Advertisement

ಶೈಕ್ಷಣಿಕ ಸುಧಾರಣೆಗೆ ಸಮನ್ವಯ ಅಗತ್ಯ: ಮಠಪತಿ

12:39 PM Aug 22, 2017 | |

ಬೀದರ: ಶಿಕ್ಷಕರು ಮತ್ತು ಅಧಿಕಾರಿಗಳು ಸೇರಿ ಸರ್ಕಾರದ ಯೋಜನೆಗಳನ್ನು ಸಮನ್ವಯದಿಂದ ಸಮರ್ಪಕವಾಗಿ
ಜಾರಿಗೊಳಿಸಿದರೆ ಶೈಕ್ಷಣಿಕ ಮಟ್ಟ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್‌. ಮಠಪತಿ ಹೇಳಿದರು. ನಗರದಲ್ಲಿ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೀದರ ತಾಲೂಕಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿದ್ದು, ಶಿಕ್ಷಕರ ಕೊರತೆಯಿಲ್ಲ. ಈ ಭಾಗದಲ್ಲಿ ಬಹಳಷ್ಟು ಪ್ರತಿಭೆಗಳಿದ್ದು, ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು. ಶಿಕ್ಷಕರ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ, ಹಂತ ಹಂತವಾಗಿ ಬಗೆಹರಿಸುತ್ತೇನೆ. ಯಾವುದೇ ಮಗು ಶಿಕ್ಷಣದಿಂದ ವಂಚಿತ ಆಗಬಾರದು. ಸರ್ಕಾರಿ ಶಾಲೆಯ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನ ಪಡೋಣ ಎಂದು ಹೇಳಿದರು. ಶಿಕ್ಷಣಾಧಿಕಾರಿ ಇನಾಯತ್‌ ಶಿಂಧೆ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಬೀದರ ಜಿಲ್ಲೆ ರಾಜ್ಯದಲ್ಲಿ ಕೊನೆಯ ಸ್ಥಾನದಲ್ಲಿದ್ದರೂ ಗುಣಮಟ್ಟದ ಶಿಕ್ಷಣದಲ್ಲಿ ನಾವು ಹಿಂದೆ ಬಿದ್ದಿಲ್ಲ. ಅತಿ ಹೆಚ್ಚು ಅಗ್ರಶೇಣಿ ಪಡೆದ ಜಿಲ್ಲೆ ಬೀದರ. ಇಂದು ಜಿಲ್ಲೆಯಿಂದ ಹೆಚ್ಚು ಪ್ರಮಾಣದಲ್ಲಿ ಐಐಟಿ, ವೈದ್ಯಕೀಯ, ಇಂಜಿನಿಯರಿಂಗ್‌ ವಿಭಾಗಕ್ಕೆ ಪ್ರವೇಶ ಪಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಫಲಿತಾಂಶದಲ್ಲಿ ಕೊನೆಯದೆಂಬ ಹಣಪಟ್ಟಿಯನ್ನು ತೊಡೆದು ಹಾಕಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಅಧಿಕಾರಿಗಳು ಹೆಚ್ಚು ಶ್ರಮ ವಹಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷ ಶಿವರಾಜ ಕಪಲಾಪುರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಅಧಿ ಕಾರಿಗಳು ಸ್ಪಂದನೆ ಮಾಡಿ ಬಗೆಹರಿಸಬೇಕೆಂದು ಮನವಿ ಮಾಡಿದರು. ವ್ಯವಸ್ಥಾಪಕ ಬಸವೇಶ್ವರ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಸಂಘದ ಗೌರವಾಧ್ಯಕ್ಷ ಬಂಡೆಪ್ಪಾ ಎಕಲಾರೆ ಪ್ರಾರ್ಥನೆ ಗೀತೆ ಪ್ರಸ್ತುಪಡಿಸಿದರು. ಪ್ರಧಾನ ಕಾರ್ಯದರ್ಶಿ ಏಜಾಜ್‌ ಅಹ್ಮದ ಸ್ವಾಗತಿಸಿದರು. ಯೋಗೇಂದ್ರ ಯದಲಾಪುರೆ ನಿರೂಪಿಸಿದರು. ಶೇಕ ಮೆಸ್ಸಿ ವಂದಿಸಿದರು. ಸಂಘದ ಪದಾ ಧಿಕಾರಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next