Advertisement

ಚುನಾವಣೆಯಲ್ಲಿ ಮತಪತ್ರ ಬಳಸಲು ಆಗ್ರಹ

09:41 AM Jan 26, 2019 | Team Udayavani |

ಮಂಡ್ಯ: 2019ರ ಲೋಕಸಭಾ ಚುನಾವಣೆಯಲ್ಲಿ ಇವಿಎಂ ಬಳಸದೆ ಮತ ಪತ್ರಗಳನ್ನು ಬಳಸಿ ಚುನಾವಣೆ ನಡೆಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಕಾರ್ಯಕರ್ತರು, ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಮೂಲಕ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಅತ್ಯಂತ ಹೆಚ್ಚಿನ ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಆಶ್ಚರ್ಯ ಮತ್ತು ಅನುಮಾನ ಉಂಟಾಗಿತ್ತಾದರೂ, ಅದನ್ನು ಒಪ್ಪಿಕೊಳ್ಳಲಾಯಿತು. ಬಳಿಕ ನಡೆದ ಬೇರೆಬೇರೆ ರಾಜ್ಯಗಳ ಚುನಾವಣಾ ಫಲಿತಾಂಶಗಳು ಮಾತ್ರ ಭಾರತೀಯರೆಲ್ಲರನ್ನೂ ದಿಗ್ಬ್ರಾಂತಗೊಳಿಸಿದವು. 2014ರ ಚುನಾವಣೆಯ ಮೇಲಿನ ಅನುಮಾನಗಳು ಖಾತ್ರಿಗೊಳಿಸಿ ಮತದಾನ ಯಂತ್ರಗಳ ಮೇಲೆ ಅನುಮಾನ ತೀವ್ರಗೊಂಡವು ಎಂದು ದೂರಿದರು.

ಮತಯಂತ್ರಗಳಿಗೆ ಕನ್ನ: 2017ರಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆ ಮಾತ್ರ ಇವಿಎಂನಿಂದಲೇ ಬಿಜೆಪಿ ಗೆಲ್ಲುತ್ತಿದೆ ಎಂಬುದನ್ನು ಸಾಬೀತುಪಡಿಸಿತು. ಇದಕ್ಕೆ ಪೂರಕವಾಗಿ ಅಮೆರಿಕಾದ ಸೈಬರ್‌ ಪರಿಣಿತ ಸೈಯದ್‌ ಶುಖಾ ಲಂಡನ್‌ನಲ್ಲಿ ಇವಿಎಂಗಳನ್ನು ಹ್ಯಾಕ್‌ ಮಾಡಬಹುದು ಎಂಬುದನ್ನು ತೋರಿಸಿದರು. ಬಿಜೆಪಿ ನಾಯಕ ಗೋಪಿನಾಥ್‌ ಮುಂಡೆ ಅವರಿಗೆ ಮತಯಂತ್ರಗಳಿಗೆ ಕನ್ನ ಹಾಕುವ ಬಗ್ಗೆ ತಿಳಿದಿತ್ತು. ಅದಕ್ಕಾಗಿ 2014ರಲ್ಲಿ ಅವರನ್ನು ಕೊಲ್ಲಲಾಯಿತು. ಉತ್ತರಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಮತಯಂತ್ರಗಳ್ನು ತಿರುಚಿಸಲಾಗಿತ್ತು. ಇವಿಎಂ ಹ್ಯಾಕ್‌ ಮಾಡಲು ಕಡಿಮೆ ಫ್ರಿಕ್ವೆನ್ಸಿ ಸಿಗ್ನಲ್‌ಗ‌ಳನ್ನು ರಿಲಿಯನ್ಸ್‌ ಜಿಯೋ ನೀಡಿದೆ ಎಂದು ಶುಖಾ ಹೇಳಿದ್ದಾರೆ. ಟ್ರಾನ್ಸ್‌ಮಿಷನ್‌ ನಿಲ್ಲಿಸಿದ ಪರಿಣಾಮ ಮಧ್ಯಪ್ರದೇಶ, ಛತ್ತೀಸ್‌ಘಡ, ರಾಜಸ್ತಾನಗಳಲ್ಲಿ ಬಿಜೆಪಿ ಸೋಲಲು ಕಾರಣವಾಯಿತು ಎಂದು ಆರೋಪಿಸಿದರು.

ಪ್ರಜಾಪ್ರಭುತ್ವದ ಕಗ್ಗೊಲೆ: ಪ್ರಜಾಪ್ರಭುತ್ವ ವಿರೋಧಿ ಕೃತ್ಯವನ್ನು ತಮ್ಮ ಅಧಿಕಾರದ ಆಸೆಗೋಸ್ಕರ ಮಾಡುತ್ತಾರೆಂದರೆ ಇದಕ್ಕಿಂತ ರಾಷ್ಟ್ರದ್ರೋಹದ ಕೆಲಸ ಬೇರೊಂದಿಲ್ಲ. ಪ್ರಜಾ ಪ್ರಭುತ್ವದ ಅಡಿಪಾಯವಾದ ಮತದಾನವನ್ನೇ ಕಳ್ಳತನ ಮಾಡುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಹಾಗೂ ಇವಿಎಂಗಳ ಮೇಲಿನ ಅನುಮಾನ ದಿನೇದಿನೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಇವಿಎಂ ಬಳಸದಂತೆ ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮುಖಂಡರಾದ ಎಸ್‌.ಸಿದ್ದಯ್ಯ, ಹೆಚ್.ಎಸ್‌.ನರಸಿಂಹಮೂರ್ತಿ, ನಲ್ಲಹಳ್ಳಿ ಸುರೇಶ್‌, ಬಿ.ಕೆ.ರಾಜು, ಎಂ.ಎಸ್‌.ವೆಂಕಟೇಶ್‌, ಎಚ್.ಸಿ.ಸತೀಶ್‌, ಅಭಿಗೌಡ, ಜಗದೀಶ್‌, ಶಿವಶಂಕರ್‌ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next