Advertisement

Puttur ಕೊಠಡಿಯಲ್ಲಿ ಕೂಡಿ ಹಾಕಿದ್ದ ವಿವಾಹಿತ ಮಹಿಳೆಯ ರಕ್ಷಣೆ

12:00 AM Jan 04, 2024 | Team Udayavani |

ಪುತ್ತೂರು: ಅನಾರೋಗ್ಯದ ನೆಪವೊಡ್ಡಿ ಮೂರು ತಿಂಗಳಿನಿಂದ ವಿವಾಹಿತ ಮಹಿಳೆಯನ್ನು ಕನಿಷ್ಠ ಸೌಲಭ್ಯವೂ ಇಲ್ಲದ ಕೊಠಡಿಯಲ್ಲಿ ಕೂಡಿ ಹಾಕಿದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯು ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜದಲ್ಲಿ ನಡೆದಿದೆ.

Advertisement

ಶ್ರೀಪತಿ ಹೆಬ್ಬಾರ್‌ ಅವರ ಪತ್ನಿ ಆಶಾಲತಾ ದಿಗ್ಬಂಧನಕ್ಕೆ ಒಳಗಾಗಿದ್ದ ಮಹಿಳೆ. ಮನೆ ಪಕ್ಕದ ಸಿಮೆಂಟ್‌ ಶೀಟ್‌ ಅಳವಡಿಸಿದ ಕಿಟಕಿ, ವಿದ್ಯುತ್‌ ಬೆಳಕು ಇಲ್ಲದ ಒಂದೇ ಬಾಗಿಲಿನ ಕೋಣೆಯಲ್ಲಿ ದಿಗ್ಬಂಧನದಲ್ಲಿರಿಸಲಾಗಿತ್ತು. ಅನಾಮಧೇಯ ಕರೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.

ಆಶಾಲತಾ ಮೂಲತಃ ವಿಟ್ಲ ಸಮೀಪದವರು. ಕೆಲವು ವರ್ಷಗಳ ಹಿಂದೆ ಶ್ರೀಪತಿ ಆಕೆಯನ್ನು ಮದುವೆಯಾಗಿದ್ದರು. ಅಂತರ್ಜಾತಿ ವಿವಾಹ ಇದಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ಬಳಿಕ ಆಶಾ ಅವರ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕಾಗಿ ಮನೆ ಸಮೀಪದ ಕೊಠಡಿಯೊಳಗೆ ಕೂಡಿ ಹಾಕಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ.

ಕನಿಷ್ಠ ಸೌಕರ್ಯವೂ
ಇಲ್ಲದ ಕೊಠಡಿ
ಗೋದಾಮು ಮಾದರಿಯ ಕೊಠಡಿಯೊಳಗೆ ದಿನ ಕಳೆಯುತ್ತಿದ್ದ ಆಶಾಲತಾಗೆ ಹೊರ ಜಗತ್ತಿನ ಸಂಪರ್ಕವೇ ಇರಲಿಲ್ಲ. ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಮಲ-ಮೂತ್ರವೆಲ್ಲ ಕೊಠಡಿಯೊಳಗೇ ಆಗುತ್ತಿತ್ತು. ಚಾಪೆ ಕೂಡ ಇಲ್ಲದ ಕಾರಣ ನೆಲದಲ್ಲೇ ಮಲಗಬೇಕಿತ್ತು. ಕೊಠಡಿ ದುರ್ವಾಸನೆಯಿಂದ ಕೂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯವರು ದಿನಕ್ಕೆ ಒಂದು ಬಾರಿ ಬಿಸ್ಕೆಟ್‌, ಚಹಾ ಬಿಟ್ಟರೆ ಬೇರೇನೂ ಕೊಡುತ್ತಿರಲಿಲ್ಲ ಎನ್ನಲಾಗಿದೆ. ದೇಹ ಕ್ಷೀಣಿಸಿದ ಪರಿಣಾಮ ಬಿದ್ದುಕೊಂಡ ಸ್ಥಿತಿಯಲ್ಲಿದ್ದ ಆಶಾ ಅವರನ್ನು ಅಧಿಕಾರಿಗಳು ಕೊಠಡಿಯಿಂದ ಹೊರತಂದು ಸ್ನಾನ ಮಾಡಿಸಿ ಆಸ್ಪತ್ರೆಗೆ ದಾಖಲಿಸಿದರು.

ಸಂಪರ್ಕಕ್ಕೆ ಸಿಗದ ಪತಿ
ಶ್ರೀಪತಿ ಅವರ ಮನೆಗೆ ರಸ್ತೆ ಸಂಪರ್ಕ ಇಲ್ಲದ ಕಾರಣ ಆಶಾಲತಾ ಅವರನ್ನು 300 ಮೀ. ದೂರ ಹೊತ್ತುಕೊಂಡೇ ಸಾಗಿ ಬಳಿಕ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಕಾರ್ಯಾಚರಣೆ ವೇಳೆ ಪತಿ ಮನೆಯಲ್ಲಿ ಇರಲಿಲ್ಲ. ಸಂಪರ್ಕಕ್ಕೂ ಸಿಕ್ಕಿಲ್ಲ. ಪತಿಯ ಸಹೋದರಿ ಮನೆಯಲ್ಲಿದ್ದರೂ ಆಕೆ ಹೊರ ಬರಲಿಲ್ಲ ಎನ್ನಲಾಗಿದೆ. ಆಶಾಲತಾಗೆ ಪ್ರೇತಬಾಧೆಯಿಂದ ಹಲವು ಬಾರಿ ಚಿಕಿತ್ಸೆ ನೀಡಿದ್ದರೂ ಗುಣಮುಖ ಆಗಿಲ್ಲ. ತವರು ಮನೆಯವರು ಕೂಡ ಸ್ಪಂದನೆ ನೀಡಿರಲಿಲ್ಲ. ಮಕ್ಕಳನ್ನು ನಾವೇ ಸಾಕುತ್ತಿದ್ದೇವೆ ಎಂದು ಮನೆಯಲ್ಲಿದ್ದ ಶ್ರೀಪತಿ ಅವರ ಸಹೋದರಿ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

Advertisement

ಮಹಿಳೆ ದಿಗ್ಬಂಧನದಲ್ಲಿರುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪರಿಶೀಲನೆಗೆಂದು ತೆರಳಿದ್ದೆವು. ಆಕೆಯ ಪರಿಸ್ಥಿತಿ ಕಂಡು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದೇವೆ. ಕೂಡಿ ಹಾಕಿದ್ದ ಕೊಠಡಿ ನಾಲ್ಕು ದಿಕ್ಕಿನಿಂದಲೂ ಬಂದ್‌ ಆಗಿತ್ತು. ಕನಿಷ್ಠ ಸೌಲಭ್ಯವೂ ಇರಲಿಲ್ಲ. ಬುಧವಾರ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದೇವೆ. ಮನೆಯವರನ್ನು ಸಂಪರ್ಕಿಸುವ ಪ್ರಯತ್ನ ನಡೆಯುತ್ತಿದೆ. ಕೂಲಂಕಷ ತನಿಖೆ ನಡೆಸಲಾಗುತ್ತಿದೆ.
– ಮಂಗಳ ಕಾಳೀ,
ಎಸಿಡಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next