ ಕಾಯಿಲೆ ಮಂಗಗಳ ಮೂಲಕ ಹರಡುವುದರಿಂದ ಇದಕ್ಕೆ ಮಂಗನ ಕಾಯಿಲೆ ಎಂಬ ಹೆಸರು ಬಂತು. ಮಂಗನ ಕಾಯಿಲೆಯು ಚಿಕೂನ್‌ಗುನ್ಯಾಕ್ಕಿಂತಲೂ ಮಾರಕವಾಗಿರುತ್ತದೆ. ಮಂಗಗಳಲ್ಲಿ ಕಾಣಿಸಿಕೊಳ್ಳುವ ಕಾಯಿಲೆಯು ಸೂಕ್ಷ್ಮ ಉಣುಗು (ಟಿಕ್ಸ್‌)ಗಳು ಮನುಷ್ಯನನ್ನು ಕಚ್ಚುವುದರಿಂದ ಈ ಕಾಯಿಲೆ ಬರುತ್ತದೆ. ನವೆಂಬರ್‌ನಿಂದ ಮೇ ನಡುವೆ ದಟ್ಟ ಅರಣ್ಯದ ನಡುವಿನ ಹಳ್ಳಿಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.

ಮಂಗನಕಾಯಿಲೆಗೆ ವ್ಯಾಕ್ಸಿನ್‌, ಔಷಧ ಕಂಡು ಹಿಡಿಯುವುದಲ್ಲದೆ ಕುವೆಂಪು ವಿವಿಯಲ್ಲಿ ಶಾಶ್ವತ ಕೆಎಫ್‌ಡಿ ಸಂಶೋಧನಾ ಕೇಂದ್ರ ತೆರೆಯಬೇಕೆಂಬ ಯೋಜನೆ ಹಾಕಿಕೊಂಡಿದ್ದೇವೆ. ಇದಕ್ಕೆ ಹಲವು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳು ಮುಂದೆ ಬಂದಿವೆ. ಎಲ್ಲರ ಸಹಕಾರದೊಂದಿಗೆ ಸಂಶೋಧನೆಯಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವಿದೆ.
– ಡಾ| ಎನ್‌.ಬಿ.ತಿಪ್ಪೇಸ್ವಾಮಿ, ಮುಖ್ಯಸ್ಥರು, ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗ, ಕುವೆಂಪು ವಿವಿ

– ಶರತ್‌ ಭದ್ರಾವತಿ

29ಎಸ್‌ಎಂಜಿ8
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next