ಚಿಕ್ಕಬಳ್ಳಾಪುರ: ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಕಾಂಗ್ರೆಸ್) ಜಿಲ್ಲಾಧ್ಯಕ್ಷರನ್ನಾಗಿ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಎಸ್.ರಾಜಶೇಖರ್ ಹಾಗೂ ಉಪಾಧ್ಯಕ್ಷರನ್ನಾಗಿ ಶಾಹೀದ್ ಅಬ್ಟಾಸ್‌ರನ್ನು ನೇಮಿಸಲಾಗಿದೆ ಎಂದು ಎನ್‌ಎಸ್‌ಯುಐನ ರಾಜ್ಯ ಸಂಚಾಲಕ ಕುಂದುಲಗುರ್ಕಿ ಕೆ.ಎನ್.ಮುನೀಂದ್ರ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ನೂತನ ಜಿಲ್ಲಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಿಗೆ ನೇಮಕಾತಿ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಎನ್‌ಎಸ್‌ಯುಐ ಸಂಘಟನೆ ಜಿಲ್ಲಾದ್ಯಂತ ಸಂಘಟನೆಯನ್ನು ವಿಸ್ತರಿಸಿ ಹೋರಾಟ ನಡೆಸಲಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆ ಬರಪೀಡಿತ ಜಿಲ್ಲೆಯಾಗಿದ್ದು ಶೈಕ್ಷಣಿಕವಾಗಿ ಅಭಿವೃದ್ಧಿ ಆಗಬೇಕಾದರೆ ಮೊದಲು ಜಿಲ್ಲೆಯಲ್ಲಿ ಶಾಶ್ವತ ನೀರಾವರಿ ಸೇರಿದಂತೆ ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿಯನ್ನು ಅಭಿವೃದ್ಧಿಪಡಿಸಬೇಕಿದೆ. ಮೈತ್ರಿ ಸರ್ಕಾರ ತ್ವರಿತ ಗತಿಯಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕೆಂದರು.
ಎನ್‌ಎಸ್‌ಯುಐನ ನೂತನ ಜಿಲ್ಲಾಧ್ಯಕ್ಷ ಬಾಗೇಪಲ್ಲಿ ರಾಜಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಪದವಿ ಕಾಲೇಜು ಕಟ್ಟಡವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಬಾಗೇಪಲ್ಲಿ, ಗುಡಿಬಂಡೆ ಮತ್ತಿತರ ತಾಲೂಕುಗಳಲ್ಲಿ ಕೊರತೆ ಇರುವ ಶಿಕ್ಷಕರ ಕೊರತೆ ನೀಗಿಸಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕೋನಪಲ್ಲಿ ಕೋದಂಡ, ಯುವ ಮುಖಂಡರಾದ ಪಟ್ರೇನಹಳ್ಳಿ ಕೃಷ್ಣ, ವಿದ್ಯಾರ್ಥಿ ಕಾಂಗ್ರೆಸ್ ಘಟಕದ ವೆಂಕಟೇಶ್, ಲೋಕೇಶ್, ರಾಜಪ್ಪ, ನವೀನ್ ಕುಮಾರ್, ಅಶೋಕ್ ಇದ್ದರು.