Advertisement

ವೈರಾಣು ವಿರುದ್ಧ  ಶಾಸ್ತ್ರೋಕ್ತ ಚಿಕಿತ್ಸೆ ಅವಶ್ಯ 

04:30 PM May 26, 2018 | |

ಹುಬ್ಬಳ್ಳಿ: ಬಾವಲಿಗಳಿಂದ ಹರಡುವ ನಿಪ ವೈರಾಣು ಸೋಂಕು ತಡೆಯಲು ಕೆಲವು ಗಿಡಗಳ ಎಲೆ, ಕಾಯಿ, ಬೇರುಗಳಿಂದ
ಪರಿಹಾರ ಪಡೆಯಬಹುದೆಂಬ ಹಲವು ಮಿಥ್ಯ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಆಯುರ್ವೇದ ತಜ್ಞರಿಂದ ಸಲಹೆ ಪಡೆಯದೆ ಎಲೆ, ಕಾಯಿ ಸೇವನೆ ಮಾಡಿದರೆ ಜೀವಕ್ಕೆ ಅಪಾಯ ತಂದುಕೊಳ್ಳುವ ಸಾಧ್ಯತೆಯಿದೆ.

Advertisement

ಕೇರಳದಲ್ಲಿ ನಿಪ ವೈರಾಣು ಸೋಂಕಿನಿಂದ ಕೇರಳದಲ್ಲಿ ಈವರೆಗೆ 12 ಜನರು ಜೀವ ಕಳೆದುಕೊಂಡಿದ್ದು, ಹಲವರು ಸೋಂಕಿನಿಂದಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿಪ ವೈರಸ್‌ ರಾಜ್ಯಕ್ಕೂ ವ್ಯಾಪಿಸಿರುವುದು ವರದಿಯಾಗಿದ್ದು, ಗದಗ ಹಾಗೂ ಸಾಗರದಲ್ಲಿ ನಿಪ ವೈರಾಣು ಶಂಕಿತ ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ರಾಜ್ಯಾದ್ಯಂತ ಜನರು ನಿಪ ವೈರಾಣು ಸೋಂಕಿನ ಬಗ್ಗೆ ಆತಂಕಿತರಾಗಿದ್ದಾರೆ.

ದೇಶದಲ್ಲಿ ನಿಪ ಸೋಂಕಿಗೆ ಅಲೋಪಥಿ ಔಷಧಿ ಲಭ್ಯವಿಲ್ಲದ್ದರಿಂದ ಕೇರಳಕ್ಕೆ ಮಲೇಷಿಯಾದಿಂದ ರಿಬಾವೆರಿಸ್‌ ಮಾತ್ರೆಗಳನ್ನು ಆಮದು ಮಾಡಿಕೊಳ್ಳಲಾಗಿದೆ.

ಇದರಿಂದಾಗಿ ಈಗ ನಿಪ ಚಿಕಿತ್ಸೆಗಾಗಿ ಜನರ ಚಿತ್ತ ಆಯುರ್ವೇದ, ಹೋಮಿಯೋಪಥಿಯತ್ತ ಹೊರಳಿದೆ. ಇಂಥ ಸಂದರ್ಭದಲ್ಲಿ ಕೆಲವರು ನಿಪ ಸೋಂಕು ತಡೆಗೆ ಆಯುರ್ವೇದ ಚಿಕಿತ್ಸೆ ಎಂದು ಪಾರಿಜಾತ ಹೂವಿನ ಗಿಡದ ಎಲೆಗಳು, ಬೇವಿನ ಎಲೆಗಳು ಹಾಗೂ ಬೇವಿನ ಬೀಜಗಳನ್ನು ಸೇವನೆ ಮಾಡಬೇಕು, ಪಪ್ಪಾಯಿ ಬೀಜ ಪುಡಿಮಾಡಿ ತಿನ್ನಬೇಕು, ಹಾಗಲಕಾಯಿ ತಿನ್ನಬೇಕು, ಆಡಿನ ಹಾಲನ್ನು ಕಾಯಿಸದೇ ಕುಡಿಯಬೇಕು. ಮಾವಿನ ಎಲೆ ಜಜ್ಜಿ ನೀರು ಹಾಕಿ ಕುದಿಸಿ ಕುಡಿಯಬೇಕು. ಮೊದಲಾದ ಹಲವಾರು ಸುಳ್ಳು ಸಂದೇಶಗಳನ್ನು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರವಾನಿಸಲಾಗುತ್ತಿದೆ. ಇದು ಆರೋಗ್ಯಕ್ಕೆ ಪೂರಕವಾಗದೇ ಮಾರಕವಾಗುವ ಸಾಧ್ಯತೆಯಿದೆ. ಆಯುರ್ವೇದ ವೈದ್ಯರ ಸಲಹೆ ಪಡೆಯದೇ ಇಂಥ ಔಷಧಿ ತೆಗೆದುಕೊಳ್ಳುವುದು ಅಪಾಯವನ್ನು ಆಹ್ವಾನಿಸಿದಂತೆ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ಕೆಲ ಆಯುರ್ವೇದ ತಜ್ಞರ ಫೋಟೊ ಹಾಗೂ ಹೆಸರು ಬಳಸಿ ಅಸಮರ್ಪಕ ಸಂದೇಶಗಳನ್ನು ರವಾನಿಸಲಾಗುತ್ತಿದೆ. ಇದರಿಂದ ಜನರಲ್ಲಿ ಗೊಂದಲವಾಗುತ್ತಿದೆ. ಶಾಸ್ತ್ರೋಕ್ತವಾದ ಆಯುರ್ವೇದ ಚಿಕಿತ್ಸೆಯನ್ನು ಅವಲಂಬಿಸಬೇಕೆ ಹೊರತು ಯಾರೋ ಹೇಳಿದ ಅನುಭೂತವನ್ನು ನಂಬುವುದು ಸೂಕ್ತವಲ್ಲ ಎಂಬುದು ತಜ್ಞ ಆಯುರ್ವೇದ ವೈದ್ಯರ ಅಭಿಪ್ರಾಯವಾಗಿದೆ.

Advertisement

ಆಯುರ್ವೇದದ ಪ್ರಕಾರ ಮಳೆಗಾಲದಲ್ಲಿ ಮನುಷ್ಯರ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಆದ್ದರಿಂದ ಈ ಕಾಲದಲ್ಲಿ ಸೋಂಕು ರೋಗಗಳು ಹರಡುವುದು ಹೆಚ್ಚಾಗಿರುತ್ತದೆ. ಆದ್ದರಿಂದ ರೋಗನಿರೋಧಕ ಶಕ್ತಿ ಹೆಚ್ಚಿಸುವ ಕಷಾಯ ಸೇವನೆ ಮಾಡಿದರೆ ಯಾವುದೇ ರೀತಿಯ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ.

ನಿಪದಿಂದ ರಕ್ಷಣೆಗೆ ಕ್ರಮಗಳು: ಗಿಡದಿಂದ ಬಿದ್ದ ಹಣ್ಣುಗಳನ್ನು ತಿನ್ನಬಾರದು. ಬಾವಲಿಗಳು ವಾಸ ಮಾಡುವ ಗಿಡಮರಗಳ ಸಮೀಪ ಹೋಗಬಾರದು. ಮನೆಯಲ್ಲಿ ಸಿದ್ಧಪಡಿಸಿದ ಅಡುಗೆಯನ್ನೇ ತಿನ್ನಬೇಕು. ಚಾಟ್‌ ಖಾದ್ಯಗಳ ಸೇವನೆ ಕಡಿಮೆ ಮಾಡಬೇಕು. ತಂಪು ಪಾನೀಯಗಳ ಸೇವನೆ ನಿಲ್ಲಿಸಬೇಕು. ಮದುವೆ, ಉತ್ಸವ, ಜಾತ್ರೆ ಮೊದಲಾದ ಕಾರ್ಯಕ್ರಮಗಳಲ್ಲಿ ಭೋಜನ ಮಾಡುವಾಗ ಜಾಗ್ರತೆ ವಹಿಸಬೇಕು. ಯಾವಾಗಲೂ ಕಾಯ್ದಾರಿಸಿದ ನೀರು ಕುಡಿಯಬೇಕು ಎಂದು ಆಯುರ್ವೇದ ತಜ್ಞರು ತಿಳಿಸುತ್ತಾರೆ.

ಆಯುರ್ವೇದ ಔಷಧಿ
ಆಯುರ್ವೇದದಲ್ಲಿ ನಿಪ ವೈರಾಣು ಸೋಂಕು ತಡೆಯಲು ಪರಿಹಾರವಿದೆ. ಅಮೃತಬಳ್ಳಿ, ಶುಂಠಿ, ಹರಿದ್ರಾ, ಚಿರಾಯತ ಮಿಶ್ರಣದ ಕಷಾಯವನ್ನು 2 ಗಂಟೆಗಳಿಗೊಮ್ಮೆ 30 ಮಿಲಿ ಲೀಟರ್‌ ಸೇವನೆ ಮಾಡಿದರೆ ನಿಪ ಮೆದುಳು ಜ್ವರವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಇದನ್ನು ಗುಣ ಲಕ್ಷಣಗಳು ಕಂಡು ಬಂದಾಗಲೇ ಸೇವಿಸಬೇಕೆಂದೇನಿಲ್ಲ. ಸಾಮಾನ್ಯರು ಕೂಡ ಇದನ್ನು ಸೇವಿಸುತ್ತಿದ್ದರೆ ಮಳೆಗಾಲದ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳಬಹುದಾಗಿದೆ. ಕಷಾಯ ಸೋಂಕಿತರು ಚೇತರಿಸಿಕೊಳ್ಳಲು ಪರಿಣಾಮಕಾರಿಯಾಗಿದೆ ಎಂಬುದು ಕೆಲ ವರ್ಷಗಳ ಹಿಂದೆ ನಿಪ ಸೋಂಕು ಹರಡಿದ ಸಂದರ್ಭದಲ್ಲಿ ನಿರೂಪಿತವಾಗಿದೆ. ಹಿಂದೆ ನಿಪ ಸೋಂಕು ತಡೆಯುವಲ್ಲಿ ಆಯುರ್ವೇದ ಔಷಧಿಗಳಾದ ಸಂಶಮತ ವಟಿ ಹಾಗೂ ಸಂಜೀವಿನಿ ವಟಿ ನಿಪ ಸೋಂಕಿತರು ಗುಣಮುಖರಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದವು.

ತಜ್ಞ ವೈದ್ಯರಿಂದ ಚಿಕಿತ್ಸೆ ಮುಖ್ಯ
ನಿಪ ಸೋಂಕಿನಿಂದ ಮೆದುಳಿನ ಶಕ್ತಿ ಕಡಿಮೆಯಾಗುತ್ತದೆ. ಮೆದುಳಿನ ಕಾರ್ಯಕ್ಷಮತೆ ವೃದ್ಧಿಸಲು ಆಯುರ್ವೇದದಲ್ಲಿ ಚಿಕಿತ್ಸೆ ನೀಡಲಾಗುವುದು. ಸನ್ನಿವಾತ, ತೀವ್ರವಾತದ ಗುಣಲಕ್ಷಣಗಳನ್ನೇ ನಿಪ ಹೊಂದಿದ್ದು, ಇಂಥ ತೀವ್ರ ಜ್ವರವನ್ನು ಕಡಿಮೆ ಮಾಡಲು ಆಯುರ್ವೇದ ಪದ್ಧತಿಯಲ್ಲಿ ಸಮರ್ಪಕ ಚಿಕಿತ್ಸೆ ಲಭ್ಯವಿದೆ. ಸಾಮಾಜಿಕ ಜಾಲತಾಣಗಳ ಸಂದೇಶಗಳ ಮೊರೆ ಹೋಗದೇ ತಜ್ಞ ವೈದ್ಯರಿಂದ ಸಲಹೆ ಪಡೆದುಕೊಳ್ಳುವುದು ಒಳಿತು.
 ಡಾ| ಬಿ.ಬಿ. ಜೋಶಿ,
ತಜ್ಞ ವೈದ್ಯರು, ಹೆಗ್ಗೇರಿಯ ಆಯುರ್ವೇದ
ಮಹಾವಿದ್ಯಾಲಯದ ಪ್ರಾಚಾರ್ಯರು

ವಿಶ್ವನಾಥ ಕೋಟಿ

Advertisement

Udayavani is now on Telegram. Click here to join our channel and stay updated with the latest news.

Next