2015ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಭರ್ಜರಿ ಕಮಾಲ್ ಮಾಡಿದ್ದ ಬಹುತೇಕ ಹೊಸಪ್ರತಿಭೆಗಳ “ರಂಗಿತರಂಗ’ ಚಿತ್ರ ಈ ವಾರ ಮತ್ತೆ ಬಿಡುಗಡೆಯಾಗುತ್ತಿದೆ. ಕಳೆದ ಎರಡು ವಾರದಿಂದ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾಗಳ ಪ್ರದರ್ಶನ ಆರಂಭವಾಗಿದ್ದು, ಈ ಹಿಂದೆ ಜನಮನ್ನಣೆ ಪಡೆದು ಸೂಪರ್ ಹಿಟ್ ಆಗಿದ್ದ ಅನೇಕ ಸಿನಿಮಾಗಳು ರೀ-ರಿಲೀಸ್ ಆಗುತ್ತಿದ್ದು, ಈ ಸಾಲಿಗೆ ಈ ವಾರ “ರಂಗಿತರಂಗ’ ಚಿತ್ರ ಕೂಡ ಸೇರ್ಪಡೆಯಾಗುತ್ತಿದೆ.
“ಸದ್ಯ ರೀ-ರಿಲೀಸ್ ಆಗುತ್ತಿರುವ ಸಿನಿಮಾಗಳಿಗೆ ನಿಧಾನವಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೆ “ರಂಗಿತರಂಗ’ವನ್ನು ರೀ-ರಿಲೀಸ್ ಮಾಡುವಂತೆ ಪ್ರೇಕ್ಷಕರಿಂದಲೂ ಒತ್ತಾಯ ಬಂದಿದ್ದರಿಂದ, ಅ. 30 ರಿಂದ ರಾಜ್ಯಾದ್ಯಂತ 20ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ರೀ-ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದೇವೆ’ ಎಂದಿದ್ದಾರೆ
ನಿರ್ಮಾಪಕ ಹೆಚ್.ಕೆ ಪ್ರಕಾಶ್. ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿದ್ದ “ರಂಗಿತರಂಗ’ ಚಿತ್ರದಲ್ಲಿ ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ, ರಾಧಿಕಾ ನಾರಾಯಣ್, ಸಾಯಿಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು. “ಶ್ರೀದೇವಿ ಎಂಟರ್ ಟೈನರ್’ ಬ್ಯಾನರ್‌ನಲ್ಲಿ ನಿರ್ಮಾಣವಾದ ಚಿತ್ರಕ್ಕೆ ಅನೂಪ್ ಭಂಡಾರಿ ಆ್ಯಕ್ಷನ್-ಕಟ್ ಹೇಳಿದ್ದರು.
ಮತ್ತೆ ಬರ್ತಿದ್ದಾನೆ ಜಂಟಲ್‌ಮೆನ್ : ಇದೇ ವೇಳೆ ಪ್ರಜ್ವಲ್ ದೇವರಾಜ್, ನಿಶ್ವಿಕಾ ನಾಯ್ಡು ಅಭಿನಯದ “ಜಂಟಲ್‌ಮೆನ್’ ಚಿತ್ರ ಕೂಡ ಈ ವಾರ ರೀ-ರಿಲೀಸ್ ಆಗುತ್ತಿದೆ. ಗುರುದೇಶಪಾಂಡೆ ನಿರ್ಮಾಣದ ಈ ಚಿತ್ರಕ್ಕೆ ಜಡೇಶ್ ಹಂಪಿ ನಿರ್ದೇಶನ ಮಾಡಿದ್ದಾರೆ.
5 ಅಡಿ 7 ಅಂಗುಲಗೆ ಮೆಚ್ಚುಗೆ : ಚಿತ್ರಮಂದಿರ ತೆರೆದ ನಂತರ ಮರುಬಿಡುಗಡೆಯಾದ ಚಿತ್ರಗಳು ನಿಧಾನವಾಗಿ ಪ್ರೇಕ್ಷಕರನ್ನು ಸೆಳೆಯುತ್ತಿವೆ. ಸ್ಟಾರ್‌ಗಳ ಚಿತ್ರಗಳು ಸ್ಟಾರ್ ಕ್ರೇಜ್ ಹಾಗೂ ಮಾಸ್ ಅಂಶಗಳಿಂದ ಸೆಳೆದರೆ, ಹೊಸಬರ ಸಿನಿಮಾಗಳು ಕಂಟೆಂಟ್‌ನಿಂದ ಸೆಳೆಯುತ್ತಿವೆ. ಹೀಗೆ ಕಂಟೆಂಟ್ ಮೂಲಕ ಗಮನ ಸೆಳೆಯುತ್ತಿರುವ ಚಿತ್ರಗಳಲ್ಲಿ “5 ಅಡಿ 7 ಅಂಗುಲ’ ಎಂಬ ಥ್ರಿಲ್ಲರ್ ಚಿತ್ರವೂ ಸೇರುತ್ತದೆ.
ಈಗಾಗಲೇ ಮರುಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಚಿತ್ರವನ್ನು ನಂದಳಿಕೆ ನಿತ್ಯಾನಂದ ಪ್ರಭು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಚಿತ್ರಮಂದಿರಗಳು ಕೂಡಾ ಪ್ರದರ್ಶನ ಹೆಚ್ಚಿಸುತ್ತಿರುವುದು ನಿರ್ಮಾಪಕರಿಗೆ ಖುಷಿ ನೀಡಿದೆ. ಜೊತೆಗೆ ಇತ್ತೀಚೆಗೆ ಚಿತ್ರ ನೋಡಿಕೊಂಡು ಬಂದ ಪ್ರೇಕ್ಷಕರೊಬ್ಬರು ಜೇಬಿನಿಂದ 100 ರೂಪಾಯಿ ತೆಗೆದು ನಿಮ್ಮ ಚಿತ್ರ ಡಬಲ್ ಟಿಕೆಟ್‌ಗೆ ಹಣಕ್ಕೆ ಅರ್ಹ ತೆಗೆದುಕೊಳ್ಳಿ ಎಂದು ನಿರ್ಮಾಪಕರಿಗೆ ನೀಡಲು ಬಂದರಂತೆ. ಇದರಿಂದ ಇಡೀ ತಂಡ ಖುಷಿಯಾಗಿದೆ. ಚಿತ್ರರಂಗದ ಮಂದಿ ಕೂಡಾ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಚಿತ್ರದ ಕಥಾ ನಾಯಕಿ ಅದಿತಿ, ನಾಯಕರಾದ ಭುವನ್ ಹಾಗೂ ರಾಸಿಕ್ ಕುಮಾರ್, ಸಂಗೀತ ನಿರ್ದೇಶಕ ಆರ್.ಎಸ್.ನಾರಾಯಣ್ ಎಲ್ಲರೂ ಚಿತ್ರಕ್ಕೆ ಸಿಗುತ್ತಿರುವ ಪ್ರೋತ್ಸಾಹದಿಂದ ಸಂತಸಗೊಂಡಿದ್ದಾರೆ.