Advertisement

ಕಾಲುವೆಗೆ ನೀರು ಹರಿಸಲು ಮನವಿ

03:53 PM Jan 03, 2020 | Suhan S |

ರಾಮದುರ್ಗ: ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ಸುರೇಬಾನ ಹೊಬಳಿ ವ್ಯಾಪ್ತಿಯ ಹಂಪಿಹೊಳಿ, ರೇವಡಿಕೊಪ್ಪ, ಸುರೇಬಾನ, ಮನಿಹಾಳ, ಜಾಲಿಕಟ್ಟಿ, ಅವರಾದಿ, ಕಿತ್ತೂರ ಸೇರಿದಂತೆ ಇತರ ಗ್ರಾಮದ ರೈತರು ಗುರುವಾರ ಸುರೇಬಾನದ ನೀರಾವರಿ ಕಚೇರಿಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಮನವಿ ಸಲ್ಲಿಸಿದರು.

Advertisement

ಕಾಲುವೆ ನೀರು ನಂಬಿ ರೈತರು ಸಾಲ ಮಾಡಿ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದು, ಸರಿಯಾಗಿ ಕಾಲುವೆಗೆ ನೀರು ಬಾರದೇ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ಇದೇ ನೀರನ್ನು ನಂಬಿಕೊಂಡಿರುವ ಹಂಪಿಹೊಳಿ, ರೇವಡಿಕೊಪ್ಪ, ಸುರೇಬಾನ, ಮನಿಹಾಳ, ಜಾಲಿಕಟ್ಟಿ, ಕಿತ್ತೂರು, ಅವರಾದಿ ಇತರೆ ಹಳ್ಳಿಗಳ ರೈತರ ಪರಿಸ್ಥಿತಿಯೂ ಕೆಟ್ಟದಾಗಿದೆ. ಪ್ರತಿ ವರ್ಷ ಮಳೆಯಿಲ್ಲದೇ ಡ್ಯಾಮ್‌ ತುಂಬದೇ ಕಾಲುವೆಗೆ ನೀರು ಬಿಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದರು. ಈ ವರ್ಷ ಚೆನ್ನಾಗಿ ಮಳೆ ಆಗಿ ಡ್ಯಾಮ್‌ ಭರ್ತಿ ಆದರೂ ರೈತರ ಭೂಮಿಗೆ ನೀರು ತಲುಪುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿರಸಂಗಿ ಉಪವಿಭಾಗಕ್ಕೆ ಬರುವ 26 ನೇಯ ಹಂಚು ಕಾಲುವೆಯಿಂದ ಇಪ್ಪತ್ತು ವರ್ಷಗಳಿಂದ ಈ ಕಾಲುವೆಗೆ ನೀರು ಬರದೇ ರೈತರು ಸಂಕಷ್ಟ ಅನುಭವಿಸಿದ್ದಾರೆ. ಕಳೆದೆರಡು ವರ್ಷಗಳಿಂದ ನೀರು ಪೂರೈಕೆಯಾಗುತ್ತಿದ್ದು ಆ ನೀರನ್ನು ನಂಬಿ ಬೀಜ ಗೊಬ್ಬರ ಖರೀದಿಸಿ ಬಿತ್ತನೆ ಮಾಡಿದ್ದೇವೆ. ಆದರೇ ನೀರಿಲ್ಲದೇ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಕೂಡಲೇ ನೀರು ಪೂರೈಸಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು, ರೈತರ ಜಮೀನಿಗೆ ವಾರಬಂದಿ ಪ್ರಕಾರ ನೀರು ಪೂರೈಕೆ ಮಾಡಲಾಗುತ್ತಿದೆ. ಇಂದಿನಿಂದ ಸ್ವತಃ ನಾನೇ ಕಾಲುವೆಯ ಮೇಲೆ ಸಂಚರಿಸಿ ನೀರು ವಂಚಿತರಾದ ರೈತರಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ರೈತರು ಸಹಕಾರ ನೀಡಬೇಕು ಎಂದರು. ಮುದಕಪ್ಪ ದುಲಾರಿ, ಎಸ್‌.ಪಿ. ಹಿರೇಮಠ, ಅಡಿವೆಪ್ಪ ಬೆಳಗಂಟಿ, ಭೀಮಪ್ಪ ಬಡಕಲಿ, ವಿಷ್ಣು ಚಿಕ್ಕನರಗುಂದ, ಡಿ.ಕೆ.ಅಂಗಡಿ, ಐ.ಎನ್‌. ಅಂಗಡಿ, ಎಂ.ಸಿ. ಅಂಗಡಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next