Advertisement

ಇಡ್ಯಾದಲ್ಲಿ ತೋಡುಗಳ ಪುನರುಜ್ಜೀವನ ಅಗತ್ಯ

12:48 PM Jun 07, 2018 | |

ಸುರತ್ಕಲ್‌ : ಇಡ್ಯಾ ಗ್ರಾಮದಲ್ಲಿ (ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪೂರ್ವದಿಕ್ಕಿನಲ್ಲಿ) ಅನಾದಿಯಿಂದಲೂ ಮಳೆನೀರು ಹರಿದು ಹೋಗಲು ಉತ್ತಮ ರೀತಿಯ ಪ್ರಕೃತಿ ನಿರ್ಮಿತ ತೋಡುಗ ಳಲ್ಲಿ ಹೂಳು ತುಂಬಿ ತನ್ನ ಮೂಲ ಸ್ವರೂಪ ಕಳೆದುಕೊಂಡಿದ್ದು, ಸುರಿಯುವ ಸಾಮಾನ್ಯ ಮಳೆಗೂ ಕೃತಕ ನೆರೆ ಉದ್ಭವಿಸಲು ಕಾರಣವಾಗುತ್ತಿದೆ.

Advertisement

ಈ ಹಿಂದೆ ಎತ್ತರದ ಪ್ರದೇಶದಿಂದ ಸಮುದ್ರ ಸೇರುತ್ತಿದ್ದ ಮಳೆ ನೀರು ಇದೀಗ ಅಡೆ ತಡೆಗಳಿಂದ ಹರಿದು ಹೋಗದೆ ನೆರೆ ಪರಿಸ್ಥಿತಿ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿನ ಪೂರ್ವ ದಿಕ್ಕಿನ ಬೃಹತ್‌ ಪ್ರಮಾಣದ ಮಳೆನೀರು ಕೂಡ ಈ ತೋಡುಗಳಲ್ಲೇ ಹರಿದು ಹೋಗುತ್ತಿದ್ದು, ಈಗಲೂ ಈ ವ್ಯವಸ್ಥೆ
ಮುಂದುವರಿದಿದೆ. ಈ ಎಲ್ಲ ನೀರು ಹಲವು ತೋಡುಗಳ ನೆಟ್‌ವರ್ಕ್‌ ಮೂಲಕ ಒಟ್ಟು ಸೇರಿ ಮುಂದೆ ಸಾಗಿದಂತೆ ತೋಡುಗಳು ಕೂಡ ಅಗಲವಾಗುತ್ತಾ ಸಮುದ್ರವನ್ನು ಸೇರುತ್ತಿದ್ದುವು. ಯಾವುದೇ ರೀತಿಯ ಕೃತಕ ನೆರೆಗಳೂ ಆಗ ಇರುತ್ತಿರಲಿಲ್ಲ.

ಅಗಲ ಕಿರಿದಾದ ಚರಂಡಿ
ಇದೀಗ ಈ ಎಲ್ಲ ಚರಂಡಿಗಳು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡು ಅಗಲ ಕಿರಿದಾಗಿವೆ. ಮೊದಲು ಇಲ್ಲಿನ ರೈತಾಪಿ ಜನರು ತೋಡುಗಳನ್ನು ಸುಸ್ಥಿತಿಯಲ್ಲಿ ಇಡುತ್ತಿದ್ದರು. ಆದರೆ ಈಗ ಗದ್ದೆಗಳೆಲ್ಲ ಮನೆ ನಿವೇಶನಗಳಾಗಿ ಪರಿವರ್ತಿತವಾದ ಕಾರಣ ಅವುಗಳ ನಿರ್ವಹಣೆ ಮಾಡುವ ರೈತರೂ ಇಲ್ಲ ವಾಗಿದ್ದಾರೆ. ಜತೆಗೆ ಆ ತೋಡುಗಳು ಹೂಳಿನಿಂದ ತುಂಬಿವೆ. ಕೆಲವೆಡೆ ಒತ್ತುವರಿಗೊಂಡು ಅಗಲಕಿರಿದಾಗಿವೆ. ಅದರಿಂದಾಗಿ ಸಣ್ಣ ಸಣ್ಣ ಮಳೆಗಳೂ ಕೃತಕ ನೆರೆಯನ್ನು ಉಂಟುಮಾಡುವ ಪರಿಸ್ಥಿತಿ ಬಂದಿದೆ.

ಪುನರುಜ್ಜೀವನಗೊಳಿಸಿ
ನಗರದ ನರನಾಡಿಗಳಂತಿರುವ ಈ ಪ್ರಾಕೃತಿಕ ತೋಡುಗಳ ಸರಮಾಲೆಯನ್ನು ಪುನರುಜ್ಜೀವನಗೊಳಿಸುವುದು ಮತ್ತು ಅಗಲಗೊಳಿಸುವುದು ಅವಶ್ಯವಾಗಿದೆ. ಇಲ್ಲವಾದಲ್ಲಿ ಕೆಲವು ಕಡೆ ಚರಂಡಿಗಳೇ ಮಾಯವಾಗುವ ಪರಿಸ್ಥಿತಿ ಇದೆ. ಈ ಕಾರ್ಯವನ್ನು ಮನಪಾ ಮತ್ತು ಒಳಚರಂಡಿ ಮಂಡಳಿ ಆದ್ಯತೆಯ ನೆಲೆಯಲ್ಲಿ ಮಾಡುವ ಆವಶ್ಯಕತೆ ಇದೆ.

ಕಾಮಗಾರಿ ಪ್ರಗತಿಯಲ್ಲಿ
ಈಗಾಗಲೇ ಮಳೆ ನೀರು ಹರಿದು ಹೋಗಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹೂಳು ತುಂಬಿದ ತೋಡುಗಳನ್ನು ಸರಿಪಡಿಸುವ ಕಾಮಗಾರಿ ಪ್ರಗತಿಯಲ್ಲಿದೆ.
 - ಖಾದರ್‌,
ಜೆ.ಇ., ಸುರತ್ಕಲ್‌, ಮನಪಾ

Advertisement

ಸೂಕ್ತ ಕ್ರಮ ಕೈಗೊಳ್ಳಿ
ಸುರತ್ಕಲ್‌ ಪ್ರದೇಶದಲ್ಲಿ ನೆರೆ ಅಪರೂಪವಾಗಿತ್ತು.ಆದರೆ ಇದೀಗ ಚರಂಡಿ, ತೋಡುಗಳು ಒತ್ತುವರಿಯಾಗಿ ಅಗಲ ಕಿರಿದಾದ ಕಾರಣ ಕೃತಕ ನೆರೆ ಉಂಟಾಗುತ್ತಿದೆ. ಪಾಲಿಕೆ ಸೂಕ್ತ ಕ್ರಮ ಕೈಗೊಂಡಲ್ಲಿ ಈ ಅನಾಹುತ ತಪ್ಪಿಸಬಹುದು.
  - ಪ್ರೊ| ರಾಜ್‌ಮೋಹನ್‌  ರಾವ್‌,
     ಸುರತ್ಕಲ್‌

Advertisement

Udayavani is now on Telegram. Click here to join our channel and stay updated with the latest news.

Next