ಬಾಗಲಕೋಟೆ: ಆಲಮಟ್ಟಿ ಹಿನ್ನೀರಿನಿಂದ 521 ರಿಂದ 523 ಮೀ ಹಾಗೂ 100 ಮೀ ವ್ಯಾಪ್ತಿಯೊಳಗೆ ಬಾಧಿತಗೊಂಡಿರುವ ಬಾಡಿಗೆದಾರರಿಗೂ ಬಿ ಮಾದರಿ ನಿವೇಶನ ನೀಡಬೇಕು ಎಂದು ಒತ್ತಾಯಿಸಿ ಬಾಗಲಕೋಟೆ ಮುಳುಗಡೆ ಸಂತ್ರಸ್ತರ ಹೋರಾಟ ಸಮಿತಿ ಹೋರಾಟಗಾರರು ಒತ್ತಾಯಿಸಿದ್ದಾರೆ.
ಈ ಕುರಿತು ಹೋರಾಟ ಸಮಿತಿಯ ಪ್ರಮುಖರು ಗುರುವಾರ ಬಿಟಿಡಿಎ ಅಧ್ಯಕ್ಷ, ಮಾಜಿ ಸಚಿವ ಎಚ್.ವೈ.ಮೇಟಿ ಅವರಿಗೆ ಮನವಿ ಸಲ್ಲಿಸಿದರು.
ಆಲಮಟ್ಟಿ ಹಿನ್ನೀರಿನಿಂದ 521 ರಿಂದ 523 ಮೀ ಹಾಗೂ 100 ಮೀ ವ್ಯಾಪ್ತಿಯೊಳಗೆ ಬಾಧಿತವಾಗುವ ದೇವಸ್ಥಾನ ಹಾಗೂ ಸಂಘ ಸಂಸ್ಥೆಯವರಿಗೆ ಬಿಟಿಡಿಎ ಉಪ ಸಮಿತಿ ನಿವೇಶನ ಮಂಜೂರು ಮಾಡಿದ್ದಾರೆ. ಅವುಗಳಿಗೆ ಶೀಘ್ರವಾಗಿ ತಿಳಿವಳಿಕೆ ಪತ್ರ ನೀಡಬೇಕು. ಆಲಮಟ್ಟಿ ಹಿನೀರಿನಿಂದ 521 ಮೀ.ವ್ಯಾಪ್ತಿಯೊಳಗೆ ಅಂದರೆ 1ನೇ ಯುನಿಟ್ದಲ್ಲಿ ಬರುವ ಮುಳುಗಡೆ ಹೊಂದಿದ ಸಂತ್ರಸ್ತರಿಗೆ ನಿವೇಶನ ಪಡೆದುಕೊಳ್ಳುವ ಒಉನರ್ವಸತಿ ಅಧಿಕಾರಿಗಳ ಕೊನೆಯ ದಿನಾಂಕ ನೀಡಿದ್ದನ್ನು ಹೋರಾಟ ವೇದಿಕೆ ಖಂಡಿಸಿದ್ದು, ಸಂತ್ರಸ್ತರಲ್ಲಿ ನಿವೇಶನವನ್ನು ಪಡೆದುಕೊಳ್ಳಲು ಭಿನ್ನಾಭಿಪ್ರಾಯವಿರುವುದರಿಂದ ನಿವೇಶನ ಪಡೆದುಕೊಂಡಿಲ್ಲ. ಸಂತ್ರಸ್ತರಿಗೆ ಪುನರ್ವಸತಿ ಕಾರ್ಯವು ನಿರಂತರ ಪ್ರಕ್ರಿಯೆಯಾಗಿದೆ. ಅವಧಿಯ ದಿಗ್ಬಂಧನೆ ನೀಡುವುದು ಸಂತ್ರಸ್ತರ ಹಿತಾಸಕ್ತಿ ಕಡೆಗಣಿಸಿದಂತಾಗುತ್ತದೆ. ನಿವೇಶನವನ್ನು ಕೊಡಲು ಪುನರ್ವಸತಿ ಅಧಿಕಾರಿಗಳು ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿದ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ ಮಾತನಾಡಿ, ಯುನಿಟ್-2ರಲ್ಲಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲು ತುರ್ತು ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವು ಕಾಮಗಾರಿಯ ಟೆಂಡರ್ ಶೀಘ್ರ ಕರೆದು ಸಂತ್ರಸ್ತರಿಗೆ ಅನುಕೂಲವಾಗುವಂತೆ ಮಾಡಲಾಗುವುದು. ಯುನಿಟ್-2 ಬಾಡಿಗೆದಾರರಿಗೆ ಹಿಂದೆ ನಿರ್ದೇಶನದಂತೆ ಬಿ ಮಾದರಿ ನಿವೇಶನ ನೀಡಲು 15 ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ಬಾಡಿಗೆದಾರರ ಅಹವಾಲು ಕಟ್ಟುನಿಟ್ಟಾಗಿ ಪರಿಶೀಲನೆ ಮಾಡಿ ನಿಜವಾದ ಬಾಡಿಗೆದಾರರಿಗೆ ನಿಯಮಗಳ ಪ್ರಕಾರ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಹೋರಾಟ ಸಮಿತಿ ಅಧ್ಯಕ್ಷ ಸಂಗಯ್ಯ ಸರಗಣಾಚಾರ, ಕಾರ್ಯಾಧ್ಯಕ್ಷ ಸದಾನಂದ ನಾರಾ, ಗುಂಡು ಸಿಂಧೆ, ಮಾಲಿಂಗಯ್ಯ ಹಿರೇಮಠ, ಪ್ರಕಾಶ ಕುಲಕರ್ಣಿ, ಸುರೇಶ ಮಜ್ಜಗಿ, ರಿಯಾಜ್ ಕೊಣ್ಣೂರ, ಉಮೇಶ ತೋಳಮಟ್ಟಿ, ಈರಣ್ಣ ಗಣಾಚಾರಿ, ಹಬೀದ್ ಬೀಳಗಿ, ಈರಣ್ಣ ಹೊನ್ನಳ್ಳಿ, ಕಾಳಪ್ಪ ಬಡಿಗೇರ, ಮಲ್ಲಪ್ಪ ಸಾಳಗೊಂದಿ, ಹಣಮಂತ ಗೌಡರ, ರಿಯಾಜ್ ಬೀಳಗಿ ಉಪಸ್ಥಿತರಿದ್ದರು.