Advertisement

ಸೇವೆ ಕಾಯಂಗೆ ಆಗ್ರಹ

03:18 PM Jan 05, 2018 | Team Udayavani |

ಮಸ್ಕಿ: ಸೇವೆ ಕಾಯಂ, ಸೇವಾ ಭದ್ರತೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ಶಾಸಕರ ಕಾರ್ಯಾಲಯಕ್ಕೆ ತೆರಳಿ ಶಾಸಕರ ಆಪ್ತ ಕಾರ್ಯದರ್ಶಿ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದರು.

Advertisement

ಪಟ್ಣಣದ ಅಶೋಕ ದೇವನಾಂಪ್ರೀಯ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಅತಿಥಿ ಉಪನ್ಯಾಸಕರು, ಅಶೋಕ ವೃತ್ತ, ಪುರಸಭೆ ರಸ್ತೆ ಮೂಲಕ ಶಾಸಕರ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.

ಸುಮಾರು 12 ವರ್ಷಗಳಿಂದ ರಾಜ್ಯದ 411 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 13 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತ, ಸರಕಾರಿ ಪದವಿ ಕಾಲೇಜುಗಳ ಬೆನ್ನೆಲುಬಾಗಿ ನಿಂತಿದ್ದಾರೆ. ಆದರೆ ರಾಜ್ಯ ಸರಕಾರ ಅತಿಥಿ ಉಪನ್ಯಾಸಕರ ಬಗ್ಗೆ ತಾತ್ಸಾರ ಭಾವನೆ ತಾಳಿದೆ. 2017ರಲ್ಲಿ 2,160 ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುವ ಮೂಲಕ ಸುಮಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಮಾಡುತ್ತಿರುವ 4,320 ಅತಿಥಿ ಉಪನ್ಯಾಸಕರನ್ನು ಬೀದಿಪಾಲು ಮಾಡಿದ್ದಾರೆ. 

ದೆಹಲಿ ಸರಕಾರ, ಹರಿಯಾಣ, ಕೇಂದ್ರೀಯ ವಿಶ್ವವಿದ್ಯಾಲಯ ತ್ರಿಪುರ ಸರಕಾರಗಳು ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಲು ವಿಶೇಷ ನಿಯಮಾವಳಿ ರೂಪಿಸಿವೆ. ಆದರೆ ಕರ್ನಾಟಕ ಸರಕಾರ ಮಾತ್ರ ಮೊಂಡುತನ ಪ್ರದರ್ಶಿಸುತ್ತದೆ. ಕೇವಲ 13 ಸಾವಿರ ವೇತನ ನಿಗದಿಪಡಿಸಿ ಅತಿಥಿ ಉಪನ್ಯಾಸಕರ ಜೀವನದೊಂದಿಗೆ ಚಲ್ಲಾಟವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶಾದ್ಯಂತ ಜೀತ ಪದ್ಧತಿ ನಿಷೇಧವಾಗಿದ್ದರೂ ಕೂಡ ಕರ್ನಾಟಕದಲ್ಲಿ ಮಾತ್ರ ಸರ್ಕಾರವೇ ಅತಿಥಿ ಉಪನ್ಯಾಸಕರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ. ಸಮಾನ ಸೇವೆಗೆ ಸಮಾನ ವೇತನ ನೀಡಬೇಕೆಂಬ ಆದೇಶ ಉಲ್ಲಂಘನೆ ಸರ್ಕಾರದಿಂದಲೇ ಆಗುತ್ತಿದೆ ಎಂದು ದೂರಿದರು.

Advertisement

ಈ ಮೊಂಡುತನ ಬಿಟ್ಟು ರಾಜ್ಯ ಸರಕಾರದ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆಗೆ ಕಡತ ತರಿಸಿಕೊಂಡು, ಸಂಪುಟ ಸಭೆಯಲ್ಲಿ ಚರ್ಚಿಸಿ ಅತಿಥಿ ಉಪನ್ಯಾಸಕರ ಬಹುದಿನದ ಬೇಡಿಕೆಯಾದ ಸೇವಾ ಭದ್ರತೆ ಹಾಗೂ ಸೇವೆ ಕಾಯಂ ಮಾಡಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

ಮಸ್ಕಿ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಪ್ರಭುದೇವ ಸಾಲಿಮಠ, ಉಪಾಧ್ಯಕ್ಷ ರಾಮಣ್ಣ ನಾಯಕ, ಖಜಾಂಚಿ ಚನ್ನಬಸವ, ಕಾರ್ಯದರ್ಶಿ ಸುರೇಶ ಬಳಗಾನೂರ, ಸದಸ್ಯರಾದ ಈರನಗೌಡ, ಚನ್ನನಗೌಡ, ಅರುಣಕುಮಾರ, ನಾಗೇಶ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next