ಗೋಕಾಕ: ನಗರದಲ್ಲಿ 24×7 ಕುಡಿಯುವ ನೀರಿನ ಯೋಜನೆಯ ಗುತ್ತಿಗೆ ಪಡೆದಿರುವ ಜೈನ ಇರ್ರಿಗೇಶನ್ ಕಂಪನಿ ಕಚೇರಿ ವಿರುದ್ಧ ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಘೇರಾವ್ ಹಾಕಿದ ಘಟನೆ ಗುರುವಾರ ನಡೆಯಿತು.
ನಗರದಲ್ಲಿ ಪೂರೈಸುತ್ತಿರುವ ನಳಗಳ ಬಿಲ್ ವಿಪರೀತ ಹೆಚ್ಚು ಬರುತ್ತಿದೆ. ಝೋನ-4ರಲ್ಲಿ ಸರಿಯಾಗಿ ನೀರೇ ಬರುತ್ತಿಲ್ಲ. ಜನಸಾಮಾನ್ಯರು ತಮ್ಮ ಸಮಸ್ಯೆಗಳನ್ನು ಹೊತ್ತು ಆಫೀಸಿಗೆ ಬಂದರೆ ಅವರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನದಿಯಲ್ಲಿ ಸಾಕಷ್ಟು ನೀರು ಇದ್ದರೂ ಸಹ ಸರಿಯಾಗಿ ಶುದ್ಧೀಕರಣ ಮಾಡುತ್ತಿಲ್ಲ. ಇದರಿಂದ ವಾಂತಿಭೇದಿ ಆದಿ ರೋಗಗಳು ಕಾಣಿಸುತ್ತಿವೆ ಎಂದು ಆರೋಪಿಸಿದರು.
ಅಮೂಲ್ಯವಾದ ನೀರಿನ ಬಗ್ಗೆ ತಿಳುವಳಿಕೆ ನೀಡುವ ಕಾರ್ಯವನ್ನು ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು (ಎನ್‌ಜಿಒಗಳು) ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇವೆಲ್ಲವುಗಳನ್ನು ಬರುವ ಸೆ. 24ರೊಳಗಾಗಿ ಸರಿಪಡಿಸದಿದ್ದರೆ ಕುಡಿಯುವ ನೀರು ಪೂರೈಕೆ ಕಾರ್ಯವನ್ನು ನಗರಸಭೆಗೆ ವಹಿಸಿಕೊಳ್ಳುವಂತೆ ಕ್ರಮ ಕೈಕೊಳ್ಳುವಂತೆ ನಿರ್ಣಯಿಸಲಾಗುವುದು. ಅಲ್ಲದೆ ನೀರಿನ ಬಿಲ್ ಹೆಚ್ಚಿಗೆ ಬಂದ ಗ್ರಾಹಕರ ಸಮಸ್ಯೆಗಳನ್ನು ತಕ್ಷಣವೇ ಸರಿ ಪಡಿಸಬೇಕು ಎಂದು ಎಚ್ಚರಿಕೆ ನೀಡಿದರು.
ಅಲ್ಲದೆ ಈಗಾಗಲೆ ನೀರು ಬಳಕೆಯ ಮಿತಿ 8000 ಲೀಟರ್ ಇದ್ದುದನ್ನು 12000 ಲೀಟರ್ ಗೆ ಏರಿಸುವಂತೆ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದು ಸೇರಿದ ನಗರಸಭೆ ಸದಸ್ಯರು ತಿಳಿಸಿದರು. ಈ ಬಗ್ಗೆ ಅವಶ್ಯಕ ಕ್ರಮ ಕೈಕೊಳ್ಳುವ ಭರವಸೆ ನೀಡಿದ್ದರಿಂದ ಘೆರಾವ ಹಿಂತೆಗೆದುಕೊಳ್ಳಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಗಿರೀಶ ಖೋತ, ಕುತುಬುದ್ದೀನ ಗೋಕಾಕ, ಜಯಾನಂದ ಹುಣಶ್ಯಾಳಿ, ಸಂತೋಷ ಮಂತ್ರಣ್ಣವರ, ಮಹಮ್ಮದಯುಸೂಫ ಅಂಕಲಗಿ, ಶ್ರೀಶೆ„ಲ ಯಕ್ಕುಂಡಿ, ಪ್ರಕಾಶ ಮುರಾರಿ, ಬಸವರಾಜ ಆರೆನ್ನವರ, ಮುಖಂಡರಾದ ಜ್ಯೋತಿಬಾ ಸುಭಂಜಿ, ದುರಗಪ್ಪ ಶಾಸ್ತ್ರಿಗೊಲ್ಲರ, ಶಿವಾನಂದ ಹತ್ತಿ, ವಿಜಯಕುಮಾರ ಜತ್ತಿ, ಯಲ್ಲಪ್ಪ ಹಳ್ಳೂರ ಸೇರಿದಂತೆ ಅನೇಕರು ಇದ್ದರು.