ಇಂಡಿ: ಸ್ಥಳೀಯ ಆಡಳಿತ ಚುನಾವಣೆಗಳು ಅತ್ಯಂತ ಪ್ರಮುಖವಾಗಿದ್ದು ಸಾರ್ವಜನಿಕ ಬದುಕಿನಲ್ಲಿ ಒಳ್ಳೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವದು ಮತದಾರರ ಕರ್ತವ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಗಿಂತ ಪಕ್ಷ ದೊಡದ್ದು. ವ್ಯಕ್ತಿಗಳ ವೈಭವೀಕರಣದಿಂದ ಪ್ರಜಾಪ್ರಭುತ್ವ ಕಗ್ಗೋಲೆ ಮಾಡಿದಂತಾಗುತ್ತದೆ ಎಂದು ಪರೋಕ್ಷವಾಗಿ ಬೆಜೆಪಿ ಮೇಲೆ ಹರಿಹಾಯ್ದರು.
ಇಂಡಿ ಪಟ್ಟಣದ ಪುರಸಭೆಗೆ 23 ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಗುರುತರ ಜವಾಬ್ದಾರಿ ಮತದಾರರ ಮೇಲಿದೆ. ರಾಜ್ಯದ ಗಡಿ ಭಾಗದಲ್ಲಿರುವ ತಾಲೂಕಿಗೆ ಕಳೆದ ಬಾರಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ.
ನನ್ನ ಅಧಿಕಾರ ಅವಧಿಯಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ರಸ್ತೆಗಳ ಸುಧಾರಣೆ, ಸಿಟಿ ಲೈಟ್, ರಸ್ತೆ ವಿಭಜಕ, ಫುಟ್ಪಾತ್, ನಗರ ಸೌಂದರ್ಯಿಕರಣಕ್ಕೆ ಒತ್ತು ಕೊಡಲಾಗಿದೆ. ಶೈಕ್ಷಣಿಕ ಪ್ರಗತಿಗೆ ವಿಜಯಪುರ ರಸ್ತೆಯಲ್ಲಿ ಆದರ್ಶ ಶಾಲೆ, ಉರ್ದು ಮಾಧ್ಯಮ ಶಾಲೆ, ಡಿಗ್ರಿ ಕಾಲೇಜು, ಐಟಿಐ ಕಾಲೇಜು ತೆರೆದು ನಗರಕ್ಕೆ ವಿದ್ಯಾಗಿರಿ ಎಂದು ಹೆಸರಿಡಲಾಗಿದೆ ಎಂದರು.
ಬಹು ದಿನಗಳಿಂದ ನಗರಕ್ಕೆ ಒಂದು ಪಪೂ ಕಾಲೇಜು ಮಂಜೂರಾತಿ ತಂದಿರಲಿಲ್ಲ. ನಾನು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಇಂದು ಮಂಜೂರಾತಿ ತಂದಿರುವೆ. ತಾಲೂಕಾಡಳಿತ ಪರವಾಗಿ ರಾಷ್ಟ್ರೀಯ ಕಾರ್ಯಕ್ರಮಗಳು, ಕ್ರೀಡೆಗಳು ನಡೆಯಬೇಕಾದರೆ ಸ್ಥಳದ ಕೊರತೆ ಕಂಡು ಬಂದಾಗ ತಾಲೂಕು ಕ್ರೀಡಾಂಗಣ ಮತ್ತು ರಾಜ್ಯ, ರಾಷ್ಟ್ರ ನಾಯಕರ ಆಗಮನಕ್ಕೆ ಹೆಲಿಪ್ಯಾಡ್ ನಿಲ್ದಾಣ ಅಗತ್ಯವಿತ್ತು. ಇದನ್ನು ಕೂಡಾ ಕ್ರೀಡಾಂಗಣದ ಕೂದಲೆಳೆ ಅಂತರದಲ್ಲಿಯೇ ಹೆಲಿಪ್ಯಾಡ್ ನಿಲ್ಲುವ ಸ್ಥಳ ನಿರ್ಮಾಣ ಮಾಡಲಾಗಿದೆ. ಬಸ್ ಡಿಪೊ 17 ವರ್ಷಗಳಿಂದ ಮಂಜೂರಾತಿ ಆದರೂ ಸೂಕ್ತ ಜಾಗ ಇರಲಿಲ್ಲ. ಇಂದು ಬಸ್ ಡೀಪೊ ಸ್ಥಾಪಿಸಲಾಗಿದೆ ಎಂದರು.
ಪಟ್ಟಣಕ್ಕೆ ಕುಡಿಯುವ ನೀರಿನ ತೊಂದರೆ ಇರುವದನ್ನು ಅರಿತ ಧೂಳಖೇಡ ಭೀಮಾನದಿಯಿಂದ ಇಂಡಿ ಪಟ್ಟಣಕ್ಕೆ 24×7 ಶುದ್ಧ ಕುಡಿಯುವ ನೀರಿನ ಯೋಜನೆ ಮಾಡಲಾಗಿದೆ. ಜನೆವರಿಯಲ್ಲಿ ಶುದ್ಧ ಕುಡಿಯುವ ನೀರು ಒದಗಿಸಲಾಗುವದು. ಪಟ್ಟಣದ 8,900 ಮನೆಗಳಿಗೆ ಸರಕಾರದಿಂದಲೇ ಹಣ ಭರಿಸಿ ಹೌಸ್ ಕನೆಕ್ಷನ್ ಒಳಚರಂಡಿ ಯೋಜನೆ ನಿರ್ಮಾಣ ಮಾಡಲಾಗುವದು. ರಸ್ತೆ ತೆರವು ಕಾರ್ಯಾಚರಣೆ ಮಾಡುವಾಗ ಅನೇಕ ವ್ಯಾಪಾರಸ್ಥರಿಗೆ ಮೆಗಾ ಮಾರುಕಟ್ಟೆ ನಿರ್ಮಾಣ ಮಾಡಿಕೊಡುವದಾಗಿ ಭರವಸೆ ನೀಡಿದ್ದೆ. ಪುರಸಭೆ ಚುನಾವಣೆ ನಂತರ ಟೆಂಡರ್ ಕರೆದು 15 ತಿಂಗಳಲ್ಲಿ ಕಾಮಗಾರಿ ಪೂರ್ಣಗೋಳಿಸಿ ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡಲಾಗುವದು ಎಂದರು.
ಪಟ್ಟಣದ ಸಮಗ್ರ ಅಭಿವೃದ್ಧಿಗೆ ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಮನವಿ ಮಾಡಿದ ಅವರು, ಈ ಬಾರಿಯೂ 19ರಿಂದ 20 ಅಭ್ಯರ್ಥಿಗಳು ಪುರಸಭೆಗೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ಭೀಮಾಶಂಕರ ಮುರಗುಂಡಿ, ಅನಿಲ ಕುಲಕರ್ಣಿ, ಸಾಂಬಾಜಿರಾವ್ ಮಿಸಾಳೆ, ಜಟ್ಟೆಪ್ಪ ರವುಳಿ, ಶ್ರೀಕಾಂತ ಕುಡಿಗನೂರ, ಅನಿಲ ಏಳಗಿ, ಅಂತೂ ಜೈನ್, ಪ್ರಶಾಂತ ಕಾಳೆ, ಇಲಿಯಾಸ್ ಬೋರಾಮಣಿ, ಜಾವೀದ್ ಮೂಮಿನ್, ರುಕ್ಮುದ್ದಿನ್ ತದೇವಾಡಿ, ಅವಿನಾಶ ಬಗಲಿ ಇದ್ದರು.