Advertisement

ಆಶ್ರಯ ಒದಗಿಸಲು ಲಿಖೀತ ಭರವಸೆ ನೀಡಲು ಆಗ್ರಹ

06:05 PM Nov 21, 2017 | |

ದಾವಣಗೆರೆ: ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರ ನಿವಾಸಿಗಳಿಗೆ ಆಶ್ರಯ ಯೋಜನೆ ಮನೆ ಒದಗಿಸುವ ಬಗ್ಗೆ ಲಿಖೀತ ಭರವಸೆ ನೀಡಲು ಒತ್ತಾಯಿಸಿ ನಾಗರಿಕ ಮೂಲ ಸೌಕರ್ಯ ಹೋರಾಟ ವೇದಿಕೆ ನೇತೃತ್ವದಲ್ಲಿ ನೂರಾರು ಜನರು ಸೋಮವಾರ ನಗರ ಪಾಲಿಕೆ ಆವರಣದಲ್ಲಿ ಧರಣಿ ನಡೆಸಿದ್ದಾರೆ.

Advertisement

ರಾಮಕೃಷ್ಣ ಹೆಗಡೆ, ಚಂದ್ರೋದಯ ನಗರದಲ್ಲಿ ಕಳೆದ 30-40 ವರ್ಷದಿಂದ ವಾಸ ಇರುವರಿಗೆ ಆಶ್ರಯ ಮನೆ, ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಹಲವಾರು ಬಾರಿ ಹೋರಾಟ, ಸಂಬಂಧಿತರಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. 2 ವರ್ಷದಿಂದ ಹೋರಾಟ ನಡೆಸಿದಾಗ ಬೂಸನಹಟ್ಟಿಯಲ್ಲಿ ಮನೆ, ಹಕ್ಕುಪತ್ರದ ಜೊತೆಗೆ 20 ಸಾವಿರ ರೂಪಾಯಿ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಅದು ಈವರೆಗೆ ಕಾರ್ಯರೂಪಕ್ಕೆ ಬಂದಿಲ್ಲ. ಬೂಸನಹಟ್ಟಿಯಲ್ಲಿ 8+10 ಅಡಿ ಸುತ್ತಳತೆಯ ತಾತ್ಕಾಲಿಕ ಶೆಡ್‌ ಮಾಡಿಕೊಡುವುದಾಗಿ ಹೇಳಲಾಗಿದೆ. ಬೂಸನಹಟ್ಟಿ 9 ಕಿಲೋ ಮೀಟರ್‌ ದೂರ ಇದ್ದು, ಪ್ರತಿ ನಿತ್ಯ ಕೆಲಸ ಮಾಡುವರಿಗೆ
ಅನಾನುಕೂಲ ಆಗುತ್ತದೆ. ಹಾಗಾಗಿ ನಗರಕ್ಕೆ ಸಮೀಪ ಇರುವ ಕಡೆ ಮನೆ ಕಟ್ಟಿಸಿಕೊಡಬೇಕು ಎಂದು ಧರಣಿನಿರತರು ಒತ್ತಾಯಿಸಿದರು.

ನ. 13 ರಿಂದ ಅನಿರ್ದಿಷ್ಟಾವಧಿ ಹೋರಾಟ ಪ್ರಾರಂಭಿಸಿದ್ದ ಬೂಸನಹಟ್ಟಿ ಬಳಿ ಇರುವ 9 ಎಕರೆ ಜಾಗ ಬಿಟ್ಟರೆ ಬೇರೆ ಕಡೆ ಆಶ್ರಯ ಯೋಜನೆಯ ಜಾಗ ಬಿಟ್ಟರೆ ಬೇರೆ ಕಡೆ ಇಲ್ಲವೇ ಇಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ(ಆ. 22) ಸಲ್ಲಿಸಲಾಗಿದ್ದ ಅರ್ಜಿಗೆ ಮಾಹಿತಿ ನೀಡಲಾಗಿತ್ತು. ರಸ್ತೆ ತಡೆಸಿದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ಆಯುಕ್ತ ಬಿ.ಎಚ್‌. ನಾರಾಯಣಪ್ಪ ಅದೇ ಮಾತನ್ನು ಪುನರುಚ್ಚರಿಸಿದ್ದರು. ಪಟ್ಟು ಹಿಡಿದಾಗ ಈ ಹಿಂದೆಯೇ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ಹಿಂಬರಹ(ನ.16)ದಲ್ಲಿ ಬೂಸನಹಟ್ಟಿ ಬಳಿ ಇರುವ 9 ಎಕರೆ ಜಾಗದ ಜೊತೆಗೆ ಯರಗುಂಟೆ ಸರ್ವೇ ನಂಬರ್‌ 144/2 ಎ ರಲ್ಲಿ 5 ಎಕರೆ 36 ಗುಂಟೆ, ಸರ್ವೇ ನಂಬರ್‌ 33/2 ರಲ್ಲಿನ 1 ಎಕರೆ 5 ಗುಂಟೆ ಜಾಗ ಇದೆ ಎಂದು ಮಾಹಿತಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಶ್ರಯ ಯೋಜನೆಯಡಿ ಜಾಗ ಲಭ್ಯವಿದ್ದರೂ ಮಾಹಿತಿ ಹಕ್ಕು ಅರ್ಜಿಗೂ ಸುಳ್ಳು ಮಾಹಿತಿ ನೀಡಿರುವುದನ್ನ ನೋಡಿದರೆ ಸತ್ಯವನ್ನ ಮರೆ ಮಾಚಿ, ಜಾಗವನ್ನ ಬೇರೆಯವರಿಗೆ ನೀಡುವ ಹುನ್ನಾರ ಇರಬಹುದು ಎಂದೆನಿಸುತ್ತದೆ. ಹಾಗಾಗಿ ಮಹಾನಗರ ಪಾಲಿಕೆ ವ್ಯಾಪ್ತಿಯ 1ನೇ ವಾರ್ಡ್‌ನ ಯರಗುಂಟೆ ಸರ್ವೇ ನಂಬರ್‌ 144/2 ಎ ರಲ್ಲಿ 5 ಎಕರೆ 36 ಗುಂಟೆ, ಸರ್ವೇ ನಂಬರ್‌ 33/2 ರಲ್ಲಿನ 1 ಎಕರೆ 5 ಗುಂಟೆ ಜಾಗದಲ್ಲೇ ರಾಮಕೃಷ್ಣ ಹೆಗಡೆ ನಗರದ 270-280, ಚಂದ್ರೋದಯ ನಗರದ 100-110 ಕುಟುಂಬಗಳಿಗೆ ಆಶ್ರಯ ಯೋಜನೆ ಮನೆ ಒದಗಿಸುವ ಬಗ್ಗೆ ಲಿಖೀತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದರು. 

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌, ನಾಗರಿಕ ಮೂಲ ಸೌಕರ್ಯ ಹೋರಾಟ ವೇದಿಕೆ ಸಂಚಾಲಕ ಜೆ.
ಅಮಾನುಲ್ಲಾಖಾನ್‌, ಸಲೀಂಬಾಬ್‌, ಹಸೇನ್‌ ಸಾಬ್‌, ಖಾದರ್‌ ಬಾಷಾ, ಎಂ. ಟಿಪ್ಪುಸುಲ್ತಾನ್‌, ಯು.ಎಂ. ಮನ್ಸೂರ್‌ಅಲಿ, ಇನಾಯತ್‌ಅಲಿ, ಅಹಮ್ಮದ್‌ ಬಾಷಾ, ಅಕ್ರಮ್‌, ರಹಮತುಲ್ಲಾ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next